ನಗರದ ರಾಯಚೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ರಿಮ್ಸ್)ಯ ಬೋಧಕ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಕಾರ್ಯಕರ್ತರು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಜಿಟಿ ಜಿಟಿ ಮಳೆಯ ನಡುವೆಯೂ 5ನೇ ದಿನಕ್ಕೆ ಮುಂದುವರೆದಿದೆ.
ರಿಮ್ಸ್ ಬೋಧಕ ಆಸ್ಪತ್ರೆಯಲ್ಲಿ ಮೂಲಸೌಕರ್ಯದ ಕೊರತೆ ಹಾಗೂ ವೈದ್ಯರ ಕರ್ತವ್ಯ ನಿರ್ವಹಣೆಯಲ್ಲಿನ ಲೋಪದಿಂದಾಗಿ ಒಳ ಹಾಗೂ ಹೊರ ರೋಗಿಗಳಿಗೆ ಸರಿಯಾದ ಆರೋಗ್ಯ ಸೌಲಭ್ಯ ದೊರೆಯುತ್ತಿಲ್ಲ ಎಂದು ಆರೋಪಿಸಿ ರಿಮ್ಸ್ ನಿರ್ದೇಶಕ ಡಾ.ಬಸವರಾಜ ಪೀರಾಪುರ ಅವರನ್ನು ಅಮಾನತುಗೊಳಿಸುವಂತೆ ಧರಣಿ ನಡೆಯುತ್ತಿದೆ.
“ರಿಮ್ಸ್ ಆಸ್ಪತ್ರೆಯು ಬಡವರಿಗೆ ವರದಾನವಾಗಬೇಕಿತ್ತು. ಆದರೆ ಇಲ್ಲಿನ ಮುಖ್ಯಸ್ಥ ಡಾ. ಬಸವರಾಜ ಪೀರಾಪುರ ಸಮರ್ಥವಾಗಿ ಆಡಳಿತ ನಡೆಸಲು ವಿಫಲರಾಗಿದ್ದು, ಅಗತ್ಯ ಸೌಲಭ್ಯ ದೊರೆಯುತ್ತಿಲ್ಲ. ಆಸ್ಪತ್ರೆಯಲ್ಲಿ ಔಷಧಿಗಳ ದೊಡ್ಡ ಉಗ್ರಾಣವಿದ್ದರೂ ರೋಗಿಗಳಿಗೆ ಅಗತ್ಯ ಔಷಧಿ ನೀಡದೆ, ಹೊರೆಗಿನ ಖಾಸಗಿ ಔಷಧಿ ಅಂಗಡಿಗಳಲ್ಲಿ ತೆಗೆದುಕೊಳ್ಳುವಂತೆ ವೈದ್ಯರು ಚೀಟಿ ಬರೆಯುತ್ತಿದ್ದಾರೆ. ರಿಮ್ಸ್ ಆಸ್ಪತ್ರೆಯಲ್ಲಿ ದೊಡ್ಡ ಲಾಭಿ, ಮೆಡಿಕಲ್ ಮಾಫಿಯಾ ನಡೆಯುತ್ತಿದೆ” ಎಂದು ಪ್ರತಿಭಟನಾನಿರತ ಸಂಘದ ಜಿಲ್ಲಾ ಘಟಕದ ಸಂಚಾಲಕ ಎನ್. ನರಸಿಂಹಲು ಆರೋಪಿಸಿದರು.
“ನಗರ ಶಾಸಕ ಡಾ. ಶಿವರಾಜ ಪಾಟೀಲರು ವೈದ್ಯ ವೃತ್ತಿಯಿಂದ ಬಂದಿದ್ದಾರೆ. ಮೂರು ಬಾರಿ ಶಾಸಕರಾದರೂ ರಿಮ್ಸ್ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸುಧಾರಣೆ ಮಾಡುತ್ತಿಲ್ಲ. ಬಡ ರೋಗಿಗಳ ಪಾಲಿಗೆ ಸಂಜೀವಿನಿಯಾಗಬೇಕಿರುವ ರಿಮ್ಸ್ ಆಸ್ಪತ್ರೆಯು ಅವ್ಯಸ್ಥೆಯ ಆಗರವಾಗಿದೆ. ಪ್ರತಿಯೊಂದಕ್ಕೂ ಖಾಸಗಿ ಪ್ರಯೋಗಾಲಯ ಮಾಡಿಸಲಾಗುತ್ತಿದೆ. ರಿಮ್ಸ್ ಆಸ್ಪತ್ರೆಯಲ್ಲಿನ ವೈದ್ಯರು ಬೆಳಿಗ್ಗೆ ಹಾಗೂ ಸಂಜೆ ಒಮ್ಮೆ ಬಯೋಮೆಟ್ರಿಕ್ ಹಾಜರಾತಿ ಹಾಕಿ ಕೇವಲ ಒಂದೆರಡು ತಾಸು ಕೆಲಸ ಮಾಡುತ್ತಿದ್ದಾರೆ. ಉಳಿದ ಸಮಯ ತಮ್ಮ ಖಾಸಗಿ ಕ್ಲಿನಿಕ್‌ಗಳಲ್ಲಿ ಇರುತ್ತಾರೆ. ಶಾಸಕರು ಖಾಸಗಿ ಆಸ್ಪತ್ರೆಗಳ ಮಾಲೀಕರ ಪರವಾಗಿದ್ದಾರೆ. ಬಡವರ ಮೇಲೆ ಕಾಳಜಿಯಿಲ್ಲ” ಎಂದು ದೂರಿದರು.
“ಈ ಕುರಿತು ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು ಗ್ರಾಮಾಂತರ | ಶಕ್ತಿ ಯೋಜನೆ ಫಲ; ಘಾಟಿ ಸುಬ್ರಹ್ಮಣ್ಯ ಹುಂಡಿಯಲ್ಲಿ ₹55 ಲಕ್ಷ ಸಂಗ್ರಹ
“ರಿಮ್ಸ್ ಬೋಧಕ ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸಲು ಮತ್ತು ಒಳರೋಗಿಗಳಿಗೆ ಸರಿಯಾದ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಧೋರಣೆಯಡಿ ಕರ್ತವ್ಯಲೋಪ ಎಸಗಿ ಸಾರ್ವಜನಿಕರಿಗೆ ವಂಚನೆ ಮಾಡುತ್ತಿರುವ ರಿಮ್ಸ್ ಡೀನ್ ಡಾ.ಬಸವರಾಜ ಪಿರಾಪುರ, ರಿಮ್ಸ್ ಆಡಳಿತ ಅಧಿಕಾರಿ ಡಾ.ಹಂಪಣ್ಣ ಸಜ್ಜನ್ ಮತ್ತು ಮೆಡಿಕಲ್ ಸೂಪರಡೆಂಟ್ ಭಾಸ್ಕರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ವೈದ್ಯಕೀಯ ಕಾಯ್ದೆಯಡಿಯಲ್ಲಿ ಅವರ ವಿರುದ್ಧ ಕಾನೂನ ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಸಮಿತಿಯ ಮುಖಂಡ ಡಿಂಗ್ರಿ ನರಸಪ್ಪ, ನೀಲಕಂಠ, ಎಲ್ ವಿ ಸುರೇಶ, ಹನುಮೇಶ ಅರೋಲಿ, ಜಿ ನರಸಿಂಹ ಕುರ್ಡಿ, ಫಕ್ರುದ್ದೀನ್ ಅಲಿ ಅಹ್ಮದ್, ಪ್ರದೀಪ, ತಿಕ್ಕಯ್ಯ, ವಿಜಯ ಕುಮಾರ ಇದ್ದರು.