ವಿದ್ಯುತ್ ಖಾಸಗೀಕರಣಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರದ ನಡೆ ಅಪಾಯದ ಮುನ್ಸೂಚನೆಯಾಗಿದೆ. ಇದು ಅದಾನಿ ಮತ್ತು ಟಾಟಾ ಕಂಪನಿಯ ಜೇಜು ತುಂಬಿಸುವ ವ್ಯವಸ್ಥೆಯಾಗಿದೆ ಎಂದು ಸಿಐಟಿಯು ಮುಖಂಡ ಸುನಿಲ್‌ಕುಮಾರ್ ಬಜಾಲ್ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಂಘಟನೆಗಳ ಜಂಟಿ ವೇದಿಕೆ (ಜೆಸಿಟಿಯು), ವಿವಿಧ ರೈತ ಸಂಘಟನೆಗಳ ಒಕ್ಕೂಟ (ಎಸ್‌ಕೆಎಂ) ಹಾಗೂ ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ, ಆದಿವಾಸಿ ಹಾಗೂ ಜನಪರ ಸಂಘಟನೆಗಳ ವೇದಿಕೆಯಿಂದ ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಬಿಜೈಯ ಮೆಸ್ಕಾಂ ಪ್ರಧಾನ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
“ಕಳೆದ ಒಂಭತ್ತು ವರ್ಷಗಳಿಂದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸಲು ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಕೇಂದ್ರ ಸರ್ಕಾರ 2023ರ ವಿದ್ಯುತ್ ಕಾಯ್ದೆಯ ಮೂಲಕ ಸರ್ಕಾರದ ಹಿಡಿತವನ್ನು ಸಡಿಲಗೊಳಿಸಿದೆ. ವಿದ್ಯುತ್ ಕ್ಷೇತ್ರ ಖಾಸಗೀಕರಣಗೊಂಡರೆ ಬಳಕೆದಾರರ ಮೇಲೆ ದಬ್ಬಾಳಿಕೆ, ಮಾನಸಿಕ ಹಿಂಸೆ ಉಂಟಾಗುತ್ತದೆ” ಎಂದು ಸುನಿಲ್ ಕುಮಾರ್ ಬಜಾಲ್ ತಿಳಿಸಿದರು.
“2025ರ ಏಪ್ರಿಲ್‌ನಿಂದ ಎಲ್ಲ ಬಳಕೆದಾರರು ಪ್ರೀಪೇಯ್ಡ್ ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸಬೇಕಾಗುತ್ತದೆ. ಪ್ರತಿ ಮೀಟರ್‌ಗೆ ₹8,000ದಂತೆ ದೇಶದ 26 ಕೋಟಿ ವಿದ್ಯುತ್ ಗ್ರಾಹಕರ ಮೂಲಕ ₹2,08,0000 ಕೋಟಿ ಹಣವನ್ನು ಮೀಟರ್ ಅಳವಡಿಕೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಖಾಸಾ ದೋಸ್ತಿಗಳಾದ ಅದಾನಿ ಮತ್ತು ಟಾಟಾ ಕಂಪನಿಯ ಜೇಬು ತುಂಬಿಸುವ ಹುನ್ನಾರ ಇದಾಗಿದೆ. ಇದರಿಂದ ವಿದ್ಯುತ್ ದರ ಏರಿಕೆಯಾಗಲಿದೆ” ಎಂದು ಹೇಳಿದರು.
“ಸ್ಮಾರ್ಟ್ ಮೀಟರ್‌ಗಳನ್ನು ಅಳವಡಿಸದಂತೆ ವಿಶ್ವಸಂಸ್ಥೆ ಈಗಾಗಲೇ ಎಚ್ಚರಿಕೆ ನೀಡಿದ್ದರೂ ಅದನ್ನು ಮೀರಿ ಭಾರತದಲ್ಲಿ ಈ ವ್ಯವಸ್ಥೆಗೆ ಮುಂದಾಗುತ್ತಿರುವುದು ಅಪಾಯದ ಮುನ್ಸೂಚನೆಯಾಗಿದೆ. ಈ ಬಗ್ಗೆ ಧ್ವನಿ ಎತ್ತುವುದು ಅಗತ್ಯವಾಗಿದೆ” ಎಂದರು.
ಎಐಟಿಯುಸಿಯ ಎಚ್ ಪಿ ರಾವ್ ಮಾತನಾಡಿ, “ಸರ್ಕಾರಿ ಸಂಸ್ಥೆಗಳ ಖಾಸಗೀಕರಣವನ್ನು ನಾವು ವಿರೋಧಿಸುತ್ತಾ ಬಂದಿದ್ದರೂ ಕೇಂದ್ರ ಸರ್ಕಾರ ಮಾತ್ರ ಈ ಬಗ್ಗೆ ಕ್ಯಾರೇೆ ಎನ್ನುತ್ತಿಲ್ಲ. ಜನರನ್ನು ಖಾಸಗಿಯವರ ಗುಲಾಮರನ್ನಾಗಿ ಮಾಡುವ ಕಾರ್ಯದ ಬಗ್ಗೆ ನಾವು ಎಚ್ಚೆತ್ತುಕೊಳ್ಳಬೇಕು” ಎಂದು ಹೇಳಿದರು.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಯೋಜನೆ ಪ್ರಸ್ತಾಪಾಸಿ ಮಾತನಾಡಿ, “ಈ ಯೋಜನೆಯಡಿ ಚೆನ್ನೈನ ಸರ್ಕಾರಿ ಸಂಸ್ಥೆಯಲ್ಲಿ ಖಾಸಗಿಯವರು ಬೋಗಿಗಳನ್ನು ತಯಾರಿಸಲು ಅವಕಾಶ ನೀಡಲಾಗುತ್ತಿದೆ. ಸರ್ಕಾರದ ಸಂಸ್ಥೆಯ ಜತೆಗೆ ವಿದ್ಯುತ್, ನೀರು ಎಲ್ಲವನ್ನೂ ಬಳಸಿ ಅಲ್ಲಿ ಬೋಗಿಗಳನ್ನು ತಯಾರಿಸಿ ಸರ್ಕಾರಕ್ಕೆ ಮಾರಾಟ ಮಾಡಿ ನಿರ್ವಹಣೆ ಮಾಡುವ ಕಾರ್ಯ ಖಾಸಗಿಯವರಿಗೆ ಒಪ್ಪಿಸಿ ಅವರಿಗೆ ಲಾಭ ಮಾಡಿಸುವ ತಂತ್ರಗಾರಿಕೆ ಇದಾಗಿದ್ದು, ಇದೀಗ ಜೀವನದ ಬಹು ಮುಖ್ಯವಾದ ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವುದು ಆತಂಕಕಾರಿ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಶಿವಮೊಗ್ಗ | ಜಿಲ್ಲಾ ಉಸ್ತುವಾರಿ ಸಚಿವ ಯಾರೆಂಬುದೇ ನನಗೆ ಗೊತ್ತಿಲ್ಲ: ಶಾಸಕ ಬೇಳೂರು ಗೋಪಾಲಕೃಷ್ಣ
ದಲಿತ ಸಂಘಟನೆಯ ಮುಖಂಡ ಎಂ ದೇವದಾಸ್ ಮಾತನಾಡಿ, “ಈಸ್ಟ್ ಇಂಡಿಯಾ ಕಂಪನಿಯ ಮೂಲಕ ಬ್ರಿಟಿಷರು ಭಾರತದ ಸಂಪತ್ತನ್ನು ಕೊಳ್ಳೆ ಹೊಡೆದು ಇಂಗ್ಲೆಂಡ್‌ಗೆ ಸಾಗಿಸಿದ್ದರು. ಇದೀಗ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಬಂದ ಬಳಿಕ ದೇಶದ ಸಂಪತ್ತನ್ನು ಅಂಬಾನಿ, ಅದಾನಿಗಳಿಗೆ ಮಾರಾಟ ಮಾಡುವ ಕಾರ್ಯ ನಡೆಯುತ್ತಿದೆ. ಹಾಗಾಗಿ ದೇಶದ ಸಂಪತ್ತನ್ನು ಉಳಿಸಲು ಈ ಖಾಸಗೀಕರಣದ ಹೋರಾಟ ಅನಿವಾರ್ಯ” ಎಂದರು.
ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರುಗಳಾದ ಸೀತಾರಾಂ ಬೇರಿಂಜ, ವಿ ಕುಕ್ಯಾನ್, ಶೇಖರ್, ನಾಗೇಶ್ ಕೋಟ್ಯಾನ್, ಭಾರತಿ ಬೋಳಾರ್, ಸುಹಾನ್ ಆಳ್ವ, ಮಂಜಪ್ಪ ಪುತ್ರನ್, ಪ್ರಮೀಳಾ ದೇವಾಡಿಗ, ಅಶುಂತ ಡಿಸೋಜಾ ಸೇರಿದಂತೆ ಇತರರು ಇದ್ದರು.