ಜನರ ಆರ್ಥಿಕ ಸಂಕಷ್ಟಗಳ ಪರಿಹಾರದ ಹಿನ್ನೆಲೆಯಲ್ಲಿ ಉಳಿತಾಯ ಯೋಜನೆ ರೂಪಿಸಿ ಸ್ಥಳೀಯರ ಕೋಟ್ಯಾಂತರ ರೂ. ಕೊಳ್ಳೆಹೊಡೆಯಲು ಮಂಗಳೂರಿಗೆ ಬರುವ ಇಂತಹ ಕಂಪೆನಿಗಳ ಮೋಸದ ಜಾಲಕ್ಕೆ ಜನತೆ ಬಲಿಯಾಗಬಾರದು ಎಂದು ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಹೇಳಿದರು.
ಜಿಲ್ಲೆಯ ಮಂಗಳೂರು ನಗರದಲ್ಲಿ ʼಪಿಎಸಿಎಲ್ ಅನ್ಯಾಯದ ವಿರುದ್ಧದ ಹೋರಾಟದ ರೂಪುರೇಷೆಗಾಗಿʼ ಪಿಎಸಿಎಲ್ ಎಜೆಂಟರ ಸಮಾವೇಶʼ ಕಾರ್ಯಕ್ರಮದಲ್ಲಿ ಮಾತನಾಡಿದರು.
“ಮಂಗಳೂರಿಗೆ ಒಂದೊಂದು ಹೆಸರಲ್ಲಿ ಆಗಮಿಸುತ್ತಿರುವ ಕಂಪೆನಿಗಳು ಉಳಿತಾಯ ಹೆಸರಿನ ಯೋಜನೆಯಲ್ಲಿ ಜನಸಾಮಾನ್ಯರ ದುಡಿಮೆಯ ಹಣವನ್ನು ಕೊಳ್ಳೆಹೊಡೆದು ಕೋಟ್ಯಾಂತರ ರೂಪಾಯಿ ಮೋಸ ಮಾಡಿ ಬಾಗಿಲು ಮುಚ್ಚಿದ ಪ್ರಕರಣಗಳ ಬಗ್ಗೆ ಸಾಲು ಸಾಲು ಉದಾಹರಣೆಗಳಿವೆ” ಎಂದರು.
“ಪಿಎಸಿಲ್ ಕಂಪೆನಿ ಒಟ್ಟು 49 ಸಾವಿರ ಕೋಟಿ ರೂಪಾಯಿಗಳಷ್ಟು ವಂಚಿಸಿದೆ. ಈ ಹಿಂದೆಯೂ ನಗರದಲ್ಲಿ ಆದೀಶ್ವರ್ ಮಾರ್ಕೆಟಿಂಗ್ನಿಂದ ಹಿಡಿದು ಬಿಝಾರೆ, ಅಗ್ರಿಗೋಲ್ಡ್, ಸೆವೆನ್ ಹಿಲ್ಸ್, ವೃಕ್ಷ, ಆರ್ಎಂಪಿ, ಸಮೃದ್ಧ ಜೀವನ್ನಂತಹ ಹಲವಾರು ಕಂಪೆನಿಗಳು, ತಮ್ಮ ಮುಂದಿನ ಕನಸಿನ ಯೋಜನೆಗಾಗಿ ಮೀಸಲಿರಿಸಿದ ಸ್ಥಳೀಯರ ಹಣವನ್ನು ದೋಚಿ ಪರಾರಿಯಾಗಿವೆ. ಇಂತಹ ಕಂಪೆನಿಗಳು ಈ ರೀತಿ ರಾಜಾರೋಷವಾಗಿ ದೋಚಲು ಸರ್ಕಾರಗಳೇ ಪರೋಕ್ಷ ಕಾರಣ. ಯಾವುದೇ ಪಾರದರ್ಶಕ ಇಲ್ಲದೆ ಕಂಪೆನಿಗಳಿಗೆ ಜನರಿಂದ ಹಣ ಸಂಗ್ರಹಿಸಲು ಅವಕಾಶ ಮಾಡಿಕೊಟ್ಟಿದ್ದೆ ಇದಕ್ಕೆಲ್ಲ ಕಾರಣ” ಎಂದು ಆರೋಪಿಸಿದರು.
“ಮುಂದಿನ ದಿನಗಳಲ್ಲಿ ಇನ್ನ ಯಾವತ್ತೂ ಇಂತಹ ಕಂಪೆನಿಗಳು ನಗರಕ್ಕೆ ಕಾಲಿಡದಂತೆ ಹಾಗೂ ಯಾವೊಬ್ಬ ಬಡಪಾಯಿಯೂ ಈ ರೀತಿ ಮೋಸದ ಜಾಲಕ್ಕೆ ಬೀಳದಂತೆ ನೋಡಿಕೊಳ್ಳಲು ಮತ್ತು ನಮ್ಮ ಅನ್ಯಾಯಕ್ಕೆ ನ್ಯಾಯ ಸಿಗಲು ನ್ಯಾಯಯುತ ಹೋರಾಟ ನಡೆಸಬೇಕಾಗಿದೆ” ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಯುವ ನಾಯಕ ಬಿ.ಕೆ ಇಮ್ತಿಯಾಜ್ ಮಾತನಾಡಿ, “ಕಳೆದ 9 ವರ್ಷಗಳಿಂದ ಪಿಎಸಿಎಲನಿಂದಾದ ಅನ್ಯಾಯದ ವಿರುದ್ಧ ಏಜೆಂಟರು ಹಾಗೂ ಜನಸಾಮಾನ್ಯರು ತಮ್ಮ ಬೆವರು ಸುರಿಸಿ ದುಡಿದ ಕೋಟ್ಯಾಂತರ ಹಣ ಕಣ್ಣೆದುರು ಲೂಟಿಯಾದರು ಯಾವುದೇ ಒಬ್ಬ ಜನಪ್ರತಿನಿಧಿ ಜನರ ಸಂಕಷ್ಟದ ಬಗ್ಗೆ ಈವರೆಗೆ ಮಾತನಾಡಿಲ್ಲ. ಈ ರೀತಿಯ ಜನರ ಸಂಕಷ್ಟಕ್ಕೆ ಸರ್ಕಾರವೇ ನೇರ ಹೊಣೆ” ಎಂದು ಆರೋಪಿಸಿದರು.
ಜಿಲ್ಲಾ ಕಾರ್ಮಿಕ ಮುಖಂಡ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “ಒಂದು ಕಡೆ ಜನತೆ ಸರ್ಕಾರದ ತಪ್ಪು ಆರ್ಥಿಕ ನೀತಿಗಳಿಂದ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಮತ್ತೊಂದು ಕಡೆ ಉಳಿಸಿದ ಅಲ್ಪ ಸ್ವಲ್ಪ ಹಣವನ್ನು ಈ ನಮೂನೆಯ ಕಂಪನಿಗಳು ನುಂಗಿ ನೀರು ಕುಡಿಯುತ್ತಿವೆ. ಆಳುವ ಸರ್ಕಾರಗಳೇ ಜನತೆಯನ್ನು ದೋಚಲು ಗ್ರೀನ್ ಸಿಗ್ನಲ್ ನೀಡಿದಂತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ನಾಯಕ ಯೋಗೀಶ್ ಜಪ್ಪಿನ ಮೊಗರು, ಮಾಜಿ ಕಾರ್ಪೊರೇಟರ್ ದಯಾನಂದ ಶೆಟ್ಟಿ, ಪಿಎಸಿಎಲ್ ಏಜೆಂಟರ ಮುಖಂಡರುಗಳಾದ ತೆಲ್ಮ ಮೊಂತೆರೋ, ಆಸುಂತ ಡಿಸೋಜ, ಶ್ಯಾಮಲ, ನ್ಯಾನ್ಸಿ ಫೆರ್ನಾಂಡಿಸ್, ರೊಸಲಿನ್ ಪಿಂಟೋ, ಜನಪರ ಚಿಂತಕ ದಾಮೋದರ ಉಳ್ಳಾಲ ಇದ್ದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ದಲಿತ ಯುವ ಚಿಂತಕ ಸಿ ನರೇಂದ್ರ ನಾಗಾವಾಲರಿಗೆ ದ.ಸಾ.ಪ ರಾಜ್ಯ ಗೌರವ ಪ್ರಶಸ್ತಿ
ಪಿಎಸಿಎಲ್ನಿಂದಾದ ಅನ್ಯಾಯದ ವಿರುದ್ಧ ಮುಂಬರುವ ದಿನಗಳಲ್ಲಿ ಪ್ರಬಲ ಹೋರಾಟ ರೂಪಿಸಲು ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸುನಿಲ್ ಕುಮಾರ್ ಬಜಾಲ್, ಗೌರವ ಸಲಹೆಗಾರರಾಗಿ ಬಿ ಕೆ ಇಮ್ತಿಯಾಜ್, ಯೋಗೀಶ್ ಜಪ್ಪಿನ ಮೊಗರು, ಸಂತೋಷ್ ಬಜಾಲ್, ದಾಮೋದರ ಉಳ್ಳಾಲ, ದಯಾನಂದ ಶೆಟ್ಟಿ, ಅಧ್ಯಕ್ಷರಾಗಿ ತೆಲ್ಮಾ ಮೊಂತೇರೋ, ಪ್ರಧಾನ ಕಾರ್ಯದರ್ಶಿಯಾಗಿ ಆಸುಂತಾ ಡಿಸೋಜ, ಖಜಾಂಚಿಯಾಗಿ ನಾನ್ಸಿ ಫೆರ್ನಾಂಡಿಸ್, ಉಪಾಧ್ಯಕ್ಷರಾಗಿ ರೋಸಲಿನ್ ಪಿಂಟೋ, ಶ್ಯಾಮಲ, ಅರುಣಾ ಕೋಟ್ಯಾನ್, ಜನಾರ್ಧನ ಪುತ್ತೂರು, ಜೇಮ್ಸ್ ಪ್ರವೀಣ್, ಕಾರ್ಯದರ್ಶಿಗಳಾಗಿ ದೇವಿಕಾ ಮಂಗಳಾದೇವಿ, ವಾಯಿಲೆಟ್ ಚೇಳೂರು, ಸುನೀತಾ ಬಜಾಲ್, ಶಾಲಿನಿ, ಪದ್ಮನಾಭ ತೋಕೂರು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು ಹಾಗೂ 17 ಮಂದಿಯ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.