ಮಂಗಳೂರು ನಗರದ ಲೇಡಿಗೋಷನ್ ಹೆರಿಗೆ ಅಸ್ಪತ್ರೆಯ ನಾಲ್ಕನೇ ಮಹಡಿಯಿಂದ ಜಿಗಿದು ಬಾಣಂತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ನಡೆದಿದೆ.
ಉಡುಪಿ ಜಿಲ್ಲೆಯ ಕಾರ್ಕಳದ ರಂಜಿತಾ ಆಚಾರ್ಯ(28) ಮೃತರು ಎಂದು ತಿಳಿದುಬಂದಿದೆ.
ರಂಜಿತಾ ಅವರಿಗೆ ಅವಧಿಗೆ ಮೊದಲೇ ಹೆರಿಗೆಯಾಗಿದ್ದು, ಅಕ್ಟೋಬರ್ 30ರಂದು ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು. ಎನ್‌ಐಸಿಯುವಿನಲ್ಲಿ ಅರೈಕೆಯಲ್ಲಿದ್ದ ಶಿಶು ನವೆಂಬರ್ 3ರಂದು ಮೃತಪಟ್ಟಿತ್ತು. ರಂಜಿತಾ ಅವರು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಗೊಳ್ಳಬೇಕಿತ್ತು. ಅಷ್ಟರಲ್ಲಿ ಈ ಘಟನೆ ನಡೆದಿರುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಎಚ್ ಅರ್ ತಿಮ್ಮಯ್ಯ ತಿಳಿಸಿದ್ದಾರೆ.
“ರಂಜಿತಾ ಅವರನ್ನು ಆಸ್ಪತ್ರೆಯಿಂದ ಕರೆದೊಯ್ಯಲು ಮನೆಯವರೂ ಕೂಡ ಲೇಡಿಗೋಷನ್ ಆಸ್ಪತ್ರೆಗೆ ಬಂದಿದ್ದರು. ಆದರೆ ರಂಜಿತಾ ಏಕಾಏಕಿ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಹಾರಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದರು” ಎಂದು ವೈದ್ಯರು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಆಟೋ ಪಲ್ಟಿ: ಓರ್ವ ಮಹಿಳೆ ಸಾವು: ಹಲವರಿಗೆ ಗಾಯ
ರಂಜಿತಾ ಅವರನ್ನು ಹೆರಿಗೆಗಾಗಿ ಮೊದಲು ಕಾರ್ಕಳದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಗೆ ಕೆಲವು ಗಂಭೀರ ಆರೋಗ್ಯ ಸಮಸ್ಯೆ ಇದ್ದುದರಿಂದ ಇಲ್ಲಿನ ಲೇಡಿಗೋಷನ್ ಆಸ್ಪತ್ರೆಗೆ ಅಕ್ಟೋಬರ್ 28ರಂದು ದಾಖಲು ಮಾಡಲಾಗಿತ್ತು ಎನ್ನಲಾಗಿದೆ.