ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಚಡಕಲಗುಡ್ಡ ಗ್ರಾಮದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರಿಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ದಿನೇ ದಿನೇ ಬಾಬಾ ಸಾಹೇಬರ ಮೂರ್ತಿಗಳಿಗೆ ಅವಮಾನಗಳು ನಿರಂತರ ಹೆಚ್ಚಾಗಿ ಕಂಡು ಬರುತ್ತಿವೆ. ಇಂತಹ ಪ್ರಕರಣಗಳು ದಾಖಲಾದರೂ ಕಿಡಿಗೇಡಿಗಳನ್ನು ಕಠಿಣ ಶಿಕ್ಷೆ ವಿಧಿಸಲು ಅಧಿಕಾರಿಗಳು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78 ವರ್ಷ ಗತಿಸಿದೆ. ಇನ್ನೂ ಕೂಡ ಹಳ್ಳಿಗಳಲ್ಲಿ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ , ಅತ್ಯಾಚಾರ , ಕೊಲೆ , ಸುಲಿಗೆ ಸೇರಿ ನಾನಾ ಪ್ರಕರಣಗಳು ನಡೆಯುತ್ತಿದ್ದರೂ ಕಡಿವಾಣ ಹಾಕಲು ಸರಕಾರ ಹಿಂದೇಟು ಹಾಕುತ್ತಿದೆ ಎಂದರು.
ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಸರ್ಕಾರ ಯಾವ ಸಂವಿಧಾನದ ಅಡಿಯಲ್ಲಿ ರಾಜ್ಯಕಾರಣ ಮಾಡುತ್ತಿದ್ದೇವೆ ಎಂಬುದು ಪರಿಜ್ಞಾನ ಇಲ್ಲದಂತಾಗಿದೆ. ಇಂತಹ ಘಟನೆಗಳು ಜಿಲ್ಲೆಯ ಯಾವ ತಾಲ್ಲೂಕಿನಲ್ಲಿ ನಡೆಯದ ಹಾಗೆ ಕಾನೂನು ಕ್ರಮ ಜರುಗಿಸಬೇಕು. ಜಿಲ್ಲೆಯಲ್ಲಿದ್ದ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪೊಲೀಸ್ ಬಂದೋಬಸ್ತ್ ಒದಗಿಸಬೇಕೆಂದು ಒತ್ತಾಯಿಸಿದರು.
ಈ ವೇಳೆ ಜಿಲ್ಲಾ ಮುಖಂಡ ಹನುಮಂತಪ್ಪ ಮನ್ನಾಪುರಿ , ಹನುಮೇಶ ಹೊಸಪೇಟೆ , ಸುನೀಲ್ ಕುಮಾರ್ ಸಿಯಾ ತಲಾಬ್ , ನಾಗರಾಜ್ ಕಲ್ಮಾಲ್ , ಇನ್ನಿತರರು ಹಾಜರಿದ್ದರು.
