ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಜನಸಂಖ್ಯೆಯನ್ನು ಆಧರಿಸಿ ಶೈಕ್ಷಣಿಕ ಹಾಗೂ ಉದ್ಯೋಗದ ನೇಮಕಾತಿಯಲ್ಲಿರುವ ಮೀಸಲಾತಿಯನ್ನು ಹೆಚ್ಚು ಮಾಡಲು ರಾಜ್ಯ ಸರ್ಕಾರವು ಕಳುಹಿಸಿರುವ ಮಸೂದೆಗೆ ಕೇಂದ್ರ ಸರ್ಕಾರವು ಒಪ್ಪಿಗೆಯನ್ನು ನೀಡಿ ಸಂವಿಧಾನದ 9 ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕೆಂದು ಒತ್ತಾಯಿಸಿ ಸಿಪಿಐ(ಎಂ) ಪಕ್ಷದ ವತಿಯಿಂದ ಕೋಲಾರದ ಲೋಕಸಭಾ ಸದಸ್ಯರ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಪಿ. ಆರ್. ಸತ್ಯ ನಾರಾಯಣ ಮಾತನಾಡಿ, “ಭಾರತೀಯ ಸಮಾಜದ ವಾಸ್ತವಗಳ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳ ಮೀಸಲಾತಿಯಲ್ಲಿ ಒಳ ಮೀಸಲಾತಿಯನ್ನು ಕಲ್ಪಿಸಬೇಕೆಂಬ ಬೇಡಿಕೆಗೆ ಪೂರಕವಾಗಿ ದೇವಿಂದರ್ ಸಿಂಗ್ ವರ್ಸಸ್ ಪಂಜಾಬ್ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯ ನೀಡಿದ ತೀರ್ಪು ಮಹತ್ವದ್ದಾಗಿದೆ. ಇದನ್ನು ಅನುಸರಿಸಿ ಕರ್ನಾಟಕ ಸರ್ಕಾರವು ಪರಿಶಿಷ್ಟ ಜಾತಿಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ನ್ಯಾ. ಹೆಚ್. ಎನ್. ನಾಗಮೋಹನದಾಸ್ ಅವರ ಆಯೋಗವನ್ನು ರಚಿಸಿತು ಮತ್ತು ಆಯೋಗ ನೀಡಿದ ವರದಿಯನ್ನು ಅಂಗೀಕರಿಸಿದೆ” ಎಂದು ವಿವರಿಸಿದರು.
ಇದನ್ನು ಓದಿದ್ದೀರಾ? ರಾಯಚೂರು | ಸಾರಿಗೆ ದರ ಏರಿಕೆ ಹಿಂಪಡೆಯುವಂತೆ ಸಿಪಿಐಎಂ ಆಗ್ರಹ
“ವರದಿಯ ಪ್ರಕಾರ ಗುಂಪುಗಳ ವರ್ಗೀಕರಣ, ಶೇಕಡವಾರು ಹಂಚಿಕೆಯ ಕುರಿತ ಕರ್ನಾಟಕ ಸರ್ಕಾರದ ನಿರ್ಧಾರದ ವಿಷಯದಲ್ಲಿ ಕೆಲವು ಸಣ್ಣ ಭಿನ್ನಾಭಿಪ್ರಾಯಗಳು ವ್ಯಕ್ತಗೊಂಡಿವೆ. ಇದೇ ಹೊತ್ತಿನಲ್ಲಿ ಕೆಲವು ಸ್ಥಾಪಿತ ಹಿತಾಸಕ್ತಿಗಳು ಜನತೆಯನ್ನು ಪರಸ್ಪರ ಎತ್ತಿ ಕಟ್ಟುವ ವಿಭಜಕ ಪಾತ್ರ ವಹಿಸುತ್ತಿರುವುದು ಅತ್ಯಂತ ನೋವಿನ ಮತ್ತು ವಿಷಾದಕರ ಸಂಗತಿಯಾಗಿದೆ. ಸಾಮಾಜಿಕ ನ್ಯಾಯ ನಿಜಕ್ಕೂ ದಕ್ಕುವಂತೆ ಮಾಡಲು, ಜನತೆಯ ಐಕ್ಯತೆಯನ್ನು ಕಾಪಾಡಬೇಕಿದೆ. ಒಳ ಮೀಸಲಾತಿಯ ವಿಷಯದಲ್ಲಿ ಉಂಟಾಗಿರುವ ಕೆಲವು ನ್ಯೂನತೆಗಳನ್ಮು ಸರಿಪಡಿಸಿಕೊಂಡು ಹೋಗಲು ರಾಜ್ಯ ಸರ್ಕಾರ ವಿಳಂಬಿಸದೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ” ಎಂದು ಆಗ್ರಹಿಸಿದರು.
“ಒಳ ಮೀಸಲಾತಿ ಜಾರಿ ವಿಷಯವು, ಮೀಸಲಾತಿ ಪ್ರಮಾಣ ಹೆಚ್ಚಳ ವಿಷಯದ ಜೊತೆಯೂ ತಳಕು ಹಾಕಿಕೊಂಡಿದೆ. ಹೀಗಾಗಿ ಮೀಸಲಾತಿ ಪ್ರಮಾಣ ಹೆಚ್ಚಳದ ರಾಜ್ಯ ಸರ್ಕಾರದ ಕಾಯ್ದೆಯನ್ನು ಒಕ್ಕೂಟ ಸರ್ಕಾರ ಅನುಮೋದಿಸಿ ಸಂವಿಧಾನದ ಪರಿಚ್ಛೇದ 9ಕ್ಕೆ ಸೇರ್ಪಡೆ ಮಾಡುವುದು ಅತ್ಯಂತ ಜರೂರಾಗಿ ಆಗಬೇಕಿದೆ. ಈ ಬಗ್ಗೆ ಸಂಸತ್ ಸದಸ್ಯರು ಕರ್ನಾಟಕ ರಾಜ್ಯದ ಜನತೆಯ ಹಿತವನ್ನು ಕಾಯಲು ಪಕ್ಷ ಭೇದ ಮರೆತು ಒಟ್ಟಾಗಿ ಕೆಲಸ ಮಾಡುವುದು ಅಗತ್ಯವಾಗಿದೆ” ಎಂದರು.
ಪ್ರತಿಭಟನೆಯಲ್ಲಿ ಸಿಪಿಐಎಂ ಕೋಲಾರ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ವಿ.ಗೀತಾ, ಪಾತಕೋಟೆ ನವೀನ್ ಕುಮಾರ್, ಎಂ.ವಿಜಯಕೃಷ್ಣ, ಮುಖಂಡರಾದ ಅಪ್ಪಯ್ಯಣ್ಣ, ಎಂ. ಭೀಮರಾಜ್, ಆಶಾ, ತಿರುಪತಿ, ಆನಂದ್, ಹೆಚ್. ಬಿ. ಕೃಷ್ಣಪ್ಪ, ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.




