ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಆಯಾ ಜಿಲ್ಲಾ ಕೆಂದ್ರಗಳಲ್ಲಿ ಕಾಂಗ್ರೆಸ್ ಸಮಿತಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗಿದೆ.
ಬಿಜೆಪಿಯವರು ಮಾಡುತ್ತಿರುವ ಅಕ್ಕಿ ರಾಜಕೀಯದ ಬಗ್ಗೆ ಸಾಮಾನ್ಯ ಜನರಿಗೆ ತಿಳಿಸಲು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೂಚನೆಯಂತೆ ರಾಜ್ಯಾದ್ಯಂತ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಗಿದೆ.
“ಜುಲೈ 1ರಿಂದ ಪ್ರತಿ ತಿಂಗಳೂ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಇದಕ್ಕೂ ಮುನ್ನ ಕೇಂದ್ರ ಆಹಾರ ನಿಗಮ ಅಕ್ಕಿ ಪೂರೈಸಲು ಒಪ್ಪಿಗೆ ಸೂಚಿಸಿತ್ತು. ಆದರೆ, ಈಗ ಏಕಾಏಕಿ ಅಕ್ಕಿ ಕೊಡುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರದ ಬಡವರ ಪರವಾದ ಮಹತ್ವಕಾಂಕ್ಷಿ ಯೋಜನೆಯನ್ನು ವಿಫಲಗೊಳಿಸಲು ಕೇಂದ್ರ ಸರ್ಕಾರ ಹುನ್ನಾರ ನಡೆಸಿದೆ” ಎಂದು ರಾಜ್ಯಾದ್ಯಂತ ಆರೋಪ ವ್ಯಕ್ತವಾಗಿದೆ.
ಕಲಬುರಗಿ : “ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ನೀಡಿದ ಭರವಸೆಯಂತೆ 10 ಕೆಜಿ ಅಕ್ಕಿ ನೀಡುವ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಯಿತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದನ್ನು ಸಹಿಸಲಾಗದ ಕೇಂದ್ರ ಬಿಜೆಪಿ ಸರ್ಕಾರ ಅದರ ಅಧೀನ ಸಂಸ್ಥೆಯಾದ ಎಫ್‌ಸಿಐಗೆ ಅಕ್ಕಿಯನ್ನು ನೀಡದಂತೆ ತಾಕೀತು ಮಾಡಿದೆ” ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದರು.
ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಎಂ ಖರ್ಗೆ, ಸಚಿವ ಡಾ ಶರಣಪ್ರಕಾಶ ಆರ್ ಪಾಟೀಲ, ಶಾಸಕ ಡಾ. ಆಜಯಸಿಂಗ್, ಕನೀಜ ಸಾತಿಮಾ, ಎಂ ವೈ ಪಾಟೀಲ್, ಬಿ ಆರ್ ಪಾಟೀಲ್, ಅಲ್ಲಮಪ್ರಭು ಪಾಟೀಲ್ ಪ್ರತಿಭಟನೆಯಲ್ಲಿ ಇದ್ದರು.
ಬೆಳಗಾವಿ : “ಅನ್ನಭಾಗ್ಯ ಯೋಜನೆ ಜಾರಿಗೊಳಿಸುವುದನ್ನು ಸಹಿಸದ ಕೇಂದ್ರ ಅಕ್ಕಿ ಕೊಡಲು ನಿರಾಕರಿಸಿದ್ದು, ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ. ಮುಂದಿನ ದಿನಗಳಲ್ಲಿ ಬಡಜನರ ಶಾಪ ತಟ್ಟುವುದೇ ಬಿಡುವುದಿಲ್ಲ” ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಬೆಳಗಾವಿಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಶಾಸಕರುಗಳಾದ ಆಸಿಫ್ ಶೇಟ್, ಸವದತ್ತಿ ಶಾಸಕ ವಿಶ್ವಾಸ ವೈದ್ಯ, ಕಿತ್ತೂರ ಶಾಸಕ ಬಾಬಾ ಸಾಹೆಬ್ ಪಾಟಿಲ ಸೇರಿದಂತೆ ಬಹುತೇಕ ಕಾರ್ಯಕರ್ತರು ಇದ್ದರು.
ರಾಯಚೂರು : “ಬಡವರು ಹಸಿವಿನಿಂದ ಸಾಯಬಾರದು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ತಲಾ 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಲು ಮುಂದಾಗಿದ್ದು, ಹೆಚ್ಚುವರಿ ಅಕ್ಕಿ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರ ಸಹಕಾರ ನೀಡದೇ ಬಡವರ ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ” ಎಂದು ಶಾಸಕ ಬಸನಗೌಡ ದದ್ದಲ್ ಆರೋಪಿಸಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ ವಸಂತ ಕುಮಾರ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಕೆ ಶಾಂತಪ್ಪ, ಬ್ಲಾಕ್ ಅಧ್ಯಕ್ಷ ಮಲ್ಲಿಕಾರ್ಜುನಗೌಡ, ಕೆ ಪಂಪಾಪತಿ, ಚಂದ್ರಶೇಖರ ಪಾಟೀಲ, ಜಾಫರ್ ಅಲಿ ಪಟೇಲ್, ಬಸವರಾಜ, ವೆಂಕಟೇಶ, ಶಿವಪ್ಪ ನಾಯಕ ಸೇರಿದಂತೆ ಕಾರ್ಯಕರ್ತರು ಇದ್ದರು.
ಧಾರವಾಡ : “ಬಡವರ ಅಕ್ಕಿಯಲ್ಲೂ ರಾಜಕಾರಣ ಮಾಡುವ ಬಿಜೆಪಿ ಬಡವರ ವಿರೋಧಿಯಾಗಿದೆ. ವಿರೋಧಗೈದರೂ 10 ಕೆಜಿ ಅಕ್ಕಿ, ಅನ್ನಭಾಗ್ಯ ಯೋಜನೆ ಯಶಸ್ಸನ್ನು ಸಾಧಿಸುತ್ತದೆ” ಎಂದು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ತಿಳಿಸಿದರು.
ಹಾವೇರಿ : “ಬಡವರು ತಿನ್ನುವ ಅಕ್ಕಿಯ ಮೇಲೆ ಕೀಳು ರಾಜಕಾರಣ ಮಾಡುತ್ತಿರುವ ನಿಮಗೆ ಅವರ ಹಿಡಿ ಶಾಪ ತಟ್ಟದೆ ಬಿಡದು. ನಾವೇನು ಕೇಂದ್ರದ ಬಳಿ ಭಿಕ್ಷೆ ಬೇಡುತ್ತಿಲ್ಲ, ನ್ಯಾಯಯುತವಾಗಿ ನಮಗೆ ಸೇರಬೇಕಾದ ಅಕ್ಕಿಯ ಪಾಲನ್ನು ಕೇಳುತ್ತಿದ್ದೇವೆ” ಎಂದು ಶಾಸಕ ಪ್ರಕಾಶ ಕೋಳಿವಾಡ ಆಕ್ರೋಶ ವ್ಯಕ್ತಪಡಿಸಿದರು.
ಹಾಸನ : ಅನ್ನಭಾಗ್ಯ ಯೋಜನೆ ಜಾರಿಗೊಳಿಸಲು ಅಕ್ಕಿ ನೀಡಲು ಕೇಂದ್ರ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಾಸಕ ಕೆ ಎಂ ಶಿವಲಿಂಗೇಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇ ಎಚ್ ಲಕ್ಷ್ಮಣ್ ಸೇರಿದಂತೆ ಹಲವು ಮುಖಂಡರು ಇದ್ದರು.
ಬೀದರ್ : ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ನೀಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ ಸೇರಿದಂತೆ ಬಹುತೇಕ ಕಾರ್ಯಕರ್ತರು ಇದ್ದರು.
ಅಕ್ಕಿ ನಿರಾಕರಣೆ; ಖಾಲಿ ತಟ್ಟೆ ಹಿಡಿದು ಆಕ್ರೋಶ
ಕೊಡಗು : “ಕೇಂದ್ರ ಆಹಾರ ನಿಗಮವು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕು ಎಂಬ ನೆಪ ಹೂಡಿ ₹2,400 ದರವನ್ನು ಪ್ರತಿ ಕ್ವಿಂಟಲ್‌ಗೆ ನಿಗದಿಪಡಿಸಿದೆ. ಆದರೆ, ಮುಕ್ತ ಮಾರುಕಟ್ಟೆಯಲ್ಲಿ ಖರೀದಿಯೇ ನಡೆಯುತ್ತಿಲ್ಲ. ರಾಜ್ಯ ಸರ್ಕಾರ ಹಣ ಕೊಡಲು ಸಿದ್ಧವಿದ್ದರೂ ಅಕ್ಕಿ ಕೊಡುತ್ತಿಲ್ಲ” ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಟಿ ಪಿ ರಮೇಶ, ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜಾ ಉತ್ತಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್, ಪಾಲಿಕೆ ಸದಸ್ಯ ರಾಜೇಶ್ ಯಲಪ್ಪ, ಮುಖಂಡರುಗಳಾದ ನವೀನ್, ರಂಜಿ ಪೂಣಚ್ಚ, ಹಂಜ್ಹ, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಇದ್ದರು.
ಉಡುಪಿ : “ಬಡವರು ಹಸಿವಿನಿಂದ ಇರಬಾರದು ಬಡವರ ಹೊಟ್ಟೆ ತುಂಬಬೇಕು, ಕರ್ನಾಟಕ ಹಸಿವು ಮುಕ್ತ ರಾಜ್ಯ ಆಗಬೇಕೆಂಬ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚುನಾವಣೆಗೂ ಮೊದಲೇ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ಮತದಾರರಿಗೆ ಆಶ್ವಾಸನೆ ನೀಡಿದ್ದರು. ಅದರಂತೆ ಈಗ ಈಡೇರಿಸಲು ಹೆಚ್ಚಿನ ಅಕ್ಕಿಯನ್ನು ಕೇಂದ್ರ ಸರ್ಕಾರದಿಂದ ಕಳುಹಿಸಲು ಮನವಿ ಮಾಡಿದಾಗ ಕೇಂದ್ರ ಸರ್ಕಾರ ಅಕ್ಕಿಯನ್ನು ನೀಡದೆ ಧೋರಣೆ ತೋರುತ್ತಿದೆ” ಎಂದು ಕಾಂಗ್ರೆಸ್ ಮುಖಂಡ ಹಾಗೂ ಉದ್ಯಮಿ ಪ್ರಸಾದ್ ಕಾಂಚನ್ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ದಿನೇಶ್ ಹೆಗ್ಡೆ ಮೊಳಹಳ್ಳಿ, ಉದಯ ಕುಮಾರ್ ಶೆಟ್ಟಿ ಮುನಿಯಾಲು, ರಮೇಶ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಳೆಬೈಲು, ನರಸಿಂಹ ಮೂರ್ತಿ, ಭಾಸ್ಕರ ರಾವ್ ಕಿದಿಯೂರು, ಅಣ್ಣಯ್ಯ ಶೇರಿಗಾರ್, ಇಸ್ಮಾಯಿಲ್ ಆತ್ರಾಡಿ, ಶಬ್ಬಿರ್ ಅಹ್ಮದ್ ಸೇರಿದಂತೆ ಇತರರು ಇದ್ದರು.
ಉತ್ತರ ಕನ್ನಡ : “ಕಾಂಗ್ರೆಸ್ ಸರ್ಕಾರ ಸದಾ ಬಡವರ ಪರ ಯೋಚಿಸುತ್ತದೆ. ಆದರೆ ಬಿಜೆಪಿ ಬಡವರ ಅನ್ನಕ್ಕೆ ಕಲ್ಲು ಹಾಕುವ ಕೆಲಸಕ್ಕೆ ಮುಂದಾಗಿದ್ದು, ತನ್ನ ಸಣ್ಣತನ ತೋರಿಸಿದೆ. ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತಾ ಕಾಯ್ದೆ ಜಾರಿಗೆ ತರಲಾಗಿತ್ತು. ಬಿಜೆಪಿ ಅಧಿಕಾರಕ್ಕೆ ಏರಿದ ಬಳಿಕ ಆರ್ಥಿಕ ಸ್ಥಿತಿಯೂ ಹದಗೆಟ್ಟಿದೆ” ಎಂದು ಶಾಸಕ ಭೀಮಣ್ಣ ನಾಯ್ಕ ಆರೋಪಿಸಿದರು.
“ಕಾಂಗ್ರೆಸ್ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದರೆ ಸೋಲುವ ಭಯ ಬಿಜೆಪಿಗೆ ಎದುರಾಗಿದೆ. ಹೀಗಾಗಿ ಯೋಜನೆ ಜಾರಿಗೆ ಅಡ್ಡಿ ಮಾಡಲು ಯತ್ನಿಸುತ್ತಿದೆ” ಎಂದು ಆರೋಪಿಸಿದರು.
ಮುಖಂಡರುಗಳಾದ ವಿ ಎಸ್ ಪಾಟೀಲ್, ಕೆ ಶಂಭು ಶೆಟ್ಟಿ, ಸುಜಾತಾ ಕಲ್ಲು, ಸಮೀರ ನಾಯ್ಕ, ಜಗದೀಪ ತೆಂಗೇರಿ, ರತ್ನಾಕರ ನಾಯ್ಕ, ಜಗದೀಶ ಗೌಡ, ಗಣೇಶ ದಾವಣಗೆರೆ ಸೇರಿದಂತೆ ಇತರರು ಇದ್ದರು.
ಚಾಮರಾಜನಗರ : “ನಾವೇನು ಅಕ್ಕಿಯನ್ನು ಅಂಬಾನಿ, ಅದಾನಿಗೆ ಕೊಡುತ್ತಿಲ್ಲ, ಬಡವರಿಗೆ ಕೊಡುತ್ತಿದ್ದೇವೆ. ಬಡವರ ವಿರುದ್ಧ ಇರುವ ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಡೆಗೆ ನಮ್ಮ ಧಿಕ್ಕಾರ ಇರಲಿ” ಎಂದು ಸಚಿವ ವೆಂಕಟೇಶ್ ಧಿಕ್ಕಾರದ ಘೋಷಣೆ ಕೂಗಿದರು.
“ಬಿಜೆಪಿಯವರು ಅಕ್ಕಿ ಕೊಡದಿದ್ದರೂ ನಾವು ಕಾರ್ಯಕ್ರಮವನ್ನು ಜಾರಿ ಮಾಡುತ್ತೇವೆ. ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಕೊಡುತ್ತೇವೆ. ಶಕ್ತಿ ಯೋಜನೆಯನ್ನು ಜನರು ಬಳಸಿಕೊಳ್ಳುತ್ತಿರುವುದನ್ನು ಕಂಡು ಬಿಜೆಪಿಯವರು ಸಹಿಸುತ್ತಿಲ್ಲ” ಎಂದು ಆರೋಪ ಮಾಡಿದರು.
ಸಚಿವ ವೆಂಕಟೇಶ್, ಶಾಸಕರುಗಳಾದ ಸಿ ಪುಟ್ಟರಂಗಶೆಟ್ಟಿ, ಎ ಆರ್ ಕೃಷ್ಣಮೂರ್ತಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಭುವನೇಶ್ವರಿ ವೃತ್ತದಲ್ಲಿ ರಸ್ತೆತಡೆ ಪ್ರತಿಭಟನೆ ನಡೆಸಿದರು.