ರಾಜ್ಯದ ಗುತ್ತಿಗೆದಾರರ 20 ಸಾವಿರ ಕೋಟಿ ಬಿಲ್ ಬಾಕಿ ಇದೆ. ಬಾಕಿ ಬಿಲ್ ಪಾವತಿಸುವಂತೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ ರಾಜ್ಯ ಸರ್ಕಾರ ಇದುವರೆಗೆ ಪಾವತಿ ಮಾಡಿಲ್ಲ. 30 ದಿನಗಳ ಒಳಗೆ ಎಲ್ಲ ಹಣವನ್ನು ಬಿಡುಗಡೆ ಮಾಡುವಂತೆ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಸರ್ಕಾರಕ್ಕೆ ಗಡುವು ನೀಡಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಇಂದು ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದಿಂದ ಇನ್ನೂ 20 ಸಾವಿರ ಕೋಟಿ ಬಾಕಿ ಬರಬೇಕಿದೆ. ಮೂವತ್ತು ದಿನಗಳ ಸಮಯ ಕೊಡುತ್ತಿದ್ದೇವೆ. ಎಲ್ಲವನ್ನೂ ಬಿಡುಗಡೆ ಮಾಡಬೇಕು ಎಂದು ತಿಳಿಸಿದ್ದಾರೆ.
‘ಗುತ್ತಿಗೆದಾರರ ಹಳೆಯ ಸಮಸ್ಯೆಗಳ ಜೊತೆಗೆ ಹೊಸ ಸಮಸ್ಯೆ ಕೂಡ ಸೇರ್ಪಡೆಯಾಗಿದೆ. ಜಲಸಂಪನ್ಮೂಲ, ಸಣ್ಣ ನೀರಾವರಿ, ಲೋಕೋಪಯೋಗಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ಹಲವು ಇಲಾಖೆಗಳಿಂದ ಬಾಕಿ ಹಣ ಬರಬೇಕಿದೆ. ತನಿಖೆಯ ಹೆಸರಲ್ಲಿ ರಾಜ್ಯ ಸರ್ಕಾರ ಬಾಕಿ ಹಣ ತಡೆಹಿಡಿದಿದೆ. ಕೆಲವು ಇಲಾಖೆಗಳಲ್ಲಿ ಶೇಕಡಾ 7ರಷ್ಟು ಹಣ ಬಿಡುಗಡೆ ಮಾಡಿದ್ದಾರೆ. ಒಂದು ತಿಂಗಳಲ್ಲಿ ಶೇ.50ರಷ್ಟು ಬಾಕಿ ಮೊತ್ತ ಬಿಡುಗಡೆ ಮಾಡಬೇಕು’ ಎಂದು ಡಿ.ಕೆಂಪಣ್ಣ ಆಗ್ರಹಿಸಿದರು.
ಬಾಕಿ ಬಿಲ್ ಪಾವತಿಸುವಂತೆ, ಈಗಾಗಲೇ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಆದರೆ, ಇದುವರೆಗೆ ಪಾವತಿ ಮಾಡಿಲ್ಲ. ನಮ್ಮ ಪರಿಸ್ಥಿತಿ ರೈತರಿಗಿಂತ ಬಹಳ ಕೆಟ್ಟದಾಗಿದೆ. ಬಹಳ ಕಷ್ಟದಲ್ಲಿದ್ದೇವೆ. ದಯವಿಟ್ಟು ನಮ್ಮ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಕೆಂಪಣ್ಣ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಬಿಲ್ ಪಾವತಿಸಲ್ಲ ಅಂದರೆ ಹೋರಾಟ ಅನಿವಾರ್ಯ. ಇಲ್ಲಿ ಯಾವುದೇ ಪಕ್ಷ ಇಲ್ಲ. ಕೆಂಪಣ್ಣ ಎಲ್ಲಿದ್ದಿಯಾ ಎಂದು ಜೆಡಿಎಸ್‌ನ ಜಿಟಿ ದೇವೇಗೌಡರು ಕೇಳಿದ್ದಾರೆ. ಮೂರು ವರ್ಷದಿಂದ ಹೋರಾಟ ಮಾಡುವಾಗ ನೀವು ಎಲ್ಲಿದ್ರಿ? ಕಾಂಗ್ರೆಸ್ ಅವರು ತಪ್ಪು ಮಾಡಿದ್ರೂ ಹೋರಾಟ ಮಾಡುತ್ತೇವೆ. ಸಿಎಂ ಒಂದು ತಿಂಗಳೊಳಗೆ ಸಭೆ ಮಾಡಿ ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಕೆಂಪಣ್ಣ, ಗುತ್ತಿಗೆದಾರರ ಸಂಘದಲ್ಲಿ ಎಲ್ಲ ಪಕ್ಷದಲ್ಲಿ ಗುರುತಿಸಿಕೊಂಡಿರುವ ಜನರೂ ಇದ್ದಾರೆ. ನಮ್ಮಲ್ಲಿ ಯಾವುದೇ ಹುಳುಕುಗಳಿಲ್ಲ. ಕಾಮಗಾರಿ ಬಂದ್ ಮಾಡಲು ಯಾವುದೇ ಕಾಮಗಾರಿ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ.
ಈ ಸರ್ಕಾರದ ಬಗ್ಗೆ ಯಾವುದೇ ಗುತ್ತಿಗೆದಾರರು ಕಮಿಷನ್ ಬಗ್ಗೆ ದೂರು ನೀಡಿಲ್ಲ
ರಾತ್ರೋರಾತ್ರಿ ಬಿಲ್ ಪಾವತಿಗೆ ಕೆಲವರಿಗೆ ಚೆಕ್ ಕೊಡುತ್ತಿದ್ದಾರೆ. ಕಮಿಷನ್ ಇದೆಯೋ ಇಲ್ಲವೋ ಗೊತ್ತಿಲ್ಲ. ಹಿಂದಿನ ಸರ್ಕಾರದಲ್ಲಿ ನಮ್ಮ ಗುತ್ತಿಗೆದಾರರು ಬರೆವಣಿಗೆಯಲ್ಲಿ ಕಮಿಷನ್ ಕೇಳುತ್ತಿರುವ ಬಗ್ಗೆ ದೂರನ್ನು ನಮಗೆ ಕೊಟ್ಟಿದ್ದರು. ಆದರೆ, ಈಗ ಯಾವುದೇ ಕಮಿಷನ್ ದೂರು ಬಂದಿಲ್ಲ. ಈ ಸರ್ಕಾರ ಬಂದು ಐದೂವರೆ ತಿಂಗಳಾಗಿದೆ. ಯಾವುದೇ ಗುತ್ತಿಗೆದಾರರು ಕಮಿಷನ್ ಕೇಳುತ್ತಿರುವ ಬಗ್ಗೆ ದೂರು ನೀಡಿಲ್ಲ. ಒಬ್ಬ ದೂರು ಕೊಟ್ಟು ದಾಖಲೆಗಳನ್ನು ನೀಡಿದರೆ ಮುಂದಿನ ಹೋರಾಟವನ್ನು ನಿರ್ಧರಿಸುತ್ತೇವೆ ಎಂದು ಕೆಂಪಣ್ಣ ಸ್ಪಷ್ಟಪಡಿಸಿದರು.
ಸಚಿವ ಜಾರಕಿಹೊಳಿ ಹೊಗಳಿದ ಕೆಂಪಣ್ಣ
ನಾವು ಒಳ್ಳೆಯದನ್ನು ಒಳ್ಳೆಯದು ಎಂದೇ ಹೇಳುತ್ತೇವೆ. ಹಾಗಾಗಿ, ಹಣ ಬಿಡುಗಡೆಯ ವಿಚಾರದಲ್ಲಿ ಲೋಕೋಪಯೋಗಿ ಇಲಾಖೆ ಮಾತ್ರ ಹಿರಿತನವನ್ನು ಪರಿಗಣಿಸುತ್ತಿದೆ. ಸಚಿವ ಸತೀಶ್ ಜಾರಕಿಹೊಳಿಯವರು ನಮಗೆ ಸಿಕ್ಕ ಉತ್ತಮ ಸಚಿವರು ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಜಾರಕಿಹೊಳಿಯವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಂಬಿಕಾಪತಿ ಮನೆಯಲ್ಲಿ ಸಿಕ್ಕ 42 ಕೋಟಿ ಹಣದ ಬಗ್ಗೆ ನಮಗೆ ಗೊತ್ತಿಲ್ಲ
ಬಿಬಿಎಂಪಿ ಗುತ್ತಿಗೆಗಾರರ ಸಂಘದ ಅಧ್ಯಕ್ಷ ಅಂಬಿಕಾಪತಿ ಮಗಳ ಮನೆ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದಾಗ 42 ಕೋಟಿ ಹಣ ಪತ್ತೆಯಾದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿ, ನಮಗೆ ಮಾಹಿತಿ ಸಿಕ್ಕಿದೆ ಅಷ್ಟೇ. ಅವರಿಗೆ ಕೃಷಿ, ಜಲ್ಲಿ, ಕ್ರಷರ್ ಸೇರಿದಂತೆ ಅನೇಕ ವ್ಯಾಪಾರಗಳಿವೆ. ಬೇರೆ ಬೇರೆ ಉದ್ಯಮಗಳನ್ನು ಕೂಡ ಮಾಡುತ್ತಿದ್ದದ್ದು ಹೌದು. ಆದರೆ, ಅದು ಯಾವುದರ ಹಣ ಎಂಬುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪ್ರತಿಕ್ರಿಯಿಸಿದರೆ ನಾನು ಮೂರ್ಖನಾಗುತ್ತೇನೆ. ಅವರ ಗುತ್ತಿಗೆ ಹಣ ಯಾವುದೇ ಬಾಕಿ ಇಲ್ಲ. ಅವರು ಎಂಟು ವರ್ಷದಿಂದ ಗುತ್ತಿಗೆ ಕೆಲಸ ಮಾಡುತ್ತಿಲ್ಲ. ಅವರು ತಪ್ಪಿತಸ್ಥರಾಗಿದ್ದರೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಲಿದೆ ಎಂದು ಕೆಂಪಣ್ಣ ತಿಳಿಸಿದರು.