ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ನಗರದಲ್ಲಿ ವಿದ್ಯುತ್ ಕೇಬಲ್ ಅಳವಡಿಸಲು ಅಗೆದಿರುವ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸುವಂತೆ ಮಂಗಳೂರು ಮಹಾನಗರ ಪಾಲಿಕೆಯು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮಕ್ಕೆ (ಕೆಪಿಟಿಸಿಎಲ್) ಪತ್ರ ಬರೆದಿದೆ.
ಕಾಮಗಾರಿ ಪೂರ್ಣಗೊಂಡ ಬಳಿಕ ರಸ್ತೆಗಳನ್ನು ಸರಿಯಾಗಿ ದುರಸ್ತಿ ಮಾಡಿಲ್ಲವೆಂದು ಕೆಪಿಟಿಸಿಎಲ್ ಕಾರ್ಯನಿರ್ವಾಹಕ ಎಂಜಿನಿಯರ್‌ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
“ಬಿಜೈ ಸಬ್ ಸ್ಟೇಷನ್‌ನಿಂದ ನೆಹರೂ ಮೈದಾನದವರೆಗೆ ಎಚ್‌ಡಿಡಿ ತಂತ್ರಜ್ಞಾನ ಬಳಸಿ ಕಾಂಕ್ರೀಟ್ ರಸ್ತೆ ಅಗೆದು 110 ಕೆವಿ ಕೇಬಲ್ ಹಾಕುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಹಾಗಾಗಿ ಕೇಬಲ್‌ಗಳನ್ನು ಹಾಕಲು ರಸ್ತೆಯನ್ನು ಅಗೆದ ನಂತರ, ಅದನ್ನು ಸರಿಯಾಗಿ ಪುನಃಸ್ಥಾಪಿಸಿಲ್ಲ. ಪರಿಣಾಮವಾಗಿ, ಪಾದಚಾರಿಗಳು ಮತ್ತು ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ” ಎಂದು ಎಂಸಿಸಿ ಅಧಿಕಾರಿ ಹೇಳಿದ್ದಾರೆ.
“ಕೆಎಸ್ ರಾವ್ ರಸ್ತೆಯ ಸಿಟಿ ಸೆಂಟರ್ ಮಾಲ್ ಬಳಿ ಮತ್ತು ಟ್ರಾಫಿಕ್ ಸಿಗ್ನಲ್ ಬಳಿ ಕೇಬಲ್ ಹಾಕಲು ಅಗೆದ ಗುಂಡಿಗಳಲ್ಲಿ ದ್ವಿಚಕ್ರ ವಾಹನ ಸವಾರರು ಆಕಸ್ಮಿಕವಾಗಿ ಬಿದ್ದಿರುವ ಬಗ್ಗೆ ಮಹಾನಗರ ಪಾಲಿಕೆಗೆ ಅನೇಕ ದೂರುಗಳು ಬಂದಿವೆ. ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಸರಿಯಾಗಿ ಮುಚ್ಚದಿರುವುದು ಕಂಡುಬಂದಿದ್ದು, ದ್ವಿಚಕ್ರ ವಾಹನವು ಹಳ್ಳಕ್ಕೆ ಬೀಳುವ ಫೋಟೋ ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿಯ ಕೊರತೆಯ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ” ಎಂದು ಉಲ್ಲೇಖಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಬಿಇಒ ಕಚೇರಿಯಲ್ಲಿ ಮ್ಯಾನೇಜರ್ ಆತ್ಮಹತ್ಯೆ
“ಮಂಗಳೂರು ಮಹಾನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರರು ಕೇಬಲ್ ಹಾಕಲು ಅಗೆದ ರಸ್ತೆಯ ದುರಸ್ತಿ ಕಾರ್ಯವನ್ನು ಕೂಡಲೇ ಕೈಗೆತ್ತಿಕೊಂಡು ಆದಷ್ಟು ಬೇಗ ಪೂರ್ಣಗೊಳಿಸಬೇಕು” ಎಂದು ಕೆಪಿಟಿಸಿಎಲ್‌ಗೆ ಸೂಚಿಸಿದ್ದಾರೆ.
“ನಗರದಲ್ಲಿ ರಸ್ತೆಗಳನ್ನು ಅಗೆಯುವಾಗ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಖಚಿತಪಡಿಸಿಕೊಳ್ಳುವ ಬಗ್ಗೆ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆ ಕೆಪಿಟಿಸಿಎಲ್‌ಗೆ ತಿಳಿಸಿದ್ದು, ಗುತ್ತಿಗೆದಾರರ ನಿರ್ಲಕ್ಷ್ಯದಿಂದ ಯಾವುದೇ ಅಪಘಾತ ಸಂಭವಿಸಿದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಿ” ಎಂದು ಎಂಸಿಸಿ ಕೆಪಿಟಿಸಿಎಲ್‌ಗೆ ಪತ್ರ ಬರೆದಿದೆ.