ಬಂಟ್ವಾಳದಲ್ಲಿ ಯುವತಿಯನ್ನು ದುರುಳನೊಬ್ಬ ಹತ್ಯೆಗೈದ ಬಳಿಕ, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಪ್ರಚೋದನಾತ್ಮಕ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಹಲವು ಸಾಮಾಜಿಕ ಜಾಲತಾಣ ಖಾತೆಗಳು ಮತ್ತು ವಾಟ್ಸ್ಆ್ಯಪ್ ಗುಂಪುಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, “ಹತ್ಯೆ ಪ್ರಕರಣವನ್ನು ಆಧರಿಸಿ ಸಮಾಜದಲ್ಲಿ ಉದ್ವಿಗ್ನತೆ ಉಂಟುಮಾಡುವ ಉದ್ದೇಶದಿಂದ ಕೆಲವು ವ್ಯಕ್ತಿಗಳು ಮತ್ತು ಗುಂಪುಗಳು ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿರುವುದು ಗಮನಕ್ಕೆ ಬಂದಿದೆ” ಎಂದು ತಿಳಿಸಿದ್ದಾರೆ.
“ಪ್ರಾಥಮಿಕ ತನಿಖೆಯಲ್ಲಿ, ಹತ್ಯೆಯ ಆರೋಪಿಯ ಭಾವಚಿತ್ರವನ್ನು ತಿರುಚಿ ಅದಕ್ಕೆ ಕೇಸರಿ ಶಾಲು ಹಾಗೂ ಕುಂಕುಮ ಸೇರಿಸಿ, ಬಜರಂಗ ಕಾರ್ಯಕರ್ತನಂತೆ ಬಿಂಬಿಸುವ ರೀತಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗಿದೆ. ಜೊತೆಗೆ ಸಮಾಜದಲ್ಲಿ ಶಾಂತಿ ಕದಡುವ ಮತ್ತು ದ್ವೇಷ ಪ್ರಚೋದಿಸುವ ಬರಹಗಳನ್ನೂ ಪ್ರಕಟಿಸಲಾಗಿದೆ ಎನ್ನಲಾಗಿದೆ” ಎಂದು ಅವರು ವಿವರಿಸಿದ್ದಾರೆ.
ಈ ಸಂಬಂಧ ‘ಟ್ರೋಲ್ ಮಾಸ್ಟರ್’ ಇನ್ಸ್ಟಾಗ್ರಾಂ ಖಾತೆ, ‘ಯುವ ಬೆಳ್ತಂಗಡಿ’, ‘ಪದ್ಮರಾಜ್ ಪದ್ಮರಾಜಪರಿ’, ‘ಯುವ ಕಾಂಗ್ರೆಸ್ ಬೆಳ್ತಂಗಡಿ’ ಹಾಗೂ ‘ಫ್ಯಾಕ್ಟ್ ಅಂಡ್ ಜಸ್ಟೀಸ್’ ಎಂಬ ವಾಟ್ಸ್ಆ್ಯಪ್ ಗುಂಪುಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಸೆಕ್ಷನ್ 196 ಹಾಗೂ 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದಲ್ಲದೆ, ‘ಶೈಲಜಾ ಅಮರನಾಥ’ ಎಂಬ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಮಾಜದ ಶಾಂತಿ ಭಂಗವಾಗುವ ರೀತಿಯ ಸುಳ್ಳು ಪೋಸ್ಟ್ಗಳನ್ನು ಪ್ರಕಟಿಸಿರುವ ಆರೋಪದ ಮೇಲೂ ಪ್ರಕರಣ ದಾಖಲಾಗಿದೆ.
ಮತ್ತೊಂದೆಡೆ, ‘ಚೇತನ್ ಬೆಳ್ಚಡ’ ಎಂಬ ಫೇಸ್ಬುಕ್ ಖಾತೆಯಲ್ಲಿ ಕೊಲೆ ಆರೋಪಿಯ ಚಿತ್ರವನ್ನು ಕಾಂಗ್ರೆಸ್ ಕಾರ್ಯಕರ್ತನಂತೆ ತಿರುಚಿ ಹಂಚಿಕೊಂಡಿರುವ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.
ಹತ್ಯೆ ಪ್ರಕರಣದ ಕುರಿತು ಯಾವುದೇ ಪರಿಶೀಲಿಸದ ಅಥವಾ ತಿರುಚಿದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಿದ್ದಾರೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಉದ್ದೇಶದ ಪೋಸ್ಟ್ಗಳ ವಿರುದ್ಧ ಕಾನೂನು ಕ್ರಮ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.




