ವಿದ್ಯಾರ್ಥಿಗಳಿಗೆ ಗುಣಮಟ್ಟದ, ಮೌಲ್ಯಯುತ ಶಿಕ್ಷಣ ಕಲ್ಪಿಸಲು ಪ್ರತಿ ಗ್ರಾಮ ಪಂಚಾಯಿತಿಗೊಂದು ಕಾನ್ವೆಂಟ್ ಮಾದರಿ ಶಾಲೆ ನಿರ್ಮಿಸಲಾಗುವುದು ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್ ಮುನಿಯಪ್ಪ ಹೇಳಿದರು.
ಬೆಂ.ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ 2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-01ರ ಫಲಿತಾಂಶದಲ್ಲಿ ಹೆಚ್ಚು ಅಂಕ ಪಡೆದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 150 ಕೋಟಿ ರೂ.ಗಳ ಸಿ.ಎಸ್.ಆರ್ ಅನುದಾನದಡಿ 114 ಶಾಲೆಗಳನ್ನು ಅಭಿವೃದ್ಧಿಪಡಿಸಲು ಮಾನ್ಯ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ. ಹಿಂದೆ ಇದ್ದ ವಿದ್ಯಾಭ್ಯಾಸದ ಕಠಿಣ ಹಾದಿಯನ್ನು ಈಗಿರುವ ಮಕ್ಕಳು ಅನುಭವಿಸಬಾರದು. ವಿದ್ಯಾರ್ಥಿಗಳಿಗೆ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ, ಕೌಶಲ್ಯಾಧರಿತ ತರಗತಿಗಳು, ಡಿಜಿಟಲ್ ಲೈಬ್ರರಿ, ಕಂಪ್ಯೂಟರ್ ತರಬೇತಿ ಸೇರಿದಂತೆ ಅತ್ಯಾಧುನಿಕ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಮಾದರಿ ಶಾಲೆಗಳನ್ನು ನಿರ್ಮಿಸಲಾಗುವುದು. ವಿದ್ಯಾರ್ಥಿಗಳಿಗೆ ಪಿಯುಸಿ ಹಂತದವರೆಗೆ ಉಚಿತ ಗುಣಮಟ್ಟದ ಶಿಕ್ಷಣ ನೀಡಿದಲ್ಲಿ ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇದನ್ನೂ ಓದಿ : ಚಿಕ್ಕಬಳ್ಳಾಪುರ | ಯೋಗ್ಯತೆ ಇಲ್ಲ ಎಂದು ಬರೆದುಕೊಡಿ.,ನಾಚಿಕೆ ಆಗಲ್ವಾ:ಉಪ ಲೋಕಾಯುಕ್ತ ಫಣೀಂದ್ರ ತರಾಟೆ
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಆಗದಂತೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಶಿಕ್ಷಕರ ನೇಮಕ ಮಾಡಲು ಸಿದ್ಧತೆ ನಡೆಸಲಾಗಿದೆ. ಶಾಲೆಗಳಲ್ಲಿ ಕುಂದು ಕೊರತೆಗಳಲಿದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತಂದರೆ ಶೀಘ್ರ ಸಮಸ್ಯೆ ಬಗೆಹರಿಸಲಾಗುವುದು. ಮುಂದಿನ ವರ್ಷದಲ್ಲಿ ಮೊದಲ 5 ಅಗ್ರ ಸ್ಥಾನಗಳಲ್ಲಿ ನಮ್ಮ ಬೆಂಗಳೂರು ಗ್ರಾಮಾಂತರ ಜಿಲ್ಲೆ ಇರಬೇಕು ಎಂಬುದು ನನ್ನ ಆಸೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಕೆಲಸ ಮಾಡಬೇಕು. ಅದಕ್ಕೆ ಪೂರಕವಾಗಿ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳ ಚಲನವಲನ, ಕ್ಷೇಮಾಭಿವೃದ್ಧಿ, ವಿದ್ಯಾಭ್ಯಾಸಕ್ಕೆ ತಯಾರಿ ಹೇಗೆ ನಡೆಸುತ್ತಿದ್ದಾರೆ. ಶಾಲೆಯಿಂದ ಬಂದ ನಂತರ ಮನೆಯಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುವ ಮೂಲಕ ಒಳ್ಳೆಯ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಿ. ವಿದ್ಯಾರ್ಥಿಗಳು ಕೂಡ ಜೀವನದಲ್ಲಿ ಗುರಿ ಇಟ್ಟುಕೊಂಡು ತ್ಯಾಗ ಮತ್ತು ಪರಿಶ್ರಮದಿಂದ ಓದಿದರೆ ಉತ್ತಮ ಅಂಕಗಳು ಬರಲು ಸಾಧ್ಯ ಎಂದರು.
16 ವಿದ್ಯಾರ್ಥಿಗಳಿಗೆ ಸನ್ಮಾನ:
ಅನುದಾನ ರಹಿತ ಶಾಲೆಯ ಸಿ.ಭಾವನಾ (625/625), ರಂಜಿತ ಎಂ.ಸಿ (625/625), ರೋಹನ್ ರಾಜ್ ಎಸ್(625/624), ತೇಜಸ್ ಎಸ್ (625/624), ಲಿಖಿತ ಎಂ(625/624), ಅಮೃತಾ ಎಂ.ಎಸ್(625/624), ಗಾನವಿ ಎಸ್.ಎಂ (625/623). ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮೋಹನ್ ಜಿ.ಎಂ (625/623). ಅನುದಾನ ರಹಿತ ಶಾಲೆಯ ಸಚಿನ್ ತೇಜಸ್ ಎಂ.ಜೆ (625/622), ತನುಶ್ರೀ(625/622), ಹನಿ ಕೃತಿ ಎಸ್(625/622), ಮೋಹಿತ.ಕೆ.ಎನ್(625/622), ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಐಶ್ವರ್ಯ (625/618), ನಿಶ್ಚಿತ ಆರ್ (625/617) ಹಾಗೂ ಸರ್ಕಾರಿ ಪ್ರೌಢಶಾಲೆಯ ಗೌತಮ್ ಎಂ ಮತ್ತು ಅನುದಾನಿತ ಶಾಲೆಯ ಯಾಮಿನಿ ವಿ (625/616) ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಶೇಕಡ 100 ರಷ್ಟು ಫಲಿತಾಂಶ ಪಡೆದ ಬಿಜ್ಜವಾರ ಸರ್ಕಾರಿ ಶಾಲೆ:
2024-25 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ-01 ರಲ್ಲಿ ದೇವನಹಳ್ಳಿ ತಾಲ್ಲೂಕಿನ ಬಿಜ್ಜವಾರ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಲ್ಲಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇಕಡ 100 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮಾದರಿ ಶಾಲೆ ಎನಿಸಿಕೊಂಡಿದೆ ಎಂದು ಸಚಿವರು ಹೊಗಳಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಅಧ್ಯಕ್ಷ ಜಗನ್ನಾಥ, ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ದೇವನಹಳ್ಳಿ ತಹಶೀಲ್ದಾರ್ ಬಾಲಕೃಷ್ಣ, ಬಯಪ ಸದಸ್ಯರಾದ ಮಂಜುನಾಥ, ಜಿ.ಪಂ ಉಪಕಾರ್ಯದರ್ಶಿ ಟಿ.ಕೆ ರಮೇಶ್, ಯೋಜನಾಧಿಕಾರಿ ರಾಮಕೃಷ್ಣಯ್ಯ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬೈಲಾಂಜನಪ್ಪ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಪ್ರೇಮ, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು, ಸಿಬ್ಬಂದಿ ಉಪಸ್ಥಿತರಿದ್ದರು.