ಕಾಂಗ್ರೆಸ್ ಕಾರ್ಯಕರ್ತ ಹಕೀಂ ಕೂರ್ನಡ್ಕಗೆ ಗಡೀಪಾರು ಆದೇಶ ನೋಟೀಸ್ ನೀಡಿದ ಬೆನ್ನಲ್ಲೇ ಇದೀಗ ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಸಾರ್ವಜನಿಕವಾಗಿ ಪಿಸ್ತೂಲ್ ಹಿಡಿದ ಶಾಸಕ ಅಶೋಕ್ ರೈಯನ್ನು ಮೊದಲು ಗಡೀಪಾರು ಮಾಡಲಿ’ ಎಂದು ಕಿಡಿಕಾರಿದ್ದಾರೆ.
ಪುತ್ತೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, “ಪುತ್ತೂರು ಪೊಲೀಸರು ಸಹಾಯಕ ಆಯುಕ್ತರಿಗೆ ನನ್ನ ಮೇಲೆ ಇರುವ ಸುಳ್ಳು ದೂರುಗಳ ಮಾಹಿತಿ ನೀಡಿದ್ದಾರೆ. ಅಶೋಕ್ ರೈ ವಿರುದ್ಧ ಮಾತನಾಡಿದ್ರೆ ನಿಮ್ಮನ್ನ ಗಡೀಪಾರು ಮಾಡುತ್ತೇವೆಂದು ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಈ ಹಿಂದೆ ಹೇಳಿದ್ದರು. ಇದೀಗ ಯಾವುದೇ ಗುಂಪು ಗಲಭೆ, ಕೋಮುಗಲಭೆ, ಹಲ್ಲೆ, ಹತ್ಯೆ, ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಗಳಲ್ಲಿ ಇಲ್ಲದ ನನ್ನನ್ನು ಯಾಕೆ ಬೀದರ್ ಜಿಲ್ಲೆಗೆ ಗಡೀಪಾರು ಮಾಡಬಾರದು ಎಂದು ಕೇಳಿ ನೋಟಿಸ್ ನೀಡಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
“ನನ್ನ ಗಡೀಪಾರು ನೋಟಿಸ್ ಹಿಂದೆ ಶಾಸಕ ಅಶೋಕ್‌ರೈ ಅವರ ಕೈವಾಡವಿದೆ. ಮುಸಲ್ಮಾನರ ಮತ ಪಡೆದು ಗೆದ್ದಿರುವ ಅಶೋಕ್ ರೈ ಮುಸಲ್ಮಾನರಿಗೆಯೇ ಅನ್ಯಾಯ ಮಾಡುತ್ತಾ ಇದ್ದಾರೆ. ಇತ್ತೀಚೆಗೆ ಹತ್ಯೆಯಾದ ರಹೀಂ ಮನೆಗೆ ಸಾಂತ್ವನ ಹೇಳಲು ಅಶೋಕ್ ರೈ ಯಾಕೆ ಹೋಗಿಲ್ಲ?, ಜಿಲ್ಲಾ ಉಸ್ತುವಾರಿ ಸಚಿವರು ಮಂಗಳೂರಿಗೆ ಬಂದಿರುವಾಗ ಅಶೋಕ್ ರೈ ಗೈರಾಗಿದ್ದರು. ಯಾಕಂದ್ರೆ ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ರಹೀಂ ಮನೆಗೆ ಸಾಂತ್ವನ ಹೇಳಲು ಹೋಗಬೇಕಾಗಬಹುದು, ಸಾಂತ್ವನ ಹೇಳಲು ಹೋದ್ರೆ ನನಗೆ ಹಿಂದೂಗಳ ಮತ ಸಿಗಲ್ಲ ಎಂಬುದು ಅವರ ಮನಸ್ಸಲ್ಲಿದೆ. ಅಶೋಕ್ ರೈಗಳೇ, ನೀವು ನನ್ನ ಶ್ರಮದ ಬೆವರಿನಿಂದ ಶಾಸಕರಾಗಿದ್ದೀರಿ. ಮುಂದಿನ ಬಾರಿ ನಿಮ್ಮನ್ನ ನಾನು ಮಾಜಿ ಶಾಸಕನಾಗಿ ಮಾಡ್ತೇನೆ. ನೀವು ಒಂದು ಗ್ರಾಮ ಪಂಚಾಯತ್ ಚುನವಣೆಯಲ್ಲೂ ನಿಂತರೂ ಸೋಲಿಸುತ್ತೇನೆ” ಎಂದು ಸವಾಲು ಹಾಕಿದ್ದಾರೆ.
“ನನ್ನನ್ನು ಗಡೀಪಾರು ಮಾಡುವ ಮೊದಲು ಅಶೋಕ್ ರೈ ಅವರನ್ನ ಗಡಿಪಾರು ಮಾಡಬೇಕು. ಅಶೋಕ್ ರೈ ಸಾರ್ವಜನಿಕ ಸ್ಥಳದಲ್ಲಿ ಪಿಸ್ತೂಲ್ ಹಿಡಿದು ಜನರನ್ನ ಬೆದರಿಸಿದವರು. ಅಶೋಕ್ ರೈಗಳ ಜೊತೆ ಇರುವವರ ಪೈಕಿ ಜಲೀಲ್ ಕರೋಪಾಡಿ ಹತ್ಯೆ ಪ್ರಕರಣದ ಆರೋಪಿಗಳು. ಯಾಕೆ ಅವರನ್ನ ಗಡೀಪಾರು ಮಾಡಿಲ್ಲ. ಪ್ರಜ್ವಲ್ ರೈ, ದೀಕ್ಷಿತ್ ರೈ ಅವರನ್ನ ಗಡೀಪಾರು ಮಾಡಲಿ. ಅಶೋಕ್ ರೈ ಜೊತೆ ಇರುವವರು ಉಪ್ಪಿನಂಗಡಿಯಲ್ಲಿ ತಲ್ವಾರ್ ಕಾಳಗ ಮಾಡಿದವರು. ಅವರ ಮೇಲೆ ಪ್ರಕರಣ ದಾಖಲಾಗಿದೆಯಾ” ಎಂದು ಪ್ರಶ್ನಿಸಿದ್ದಾರೆ.