ಲೋಕಸಭೆ ಚುನಾವಣೆಯ ಪ್ರಚಾರಾರ್ಥ ಅಭ್ಯರ್ಥಿ ಬೃಜೇಶ್ ಚೌಟ ಪರವಾಗಿ ಬಿಜೆಪಿ ಮೀನುಗಾರ ಪ್ರಕೋಷ್ಟ ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಂಗಳೂರು ಮೇಯರ್ ಸುಧೀರ್ ಶೆಟ್ಟಿ ಮುಸ್ಲಿಂ ಸಮುದಾಯದ ವಿರುದ್ದ ದ್ವೇಷ ಭಾಷಣ ಮಾಡಿದ್ದು, ಮೊಗವೀರರನ್ನು ಮುಸ್ಲಿಮರ ವಿರುದ್ದ ಎತ್ತಿಕಟ್ಟುವ, ಆ ಮೂಲಕ ಮತೀಯ ದ್ವೇಷವನ್ನು ಹುಟ್ಟು ಹಾಕಿ ಚುನಾವಣೆಯಲ್ಲಿ ರಾಜಕೀಯ ಲಾಭ ಗಿಟ್ಟಿಸುವ ಯತ್ನ ನಡೆಸಿರುತ್ತಾರೆ ಎಂದು ಸಿಪಿಐಎಂ ಹೇಳಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಪತ್ರಿಕಾ ಹೇಳಿಕೆ ನೀಡಿರುವ ಸಿಪಿಎಂ ಕಾರ್ಯಕರ್ತರು, ಬಿಜೆಪಿ ನಾಯಕರ ರಾಜಕೀಯ ದುರುದ್ದೇಶ ಪರಸ್ಪರ ಎತ್ತಿಕಟ್ಟುವ ಮಾತುಗಳನ್ನು ಖಂಡಿಸಿದ್ದು, “ಮೇಯರ್ ಸುಧೀರ್ ಶೆಟ್ಟಿ ಹಾಗೂ ಬಿಜೆಪಿ ಅಭ್ಯರ್ಥಿ ಬೃಜೇಶ್ ಚೌಟ ವಿರುದ್ದ ಚುನಾವಣಾ ಆಯೋಗ ಕ್ರಿಮಿನಲ್ ಮೊಕದ್ದಮೆ ಹೂಡಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಕೆ ಯಾದವ ಶೆಟ್ಟಿ ತಿಳಿಸಿದ್ದಾರೆ.
“ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸತತ ಗೆಲುವು ಸಾಧಿಸಿರುವುದು ಹಿಂದು ಮುಸ್ಲಿಮರನ್ನು ಪರಸ್ಪರ ಎತ್ತಿಕಟ್ಟಿ. ಈ ಚುನಾವಣೆಯಲ್ಲಿ ಹೇಳಿಕೊಳ್ಳಲು ಯಾವುದೇ ಸಾಧನೆ ಇಲ್ಲದೆ ಬಿಜೆಪಿ ಹಾಗೂ ಅದರ ಅಭ್ಯರ್ಥಿ ಬೃಜೇಶ್ ಚೌಟ ಅದೇ ಮತೀಯ ದ್ವೇಷದ ಅಜೆಂಡಾವನ್ನು ಮುನ್ನಲೆಗೆ ತರಲು ಯತ್ನಿಸುತ್ತಿದ್ದಾರೆ. ಅದರ ಭಾಗವಾಗಿ ಮೀನುಗಾರಿಕೆ ಉದ್ಯಮದಲ್ಲಿ ಪರಸ್ಪರ ಅನ್ಯೋನ್ಯತೆಯಲ್ಲಿ ತೊಡಗಿಸಿಕೊಂಡಿರುವ ಮೊಗವೀರರು ಹಾಗೂ ಮುಸ್ಲಿಮರ ಮಧ್ಯೆ ಒಡಕು ಮೂಡಿಸಲು ಕೊಳಕು ಮಾತುಗಳನ್ನು ಆಡಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮುಸ್ಲಿಮರಿಗೆ ಮೀನು ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬಾರದೆಂದು ಓರ್ವ ಜವಾಬ್ದಾರಿಯುತ ಮೇಯರ್ ಲೋಕಸಭಾ ಚುನಾವಣಾ ಅಭ್ಯರ್ಥಿಯ ಮುಂದೆ ಮೊಗವೀರರಿಗೆ ದ್ವೇಷ ಭಾಷಣದ ಮೂಲಕ ಕರೆನೀಡುತ್ತಾರೆ. ಇದು ಚುನಾವಣಾ ಪೂರ್ವದಲ್ಲಿ ದ್ವೇಷದ ವಾತಾವರಣ, ಹಿಂಸಾಚಾರ ಉಂಟು ಮಾಡುವ ಯತ್ನ. ಆ ಮೂಲಕ ಯಾವುದೇ ಸಾಧನೆ ಇಲ್ಲದ ಬಿಜೆಪಿ ಅಭ್ಯರ್ಥಿಯನ್ನು ಅದೇ ಹಳೆಯ ಕೋಮುವಾದದ ಮಾದರಿಯಲ್ಲಿ ಗೆಲ್ಲಿಸಲು ಯತ್ನಿಸುಲಾಗುತ್ತಿದೆ. ಸೋಲಿನ ಭೀತಿಯಿಂದ ಬಿಜೆಪಿ ಇಂತಹ ಅತ್ಯಂತ ಅಪಾಯಕಾರಿ ರಾಜಕಾರಣವನ್ನು ಮಾಡುತ್ತಿದೆ. ಕಳೆದ ಹಲವು ಚುನಾವಣೆಗಳನ್ನು ಇದೇ ಮಾದರಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ” ಎಂದು ಯಾದವ ಶೆಟ್ಟಿ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಕೋಮುವಾದಿ ಬಿಜೆಪಿ ಜೊತೆ ಸೇರಿದ ‘ಎಚ್‌ಡಿಕೆ’ಗಿಲ್ಲ ಬೆಂಬಲ; ಕಾಂಗ್ರೆಸ್‌ಗೆ ಜೈ ಎಂದ ದಲಿತ ಸಂಘಟನೆಗಳು
“ಚುನಾವಣೆಯ ಸಂದರ್ಭ ಸದ್ಯ ತಿಳಿಯಾದ ವಾತಾವರಣ ಇರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಕಲಹಕ್ಕೆ ಪ್ರಚೋದಿಸುವ ಬಿಜೆಪಿ ಮೇಯರ್ ಸುಧೀರ್ ಶೆಟ್ಟಿಯ ಈ ದ್ವೇಷ ಭಾಷಣವನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು. ಮೇಯರ್ ಸುಧೀರ್ ಶೆಟ್ಟಿ ಹಾಗೂ ಬಿಜೆಪಿ ಲೋಕಸಭಾ ಅಭ್ಯರ್ಥಿ ಬೃಜೇಶ್ ಚೌಟರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು.
