ವಿಜಯಪುರ ಮಹಾನಗರ ಪಾಲಿಕೆ ಹೊಸ ಕಟ್ಟಡದ ಒಳಗೆ ಶುಕ್ರವಾರ ರಾತ್ರೋರಾತ್ರಿ ಡಾ.ಬಿ.ಆರ್. ಪ್ರತಿಷ್ಠಾಪಿಸಲಾಗಿದ್ದ ಅಂಬೇಡ್ಕರ್ ಮೂರ್ತಿಯನ್ನು ಪಾಲಿಕೆ ಸಿಬ್ಬಂದಿ ಶನಿವಾರ ತೆರವುಗೊಳಿಸಿದ್ದರು.
ಅಂಬೇಡ್ಕರ್ ಮೂರ್ತಿಯನ್ನು ತೆರವುಗೊಳಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿ ದಲಿತ ಸಂಘಟನೆಗಳ ಮುಖಂಡರು ಮಹಾನಗರ ಪಾಲಿಕೆ ಆವರಣದಲ್ಲಿ ಧರಣಿ ನಡೆಸಿದರು.
ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ ಅವರು ದಲಿತ ಮುಖಂಡರೊಂದಿಗೆ ಮಾತನಾಡಿ, ಪ್ರತಿಭಟನೆ ಮಾಡದಂತೆ ಮನವಿ ಮಾಡಿದರು.
‘ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳದೇ ಯಾವುದೇ ಮೂರ್ತಿ, ಫೋಟೊ ಅಳವಡಿಸಲು ಅವಕಾಶವಿಲ್ಲ. ನಿಗದಿತ ಸ್ಥಳದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ನಿರ್ಣಯ ಕೈಗೊಳ್ಳಲಾಗಿದೆ’ ಎಂದು ಆಯುಕ್ತ ತಿಳಿಸಿದರು.
ಆಯುಕ್ತರ ಮಾತನ್ನು ಕೇಳದ ದಲಿತ ಸಂಘಟನೆಗಳ ಮುಖಂಡರು, ಡಾ. ಬಿ. ಆರ್.ಅಂಬೇಡ್ಕರ್ ಮೂರ್ತಿಯನ್ನು ನಿಗದಿತ ಸ್ಥಳದಲ್ಲಿ ಪ್ರತಿಷ್ಠಾಪಿಸುವವರೆಗೂ ಪ್ರತಿಭಟನೆ
ಕೈಬಿಡುವುದಿಲ್ಲ ಎಂದು ಹಠಹಿಡಿದರು.

ಒಂದು ವರ್ಷದಿಂದ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಮನವಿ ಮಾಡುತ್ತಾ ಬಂದರೂ ಪಾಲಿಕೆ ಆಯುಕ್ತರು, ಮೇಯರ್, ಉಪಮೇಯರ್ ಸ್ಪಂದಿಸಿಲ್ಲ. ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಬದಲು ಯಾವುದೇ ಧರ್ಮಕ್ಕೆ ಸೇರಿದ ಮೂರ್ತಿ ಪ್ರತಿಷ್ಠಾಪನೆ ಬೇಡ ಎಂದು ಆಗ್ರಹಿಸಿದರು.
ಧರಣಿ ಸ್ಥಳಕ್ಕೆ ಭೇಟಿ ನೀಡಿ ಮಹಾನಗರ ಪಾಲಿಕೆ ಮೇಯರ್ ಮೆಹಜಬಿನ್ ಅಬ್ದುಲ್ ರಜಾಕ್ ಹೊರ್ತಿ, ಉಪಮೇಯರ್ ದಿನೇಶ್ ಹಳ್ಳಿ, ಆಗಸ್ಟ್ 7ರಂದು ನಡೆಯಲಿರುವ ಮಹಾನಗರ ಪಾಲಿಕೆ ಸಾಮಾನ್ಯಸಭೆಯಲ್ಲಿ ಡಾ.ಬಿ. ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಪಾಲಿಕೆ ಕಟ್ಟಡದ ಒಳಗೆ ಯಾವುದೇ ಮೂರ್ತಿ ಪ್ರತಿಷ್ಠಾಪನೆಗೆ ಕಾನೂನಿನಲ್ಲಿ ಅವಕಾಶವಿಲ್ಲ ಹೀಗಾಗಿ ಪಾಲಿಕೆ ಆವರಣದಲ್ಲಿ ಅವಕಾಶ ಕಲ್ಪಿಸಲಾಗುವುದು. ಪಾಲಿಗೆ ಕಟ್ಟಡದ ಒಳಗೆ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಇದ್ದ ಕಟ್ಟೆಯನ್ನು ತೆರವುಗೊಳಿಸಲಾಗುವುದೆಂದು ಹೇಳಿದರು.
ಮೇಯರ್, ಭರವಸೆ ಸಂಘಟನೆಗಳ ಉಪಮೇಯರ್ ಹಿನ್ನೆಲೆಯಲ್ಲಿ ಮುಖಂಡರು ಧರಣಿ ಅಂತ್ಯಗೊಳಿಸಿದರು.

ದಲಿತ ಮುಖಂಡರಾದ ಅಡಿವೆಪ್ಪ ಸಾಲಗಲ್, ನಾಗರಾಜ ಲಂಬು, ಶ್ರೀನಾಥ ಪೂಜಾರಿ, ಪರಶುರಾಮ ಚಲವಾದಿ, ಮಿತಿನ್, ಮಹಾದೇವ ಕಾಂಬಳೆ, ವೆಂಕಟೇಶ ವಗ್ಗೇನವರ, ಅನಿಲ ಹೊಸಮನಿ. ರಾಜೇಶ ತೊರವಿ ಮತ್ತಿತರರು ಸಂಧಾನಸಭೆಯಲ್ಲಿ ಪಾಲ್ಗೊಂಡಿದ್ದರು.
ದಲಿತ ಸಂಘಟನೆಗಳ ಮುಖಂಡರ ಪ್ರತಿಭಟನೆ ಹಿನ್ನೆಲೆಯಲ್ಲಿ ದಿನವಿಡೀ ಮಹಾನಗರ ಪಾಲಿಕೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.
