ಚುನಾವಣಾ ಆಯೋಗವು 11 ದಿನಗಳ ವಿಳಂಬದ ನಂತರ, ಮೊದಲ ಮತ್ತು ಎರಡನೇ ಹಂತದ ಲೋಕಸಭಾ ಚುನಾವಣೆಯ ಅಂಕಿ- ಅಂಶಗಳನ್ನು ಬಿಡುಗಡೆ ಮಾಡಿದೆ. ಇದು ಚರ್ಚೆಯನ್ನೂ ಕೆಲವು ಗಂಭೀರ ಪ್ರಶ್ನೆಗಳನ್ನೂ ಮುನ್ನೆಲೆಗೆ ತಂದಿದೆ.
ಏಪ್ರಿಲ್ 19ರಂದು ಮೊದಲ ಹಂತ ಮತ್ತು ಏಪ್ರಿಲ್ 26 ರಂದು ಎರಡನೇ ಹಂತದ ಚುನಾವಣೆಗಳು ನಡೆದಿದ್ದವು. ಇವುಗಳಿಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಬಿಡುಗಡೆ ಮಾಡಿದ ವಿವರಗಳಲ್ಲಿ ಪ್ರತಿ ಕ್ಷೇತ್ರದಲ್ಲೂ ನೋಂದಣಿಯಾದ ಮತದಾರರ ಸಂಖ್ಯೆಯನ್ನು ಉಲ್ಲೇಖಿಸಿಲ್ಲ, 2019ರ ಚುನಾವಣೆಯಲ್ಲಿ ನೋಂದಾಯಿತ ಮತದಾರರ ಸಂಖ್ಯೆಯನ್ನು ತಿಳಿಸಲಾಗಿತ್ತು ಎಂದು ಅನೇಕರು ಹೇಳುತ್ತಿದ್ದಾರೆ.
ಅಂಕಿ- ಅಂಶಗಳ ಬಿಡುಗಡೆಯ ವಿಳಂಬವು ಸಾಮಾನ್ಯವಾದ ಸಂಗತಿಯಲ್ಲ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಕೆಲವು ಆತಂಕಗಳನ್ನು ಈ ಹಿನ್ನೆಲೆಯಲ್ಲಿ ವ್ಯಕ್ತಪಡಿಸಿದ್ದಾರೆ.
- ದತ್ತಾಂಶ ಬಿಡುಗಡೆಯಲ್ಲಿ ವಿಳಂಬ ಸರಿಯಲ್ಲ
ಏಪ್ರಿಲ್ 19 ರಂದು ಮೊದಲ ಹಂತದ ಮತದಾನ ನಡೆದು 11 ದಿನಗಳ ನಂತರದಲ್ಲಿ ಮತ್ತು ಏಪ್ರಿಲ್ 26 ರಂದು ಎರಡನೇ ಹಂತದ ಮತದಾನ ನಡೆದು ನಾಲ್ಕು ದಿನಗಳ ನಂತರದಲ್ಲಿ ಅಂಕಿ- ಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.
ಮಂಗಳವಾರ ಬೆಳಿಗ್ಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡುವ ಮೊದಲು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ) ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಪ್ರತಿಕ್ರಿಯಿಸಿದ್ದು, “ಇದು ಫಲಿತಾಂಶಗಳ ಮೇಲೆ ಪರಿಣಾಮ ಬೀರುವ ಗಂಭೀರ ಆತಂಕವಾಗಿದೆ” ಎಂದಿದ್ದಾರೆ.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ, “ಇದೇ ಮೊದಲ ಬಾರಿಗೆ ಅಂತಿಮ ಮತದಾನದ ಸಂಖ್ಯೆಯನ್ನು ಬಿಡುಗಡೆ ಮಾಡಲು ವಿಳಂಬವಾಗಿದೆ. ಈ ಮೊದಲು ಚುನಾವಣಾ ಆಯೋಗವು ಮತದಾನದ ನಂತರ ಅಥವಾ 24 ಗಂಟೆಗಳ ಒಳಗೆ ಮತದಾನದ ಅಂತಿಮ ವಿವರಗಳನ್ನು ಪ್ರಕಟಿಸುತ್ತಿತ್ತು” ಎಂದು ತಿಳಿಸಿದ್ದಾರೆ.
ಈ ಟೀಕೆ ಆಧಾರರಹಿತವಲ್ಲ ಎಂಬ ಮಾತಿದೆ. 2019 ರಲ್ಲಿ ಚುನಾವಣಾ ಆಯೋಗವು ಎರಡು ದಿನ ತಡವಾಗಿ ಮಾಹಿತಿ ನೀಡಿತ್ತು. ಏಪ್ರಿಲ್ 11 ರಂದು ಮತದಾನದ ನಡೆದು, ಏಪ್ರಿಲ್ 13ರಂದು ವಿವರ ನೀಡಿದ್ದ ಆಯೋಗವು, ಪ್ರತಿ ಕ್ಷೇತ್ರದಲ್ಲಿ ಮಹಿಳೆಯರು, ಪುರುಷರು, ಟ್ರಾನ್ಸ್‌ಜೆಂಡರ್‌ಗಳು ಎಷ್ಟು ಮಂದಿ ಮತದಾನ ಮಾಡಿದ್ದಾರೆಂದೂ ಪ್ರಕಟಿಸಿತ್ತು.
ಈಗ ಚುನಾವಣಾ ಆಯೋಗವು ಮತದಾನದ ಲಿಂಗವಾರು ವಿವರಗಳನ್ನು ಬಿಡುಗಡೆ ಮಾಡದೆ, ಮತದಾನದ ಶೇಕಡಾವಾರು ವಿವರಗಳನ್ನು ಮಾತ್ರ ನೀಡಿದೆ. ಎಷ್ಟು ಜನ ಮತದಾರರಿದ್ದರು, ಎಷ್ಟು ಮಂದಿ ಮತ ಹಾಕಿದ್ದಾರೆಂಬ ವಿವರ ಅದರಲ್ಲಿ ಇಲ್ಲವಾಗಿದೆ.
- ಅಂತಿಮ ವಿವರದಲ್ಲಿ ಮತದಾನ ಪ್ರಮಾಣ ಹೆಚ್ಚಳ
ಮತದಾನದ ದಿನದಂದು ಬಿಡುಗಡೆಯಾದ ಆರಂಭಿಕ ವಿವರಗಳಿಗಿಂತ ಹೆಚ್ಚಿನ ಮತದಾನ ಪ್ರಮಾಣವನ್ನು ಅಂತಿಮ ಮಾಹಿತಿಯಲ್ಲಿ ಚುನಾವಣಾ ಆಯೋಗ ಪ್ರಕಟಿಸಿದೆ.
ಎರಡನೇ ಹಂತದ ಮತದಾನದ ಸಂಖ್ಯೆಯಲ್ಲಿ 5.75% ಹೆಚ್ಚಳವಾಗಿದೆ ಎಂದು ಹೇಳಿರುವ ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ’ಬ್ರೇನ್, “ಇದು ಸಾಮಾನ್ಯವೇ? ನಾನಿಲ್ಲಿ ಕಳೆದುಕೊಂಡಿರುವುದು ಏನನ್ನು?” ಎಂದು ಪ್ರಶ್ನಿಸಿದ್ದಾರೆ.
ಏಪ್ರಿಲ್ 19ರಂದು ನಡೆದ ಮೊದಲ ಹಂತದ ಮತದಾನದ ನಂತರ, ಚುನಾವಣಾ ಆಯೋಗ ನೀಡಿದ್ದ ಪತ್ರಿಕಾ ಪ್ರಕಟಣೆಯಲ್ಲಿ “ಇಂದು ಸಂಜೆ 7 ಗಂಟೆಯವರೆಗೆ 60% ಕ್ಕಿಂತ ಹೆಚ್ಚು ಮತದಾನವಾಗಿದೆ” ಎಂದು ತಿಳಿಸಲಾಗಿತ್ತು. ಮರುದಿನ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡುತ್ತಾ, “ಮತದಾನದ ಪ್ರಮಾಣ 65.5% ತಲುಪಲಿದೆ” ಎಂದಿತ್ತು. ಯಾವುದೇ ಮೂಲಗಳನ್ನು ಪಿಟಿಐ ಉಲ್ಲೇಖಿಸಿರಲಿಲ್ಲ. ಮಂಗಳವಾರ ಚುನಾವಣಾ ಆಯೋಗ ಅಂತಿಮ ಅಂಕಿ-ಅಂಶ ನೀಡುತ್ತಾ, 66.14% ಮತದಾನವಾಗಿದೆ ಎಂದು ಹೇಳಿದೆ.
ಏಪ್ರಿಲ್ 26ರಂದು ಅಂದರೆ ಎರಡನೇ ಹಂತದ ಮತದಾನದ ದಿನ ಆಯೋಗವು ನೀಡಿದ ಪತ್ರಿಕಾ ಪ್ರಕಟಣೆಯಲ್ಲಿ, “ಇಂದು ಸಂಜೆ 7 ಗಂಟೆಯವರೆಗೆ 60.96%ರಷ್ಟು ಮತದಾನವಾಗಿದೆ” ಎಂದು ತಿಳಿಸಲಾಗಿದೆ. ಮಾರನೇ ದಿನ ಚುನಾವಣಾ ಆಯೋಗದ ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದ್ದ ಪಿಟಿಐ, ಪರಿಷ್ಕೃತ ಮತ ಪ್ರಮಾಣ 66.7% ಆಗಿದೆ ಎಂದು ಹೇಳಿತ್ತು.
- ಸಂಪೂರ್ಣ ಮತದಾರರ ಸಂಖ್ಯೆ ಬಿಡುಗಡೆ ಮಾಡಿಲ್ಲ
ಚುನಾವಣಾ ಆಯೋಗವು ಉಂಟು ಮಾಡಿರುವ ಗೊಂದಲದ ಕುರಿತು ಜೈರಾಮ್ ರಮೇಶ್ ಮತ್ತು ಯೆಚೂರಿ ಬೊಟ್ಟು ಮಾಡಿದ್ದಾರೆ. ಪ್ರತಿ ಲೋಕಸಭಾ ಕ್ಷೇತ್ರದ ನೋಂದಾಯಿತ ಮತದಾರರ ಸಂಖ್ಯೆಯನ್ನು ಚುನಾವಣಾ ಸಮಿತಿಯ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಪ್ರಕಟಿಸುವಲ್ಲಿ ಆಯೋಗ ವಿಫಲವಾಗಿದೆ ಎಂದು ಟೀಕಿಸಿದ್ದಾರೆ. ಮಂಗಳವಾರ ಬಿಡುಗಡೆಯಾದ ದತ್ತಾಂಶಗಳ ಭಾಗವಾಗಿಯೂ ಆ ಸಂಖ್ಯೆಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ.
ಒಂದು ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ ಎಷ್ಟಿದೆ ಎಂದು ತಿಳಿಸದೆ, ಮತದಾನ ಎಷ್ಟು ಪರ್ಸೆಂಟ್ ಆಗಿದೆ ಎಂದು ಹೇಳುವುದು ಅರ್ಥಹೀನ ಎಂದಿದ್ದಾರೆ ಯೆಚೂರಿ. 2019 ರಲ್ಲಿ ಚುನಾವಣಾ ಆಯೋಗವು ಮತದಾರರ ಸಂಖ್ಯೆ ಮತ್ತು ಮತ ಚಲಾಯಿಸಿದವರ ಸಂಖ್ಯೆಯನ್ನು ಬಿಡುಗಡೆ ಮಾಡಿದ್ದನ್ನು ಪತ್ರಕರ್ತರು ಉಲ್ಲೇಖಿಸಿದ್ದಾರೆ.
In the 2019 Loksabha elections the #ElectionCommission uploaded Voter Turnout data in numbers (EVM votes polled) & also compared it with the 2014 LS elections.
But a drastic change has occured in the #LokSabhaElections2024 . Why are they providing votes polled data in %? Why not… pic.twitter.com/NWXuvXOwBe— Poonam Agarwal (@poonamjourno) April 30, 2024
‘ಚುನಾವಣಾ ಆಯೋಗದಿಂದ ಆತಂಕ ಸೃಷ್ಟಿ’
ಸ್ವರಾಜ್ ಇಂಡಿಯಾ ಪಕ್ಷದ ನಾಯಕ, ರಾಜಕೀಯ ವಿಶ್ಲೇಷಕ ಯೋಗೇಂದ್ರ ಯಾದವ್ ಅವರು ’ದಿ ಸ್ಕ್ರಾಲ್’ನೊಂದಿಗೆ ಮಾತನಾಡಿದ್ದು, “ಅಂತಿಮ ಮತದಾರರ ಸಂಖ್ಯೆಯಲ್ಲಿನ ಹೆಚ್ಚಳವು ಅಸಹಜವಾಗಿಲ್ಲ, ಆದರೆ ಅಂತಿಮ ಸಂಖ್ಯೆಗಳನ್ನು ಬಿಡುಗಡೆ ಮಾಡುವಲ್ಲಿ ಹೆಚ್ಚು ವಿಳಂಬ ಮಾಡಿದ್ದು ಕಳವಳಕಾರಿ. ಸಾಮಾನ್ಯವಾಗಿ ಮತದಾನದ ಮರುದಿನದ ಸಂಜೆಯ ವೇಳೆಗೆ ಅಂತಿಮ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗುತ್ತದೆ” ಎಂದಿದ್ದಾರೆ.
“ಈ ಬಾರಿ ಚುನಾವಣಾ ಆಯೋಗದ ಅಪ್ಲಿಕೇಶನ್ ನೋಡುತ್ತಿದ್ದೆ. ಮೊದಲ ಹಂತದ ಮತದಾನದ ನಾಲ್ಕು ದಿನಗಳ ನಂತರ ಮತದಾನದ ಸಂಖ್ಯೆಯು ಹೆಚ್ಚುತ್ತಲೇ ಇತ್ತು” ಎಂದು ಉಲ್ಲೇಖಿಸಿದ್ದಾರೆ.
ಮಾಜಿ ಐಎಎಸ್ ಅಧಿಕಾರಿ, ಹೋರಾಟಗಾರ ಕಣ್ಣನ್ ಗೋಪಿನಾಥನ್ ಪ್ರತಿಕ್ರಿಯಿಸಿದ್ದು, “ಇಂತಹ ವಿಳಂಬಕ್ಕೆ ಯಾವುದೇ ಕಾರಣವಿಲ್ಲ. ಮತಗಟ್ಟೆ ಅಧಿಕಾರಿಗಳ ಪರಿಶೀಲನೆಯ ನಂತರ ಮತದಾನದ ಮರುದಿನ ಅಂಕಿ- ಅಂಶಗಳನ್ನು ಅಂತಿಮಗೊಳಿಸಲಾಗುತ್ತದೆ” ಎಂದಿದ್ದಾರೆ. ಮುಂದುವರಿದು, “ಕೆಲವು ಅಪರೂಪದ ಸಂದರ್ಭಗಳಲ್ಲಿ ಮತ್ತು ಮತಗಟ್ಟೆಗಳು ದೂರದ ಪ್ರದೇಶಗಳಲ್ಲಿದ್ದಲ್ಲಿ ಹೆಚ್ಚೆಂದರೆ ಇನ್ನೊಂದು ದಿನ ವಿಳಂಬವಾಗಬಹುದು” ಎಂದು ವಿವರಿಸಿದ್ದಾರೆ.
ಮತದಾನದ ಶೇಕಡಾವಾರು ವಿವರ ಬಿಡುಗಡೆಯಲ್ಲಿ ವಿಳಂಬವಾಗಿರುವುದರಿಂದ ಚುನಾವಣಾ ಆಯೋಗದ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮೂಡಿದೆ ಎನ್ನುತ್ತಾರೆ ಕಣ್ಣನ್.
“ತಕ್ಷಣವೇ ಮತದಾನದ ವಿವರಗಳನ್ನು ಲೆಕ್ಕಾಚಾರ ಮಾಡುವ ಕಾರ್ಯವಿಧಾನವನ್ನು ಚುನಾವಣಾ ಸಮಿತಿ ಹೊಂದಿದೆ” ಎಂದು ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ ಒಪ್ಪಿಕೊಂಡಿದ್ದಾರೆ. ಮುಂದುವರಿದು, “ಕೆಲವೊಮ್ಮೆ ದತ್ತಾಂಶವನ್ನು ದೃಢೀಕರಿಸಲು ಸಮಯ ಬೇಕಾಗುತ್ತದೆ. ಕೆಲವೊಮ್ಮೆ ಗ್ರೌಂಡ್ ರಿಪೋರ್ಟ್ ನೋಡದೆ ಕಮೆಂಟ್ ಮಾಡುವುದು ಸರಿಯಾಗುವುದಿಲ್ಲ” ಎಂದೂ ಹೇಳಿದ್ದಾರೆ.
“ಮತದಾರರ ಪಟ್ಟಿಗಳು ಸಾರ್ವಜನಿಕವಾಗಿವೆ. ಹೀಗಿರುವಾಗ ಎಲ್ಲರಿಗೂ ಅಗತ್ಯವಿರುವ ರೀತಿಯಲ್ಲಿ ದತ್ತಾಂಶಗಳನ್ನು ಲಭ್ಯವಾಗಿಸುವುದು ಚುನಾವಣಾ ಆಯೋಗದ ಕೆಲಸವಲ್ಲ” ಎಂದು ತಿಳಿಸಿದ್ದಾರೆ.
“ಪ್ರತಿ ಕ್ಷೇತ್ರದ ಅಭ್ಯರ್ಥಿಗಳು ತಮ್ಮ ಮತದಾರರ ವಿವರಗಳನ್ನು ಹೊಂದಿದ್ದಾರೆ” ಎಂದು ಕಣ್ಣನ್ ಹಾಗೂ ಲಾವಾಸ ಉಲ್ಲೇಖಿಸುತ್ತಾರೆ.
ಯೋಗೇಂದ್ರ ಯಾದವ್ ಅವರು ಇದಕ್ಕೆ ವಿರುದ್ಧವಾದ ಅಭಿಪ್ರಾಯ ತಾಳಿದ್ದು, “ಮತದಾರರು ಮತ್ತು ಮತ ಚಲಾಯಿಸಿದವರ ಸಂಪೂರ್ಣ ಸಂಖ್ಯೆಯನ್ನು ಬಿಡುಗಡೆ ಮಾಡುವುದು ನಿರ್ಣಾಯಕ” ಎಂದು ಪ್ರತಿಪಾದಿಸಿದ್ದಾರೆ.