ಕ್ರೂಸರ್ ವಾಹನ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಬೀದರ್ ತಾಲೂಕಿನ ಚಟ್ನಳ್ಳಿ ಗ್ರಾಮದ ಸಮೀಪದ ಸೋಲಾರ್ ಘಟಕದ ಬಳಿ ಗುರುವಾರ ಬೆಳಿಗ್ಗೆ ಸಂಭವಿಸಿದೆ.
ಘಟನೆಯಲ್ಲಿ ಯಾಕತಪುರ ಗ್ರಾಮದ ಪ್ರದೀಪ ಕೋಳಿ (25), ಚಾಂಗಲೇರ ಗ್ರಾಮದ ವಿನೋದ ಕುಮಾರ್ (24) ಹಾಗೂ ವರ್ದಿಶ ಶಂಕರ (25) ಸಾವನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡ ಸಂಜುಕುಮಾರ ಹಾಗೂ ಮಂಜುಕುಮಾರ್ ಅವರನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಾಕತಪುರ ಗ್ರಾಮದಿಂದ ಚಾಂಗಲೇರಕ್ಕೆ ತೆರಳುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಂಬಕ್ಕೆ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ಹಾಗೂ ಪಿಎಸ್‌ಐ ಸುಕಾನಂದ ಸಿಂಗೆ ಭೇಟಿ ನೀಡಿ ಪರಿಶೀಲಿಸಿದರು. ಈ ಕುರಿತು ಮನ್ನಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.