“ಏಕದಿನ ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಸೋಲಿನಲ್ಲಿ ಮಾಧ್ಯಮಗಳು, ಸೋಷಿಯಲ್ ಮೀಡಿಯಾ ಹಾಗೂ ಅಭಿಮಾನಿಗಳ ಪಾತ್ರವೂ ಇದೆ. ಅದನ್ನು ನೀವು ಒಪ್ಪಲೇಬೇಕು” ಎಂದು ಪಾಕಿಸ್ತಾನದ ಮಾಜಿ ಆಟಗಾರ ವಾಸೀಂ ಅಕ್ರಂ ಹೇಳಿಕೆ ನೀಡಿದ್ದಾರೆ.
ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಆರು ವಿಕೆಟ್‌ಗಳ ಸೋಲು ಅನುಭವಿಸಿ, ಚಾಂಪಿಯನ್ ಪಟ್ಟ ಗಳಿಸುವಲ್ಲಿ ಎಡವಿತ್ತು.
ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ಸಂಸ್ಥೆ ಆಯೋಜಿಸಿದ್ದ ‘ದಿ ಫೈನಲ್ ಟೇಕ್’ ಸಂವಾದದ ವೇಳೆ ಮಾತನಾಡಿದ ವಾಸೀಂ ಅಕ್ರಂ, ಆತಿಥೇಯ ರಾಷ್ಟ್ರವು ಫೈನಲ್ ಪಂದ್ಯವನ್ನು ಆಡುವ ಮೊದಲೇ ಭಾರತದ ಮಾಧ್ಯಮಗಳು, ಸಾಮಾಜಿಕ ಮಾಧ್ಯಮ ಮತ್ತು ಅಭಿಮಾನಿಗಳು ಟೀಮ್ ಇಂಡಿಯಾ ಚಾಂಪಿಯನ್ ಎಂಬಂತೆ ಬಿಂಬಿಸಿದ್ದವು. ಇದು ರೋಹಿತ್ ಶರ್ಮಾ ನೇತೃತ್ವದ ತಂಡದ ಮೇಲೂ ಪರಿಣಾಮ ಬೀರಿದೆ. ‘ಮೆನ್ ಇನ್ ಬ್ಲೂ’ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮವಾಗಿ ಆಡಿದ್ದಾರೆ. ವಿಶ್ವಕಪ್ ಅನ್ನು ಎತ್ತಿ ಹಿಡಿಯಲು ಸಾಧ್ಯವಾಗದಿರುವುದು ಬಹಳ ನೋವಿನ ಸಂಗತಿ. ಅದನ್ನು ನುಂಗಿಕೊಳ್ಳಲು ಕಷ್ಟವಿದೆ’ ಎಂದು ತಿಳಿಸಿದರು.
“ಟೀಮ್ ಇಂಡಿಯಾವು ಪಂದ್ಯಾವಳಿಯುದ್ದಕ್ಕೂ ಉತ್ತಮವಾಗಿ ಆಡಿತ್ತು. ಆದರೆ ಫೈನಲ್‌ನ ಸೋಲನ್ನು ಮೀರಿ ಮುಂದುವರಿಯುವುದು ಕಠಿಣವಾದುದು ಎಂದು ನಾನು ಅರ್ಥಮಾಡಿಕೊಳ್ಳಬಲ್ಲೆ. ಲೀಗ್ ಸಹಿತ ಒಟ್ಟು 10 ಪಂದ್ಯಗಳನ್ನು ಗೆದ್ದಿದ್ದಾಗ ಟೀಮ್ ಇಂಡಿಯಾ ಸ್ಥಿರವಾಗಿತ್ತು. ಆದರೆ ಸುದ್ದಿ ಚಾನೆಲ್‌ಗಳು, ಸಾಮಾಜಿಕ ಮಾಧ್ಯಮ, ಅಭಿಮಾನಿಗಳು ಫೈನಲ್ ಪಂದ್ಯಕ್ಕೂ ಮುನ್ನವೇ ಭಾರತವನ್ನೇ ವಿಶ್ವಕಪ್ ವಿಜೇತರನ್ನಾಗಿ ಮಾಡಿದ್ದರು. ನಿಮ್ಮ ತಪ್ಪನ್ನು ಕೂಡ ನೀವು ಒಪ್ಪಿಕೊಳ್ಳಬೇಕು. ಟೀಮ್ ಇಂಡಿಯಾ ಚೆನ್ನಾಗಿ ಆಡುತ್ತಿದ್ದರಿಂದ ಜನರ ಭರವಸೆ ಕೂಡ ಹೆಚ್ಚಾಗಿತ್ತು ಅನ್ನುವುದನ್ನು ಕೂಡ ನಾನು ಒಪ್ಪುತ್ತೇನೆ. ಆದರೆ ಅದೊಂದು ಕೆಟ್ಟ ಘಳಿಗೆ. ಆಸ್ಟ್ರೇಲಿಯಾ ಉತ್ತಮವಾಗಿ ಆಡಿದ್ದರಿಂದ ಚಾಂಪಿಯನ್ ಆಯಿತು” ಎಂದು ಅಕ್ರಮ್ ಹೇಳಿದರು.
“1999ರ ವಿಶ್ವಕಪ್ ಫೈನಲ್‌ನಲ್ಲಿ ಪಾಕಿಸ್ತಾನ ಸೋತಿತ್ತು. ಅದಾಗಿ 30 ವರ್ಷಗಳೇ ಕಳೆದಿವೆ. ಆದರೆ ಈ ಬಗ್ಗೆ ನನ್ನಲ್ಲಿ ಈಗಲೂ ಕೂಡ ಜನ ಪ್ರಶ್ನಿಸುತ್ತಲೇ ಇದ್ದಾರೆ. ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳಿಗೆ ಆನೆಯ ನೆನಪಿನ ಶಕ್ತಿ ಇದೆ. ಅವತ್ತು ಟಾಸ್ ಗೆದ್ದ ನಂತರ ನಾನು ಏಕೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿರಿ ಎಂದು ಈಗಲೂ ನನ್ನನ್ನು ಕೇಳುತ್ತಾರೆ. ಮುಂದಿನ ಆರು ತಿಂಗಳಲ್ಲಿ ಮತ್ತೊಂದು ವಿಶ್ವಕಪ್ ಬರಲಿರುವುದರಿಂದ ಅಭಿಮಾನಿಗಳು ಟೀಮ್ ಇಂಡಿಯಾದ ಸೋಲನ್ನು ಮರೆತು ಒಂದು ರಾಷ್ಟ್ರವಾಗಿ ಮುಂದುವರಿಯಬೇಕು” ಎಂದು ಅಕ್ರಮ್ ಸಲಹೆ ನೀಡಿದರು.
ಯಾವಾಗಲೂ ಇರುವದನ್ನು ಇದ್ದಂತೆ ಹೇಳುವ wasim ಅಕ್ರಮ್. ಶ್ರೇಷ್ಠ ಆಟಗಾರ. ಚೆನ್ನಾಗಿ ಆ ದಿನ ಆಡಬೇಕು. ಆದರೆ ನಾವೇ ಗೆಲ್ಲುತ್ತೇವೆ, ಗೆಲ್ಲಬೇಕು ಎನ್ನುವುದು ಮೌಢ್ಯ.
ಪ್ರತೀ ದಿನ ಪ್ರತೀ ಸಲ ನಾವು ಕೈನಲ್ಲಿ ಹಿಡಿಯುವ ಕಪ್ ನಮ್ಮದೇ…….. ಅದು ಕಾಫೀ ಟೀ ಕಪ್