ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಅತ್ತಾವರದ ಐವರಿ ಟವರ್ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಬೆಂಕಿ ಅವಘಡ ಸಂಭವಿಸಿದ್ದು, ಈ ವೇಳೆ ಗಾಯಗೊಂಡ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದ್ದು, ಘಟನೆಯಲ್ಲಿ ಇನ್ನೊಬ್ಬರು ಗಾಯಗೊಂಡಿದ್ದರು. ಅವರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯಲ್ಲಿ ಹಲವು ಮಂದಿಯಿದ್ದು ಘಟನೆ ಸಂಭವಿಸಿದ ಕೂಡಲೇ ಅವರು ಹೊರಗೆ ಬಂದು ಪಾರಾಗಿದ್ದಾರೆ. ಆದರೆ ವೃದ್ಧೆಯೊಬ್ಬರು ಬಾತ್ ರೂಮ್‌ನಲ್ಲಿದ್ದ ಕಾರಣ ಹೊರಗೆ ಬರಲಾಗದೆ ಸಿಲುಕಿದ್ದರಿಂದ ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಸುದ್ದಿ ಓದಿದ್ದೀರಾ? ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ; ಮಕ್ಕಳಿಗಿದು ಸುರಕ್ಷಿತ ತಾಣವೇ?
ಬೆಂಕಿ ಅನಾಹುತದಿಂದ ಮನೆಯೊಳಗಿನ ಪೀಠೋಪಕರಣಗಳು ಸುಟ್ಟು ಕರಕಲಾಗಿವೆ. ಪಾಂಡೇಶ್ವರ ಅಗ್ನಿಶಾಮಕ ಠಾಣೆ ಅಧಿಕಾರಿಗಳು ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.