ಅರಬ್ಬೀ ಸಮುದ್ರದ ಲಕ್ಷದ್ವೀಪ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗಿರುವ ಪರಿಣಾಮ, ಚಂಡಮಾರುತ ಸೃಷ್ಟಿಯಾಗುವ ಸಾಧ್ಯತೆ ಇದ್ದು, ಕರಾವಳಿ ಸಹಿತ ರಾಜ್ಯದ ಹಲವೆಡೆ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕರಾವಳಿಗೆ ಯಲ್ಲೋ ಅಲರ್ಟ್ ನೀಡಲಾಗಿದ್ದು, ಮಂಗಳವಾರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಮೋಡ ಕವಿದ ವಾತಾವರಣವಿದ್ದು, ಬೆಳ್ತಂಗಡಿ, ಪುತ್ತೂರು, ಸುಳ್ಯ, ಮಂಗಳೂರು ವ್ಯಾಪ್ತಿಯಲ್ಲಿ ಸೋಮವಾರ ಉತ್ತಮ ಮಳೆಯಾಗಿದೆ.
ಚಂಡಮಾರುತ ಸಾಧ್ಯತೆ ಹಿನ್ನೆಲೆಯಲ್ಲಿ ನವಮಂಗಳೂರು ಬಂದರಿಗೆ ಸಂಬಂಧಿಸಿದಂತೆ ಹಡಗುಗಳು, ಬಂದರು ಬಳಕೆದಾರರು, ಸ್ಟಾಕ್ ಹೋಲ್ಡರ್‌ಗಳು ಸುರಕ್ಷಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದು, ನವಮಂಗಳೂರು ಬಂದರಿನಲ್ಲಿ ಎಲ್ಲ ರೀತಿಯ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲು ಸೂಚನೆ ನೀಡಿದೆ.
ಈ ಸುದ್ದಿ ಓದಿದ್ದೀರಾ? ರಾಯಚೂರು | ಏಳು ತಾಸು ವಿದ್ಯುತ್ ಪೂರೈಸುವಂತೆ ಅ.19ರಂದು ಪ್ರತಿಭಟನೆ
ಕರಾವಳಿ ಜಿಲ್ಲೆಗಳಲ್ಲಿ ಈಗಾಗಲೇ ಸಿಡಿಲು ಸಹಿತ ಭಾರೀ ಮಳೆಯಾಗಿದ್ದು, ಸೋಮವಾರ ಸುಳ್ಯ, ಸುಬ್ರಹ್ಮಣ್ಯ, ಬಂಟ್ವಾಳ ಪರಿಸರದಲ್ಲಿ ಗುಡುಗು ಸಿಡಿಲಿನ ಮಳೆಯಾಗಿರುವುದು ವರದಿಯಾಗಿದೆ.
ಮಂಗಳೂರು ಹೊರವಲಯದಲ್ಲಿ ಭಾನುವಾರ ರಾತ್ರಿ ಸಿಡಿಲು ಬಡಿದು ಮಗುವಿನ ಕಿವಿಗೆ ಗಾಯಗಳಾಗಿವೆ. ಸಿಡಿಲು ಬಡಿದು ಮನೆಯೊಂದರಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ದುರಂತ ಸಂಭವಿಸಿದೆ. ಮಂಗಳೂರು ಹೊರವಲಯದ ವಾಮಂಜೂರು ಅಮೃತ ನಗರದ ಗೋಪಾಲ ಪೂಜಾರಿ ಎಂಬುವವರ ಮನೆಯಲ್ಲಿ ಘಟನೆ ನಡೆದಿದ್ದು, ಸಿಡಿಲಿನ ಆರ್ಭಟಕ್ಕೆ ಮನೆಯ ವಿದ್ಯುತ್ ಉಪಕರಣಗಳು ಹಾನಿಗೊಳಗಾಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಸ್ವಿಚ್ ಬೋರ್ಡ್ ಹಾಗೂ ಮೀಟರ್ ಬಾಕ್ಸ್ ಪುಡಿಯಾಗಿವೆ. ಮನೆಯಲ್ಲಿದ್ದ ಮಹಿಳೆ ಹಾಗೂ 5 ವರ್ಷದ ಮಗುವಿನ ಕಿವಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಸುಳ್ಯ ನಗರ, ಜಾಲ್ಸೂರು, ಪುತ್ತೂರು, ಅರಂತೋಡು, ಮಂಡೆಕೋಲು, ಎಡಮಂಗಲ ಭಾಗಗಳಲ್ಲಿ ಮಳೆಯಾಗಿದ್ದರೆ, ಕಾಸರಗೋಡಿನ ಬದಿಯಡ್ಕದಲ್ಲಿ ಸಿಡಿಲು ಬಡಿದು ಕಾಡಮನೆ ಮುಚ್ಚಿಲಕವೆಯಲ್ಲಿ ಕೊರಗಜ್ಜ ದೈವದ ಗುಡಿಗೆ ಹಾಗೂ ಸಮೀಪದ ವಾಸದ ಮನೆಗೆ ಹಾನಿ ಉಂಟಾಗಿದೆ ಎನ್ನಲಾಗಿದೆ.