ಕರಾವಳಿಯಲ್ಲಿ ಜಾತ್ರೆ, ಸಮಾರಂಭಗಳ ವ್ಯಾಪಾರಗಳ ಮೇಲೆ ಕೋಮು ದ್ವೇಷದ ಛಾಯೆ ಮತ್ತೆ ಮುನ್ನೆಲೆಗೆ ಬಂದಿದೆ. ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿಲ್ಲ. ಸನಾತನಿಗಳ ಮಾತಿಗೆ ಕಟ್ಟುಬಿದ್ದು ಆಡಳಿತ ಮಂಡಳಿಯು ಮುಸ್ಲಿಂ ವ್ಯಾಪಾರಿಗಳಿಗೆ ವಂಚಿಸಿದೆ ಎಂಬ ಆರೋಪ ಕೇಳಿಬಂದಿದೆ. ವಿವಿಧ ಸಂಘಟನೆಗಳು ಅದನ್ನು ಖಂಡಿಸಿದ್ದು, ಶುಕ್ರವಾರ ಜಿಲ್ಲಾಧಿಕಾರಿ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಅಕ್ಟೋಬರ್ 15ರಿಂದ 24ರವರೆಗೆ ಮಂಗಳಾದೇವಿ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರೆಯಲ್ಲಿ ಅಂಗಡಿ ಮಳಿಗೆ ತೆರೆಯಲು ಮುಸ್ಲಿಂ ವ್ಯಾಪಾರಿಗಳು ಅರ್ಜಿ ಸಲ್ಲಿಸಿದ್ದರೂ, ಅವರನ್ನು ದೇವಸ್ಥಾನ ಆಡಳಿತ ಮಂಡಳಿ ನಿರ್ಲಕ್ಷಿಸಿದೆ. ನಾಳೆ ಬನ್ನಿ, ಆಗ ಬನ್ನಿ, ಈಗ ಬನ್ನಿ ಅಂತ ಹೇಳುತ್ತಾ ಕಾಲ ಹರಣ ಮಾಡಿದೆ. ಇದೀಗ, ನಾವು ಕರೆದಾಗ ನೀವು ಬಂದಿಲ್ಲ. ನಿಮಗೆ ವ್ಯಾಪಾರ ಮಾಡಲು ಅವಕಾಶವಿಲ್ಲ ಎಂದು ಆಡಳಿತ ಮಂಡಳಿ ಹೇಳಿದೆ. ಉದ್ದೇಶಪೂರ್ವಕವಾಗಿ ಮುಸ್ಲಿಂ ವ್ಯಾಪಾರಿಗಳನ್ನು ಹೊರಗಿಡುವ ಹುನ್ನಾರ ನಡೆದಿದೆ ಎಂದು ಜನಪರ ಸಂಘಟನೆಗಳು ಮತ್ತು ಮುಸ್ಲಿಂ ವ್ಯಾಪಾರಿಗಳು ಆರೋಪಿಸಿದ್ದಾರೆ.
ಮಂಗಳಾದೇವಿ ಜಾತ್ರೆಯೂ ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಅವಕಾಶ ನೀಡಲೇಬೇಕೆಂದು ಒತ್ತಾಯಿಸಿ ಜಾತ್ರೆ ವ್ಯಾಪಾರಸ್ಥರ ಸಮನ್ವಯ ಸಮಿತಿ ಒತ್ತಾಯಿಸಿದೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ದೂರು ನೀಡಿದೆ. ಅವರ ದೂರನ್ನು ಪರಿಗಣಿಸಿರುವ ಜಿಲ್ಲಾಧಿಕಾರಿ ಶುಕ್ರವಾರ ಮಧ್ಯಾಹ್ನ ಸಭೆ ಕರೆದಿದ್ದಾರೆ.
ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಿರ್ಬಂಧಿಸಿರುವ ಕುರಿತು ಈದಿನ.ಕಾಮ್ ಜೊತೆ ಮಾತನಾಡಿದ ಡಿವೈಎಫ್‌ಐ ಸಂಘಟನೆ ಸುನೀಲ್ ಕುಮಾರ್ ಬಜಾಲ್, “ಜಾತ್ರೆಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧಿಸುವ ಖಯಾಲಿ ಕೆಲವು ವರ್ಷಗಳಿಂದ ನಡೆಯುತ್ತಲೇ ಇದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಇದು ಹೆಚ್ಚಾಗಿತ್ತು. ಇಗ ಸರ್ಕಾರ ಬದಲಾಗಿದೆ. ಆದರೂ, ಅಧಿಕಾರಿಗಳಿಗೆ ಹಿಂದಿನ ಸರ್ಕಾರದ ಮನಸ್ಥಿತಿ ಬದಲಾಗಿಲ್ಲ. ಹೀಗಾಗಿ, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ ಹೇರುವುದನ್ನು ಮುಂದುವರೆಸುತ್ತಿದ್ದಾರೆ. ದೇವಸ್ಥಾನ ಆಡಳಿತ ಮಂಡಳಿಯು ಉದ್ದೇಶಪೂರ್ವ ಮುಸ್ಲಿಂ ವ್ಯಾಪಾರಿಗಳನ್ನು ದೂರವಿಡುತ್ತಿದೆ” ಎಂದು ಆರೋಪಿಸಿದ್ದಾರೆ.
“ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದೇ ಇರುವ ಬಗ್ಗೆ ಪ್ರಶ್ನಿಸಿದಾಗ, ಸನಾತನ ಸಂಸ್ಥೆಯ ಮುಖಂಡರೊಬ್ಬರು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡದಂತೆ ಮನವಿ ಸಲ್ಲಿಸಿದ್ದಾರೆ. ಹೀಗಾಗಿ, ಸಮಸ್ಯೆ ಮಾಡಿಕೊಳ್ಳುವುದು ಬೇಡವೆಂದು ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಲಿಲ್ಲವೆಂದು ದೇವಸ್ಥಾನ ಆಡಳಿತ ಮಂಡಳಿ ಒಪ್ಪಿಕೊಂಡಿದೆ” ಎಂದು ಅವರು ತಿಳಿಸಿದ್ದಾರೆ.
“ದೇವಸ್ಥಾನದ ಒಳ ಪ್ರಾಂಗಣದಲ್ಲಿ ಅನ್ಯಧರ್ಮೀಯರು ವ್ಯಾಪಾರ ಮಾಡುವಂತಿಲ್ಲ ಎಂಬುದು ನಮಗೂ ಗೊತ್ತಿದೆ. ಆ ಪರಾಂಗಣದಲ್ಲಿ ದೇವಸ್ಥಾನದ್ದೇ ಅದ ಒಂದೆರಡು ಅಂಗಡಿಗಳು ಮಾತ್ರ ಇರುತ್ತವೆ. ಆದರೆ, ಜಾತ್ರೆ ನಡೆಯುವುದು ದೇವಸ್ಥಾನದ ಹೊರಭಾಗದಲ್ಲಿ. ಮುಖ್ಯವಾಗಿ ರಸ್ತೆ ಆಸುಪಾಸು ಮತ್ತು ಮೈದಾನದಲ್ಲಿ. ಆ ಪ್ರದೇಶವು ಮಹಾನಗರ ಪಾಲಿಕೆ ಅಧೀನಕ್ಕೆ ಬರುತ್ತದೆ. ಅಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಬೇಕಾದವರು ಪಾಲಿಕೆಯ ಆಯುಕ್ತರು. ಆದರೆ, ಜಾತ್ರೆಯಲ್ಲಿ ವ್ಯಾಪಾರ ಮಾಡಲು ಆಡಳಿತ ಮಂಡಳಿ ಅನುಮತಿ ನೀಡುತ್ತಿದೆ. ಇದು ಕಾನೂನುಬಾಹಿರ” ಎಂದು ಸುನೀಲ್ ಕುಮಾರ್ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಕೋಮು ದ್ವೇಷ ಪ್ರಕರಣ: ವಿಕ್ರಮ್ ಹೆಗಡೆ ವಿರುದ್ಧ ವಿಚಾರಣೆ ಹಿಂಪಡೆಯಲು ಮುಂದಾಗಿದೆಯೇ ಸರ್ಕಾರ?
“ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ವ್ಯಾಪಾರ ನಡೆಸಲು ಅನುಮತಿ ನೀಡುವಲ್ಲಿಯೂ ಆಡಳಿತ ಮಂಡಳಿ ಭಾರೀ ಸುಲಿಗೆ ಮಾಡುತ್ತಿದೆ. ಜಾತ್ರೆಗಳಲ್ಲಿ ವ್ಯಾಪಾರ ಮಾಡಲು 50 ರಿಂದ 100 ರೂ. ಅಥವಾ 200 ರೂ. ಶುಲ್ಕ ವಸೂಲಿ ಮಾಡಬೇಕು. ಈ ಹಿಂದೆ ಅಷ್ಟೇ ಶುಲ್ಕ ವಿಧಿಸಲಾಗುತ್ತಿತ್ತು. ಆದರೆ, ಈಗ ಒಂದು ವಾರಕ್ಕೆ 7,500 ರೂ. ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಚುರುಮುರಿ ಮಾರುವವರು ದಿನಕ್ಕೆ ಕನಿಷ್ಠ 1,000 ರೂ. ಶುಲ್ಕವನ್ನೇ ಭರಿಸಬೇಕಾಗುತ್ತದೆ. ಇದು ಹಗಲು ದರೋಡೆಯಾಗಿದೆ. ಅಷ್ಟೊಂದು ಶುಲ್ಕ ವಿಧಿಸಿ ವ್ಯಾಪಾರ ಮಾಡಿ, ವ್ಯಾಪಾರಸ್ಥರು ಏನನ್ನು ಗಳಿಸಲು ಸಾಧ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ವ್ಯಾಪಾರ ನಿರ್ಬಂಧ ಮತ್ತು ಅಧಿಕ ಶುಲ್ಕದ ಬಗ್ಗೆ ಮಹಾನಗರ ಪಾಲಿಕೆ, ಜಿಲ್ಲಾಧಿಕಾರಿಗೆ ದೂರು ನೀಡಿದ್ದೇವೆ. ಪ್ರತಿಭಟನೆ ನಡೆಸಿದ್ದೇವೆ. ಜಿಲ್ಲಾಧಿಕಾರಿ ಶುಕ್ರವಾರ ಮಧ್ಯಾಹ್ನ ಸಭೆ ಕರೆದಿದ್ದಾರೆ. ಸಭೆಯಲ್ಲಿ ಎಲ್ಲದರ ಬಗ್ಗೆಯೂ ಚರ್ಚೆ ನಡೆಸುತ್ತೇವೆ. ವ್ಯಾಪಾರಕ್ಕೆ ಅವಕಾಶ ನೀಡಬೇಕು ಮತ್ತು ಶುಲ್ಕವನ್ನು ಕಡಿತಗೊಳಿಸಬೇಕೆಂದು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದ್ದಾರೆ.