ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಗೆ ತೆರೆಳುತ್ತಿದ್ದ ದತ್ತ ಮಾಲಾಧಾರಿಗಳು ತರೀಕೆರೆ ಬಳಿಯ ಸಂತವೇರಿ ದರ್ಗಾದ ಬಳಿ ದುರ್ವರ್ತನೆ ಮೆರೆದಿದ್ದಾರೆ. ದರ್ಗಾಕ್ಕೆ ನುಗ್ಗಲು ಯತ್ನಿಸಿದ್ದಾರೆ. ಅವರ ಕೃತ್ಯದಿಂದಾಗಿ ದರ್ಗಾಕ್ಕೆ ಹಾನಿಯಾಗಿದೆ ಎಂದು ಆರೋಪಿಸಲಾಗಿದೆ.
ಹಿಂದುತ್ವ ಕೋಮುವಾದಿ ಸಂಘಟನೆಗಳು ದತ್ತಜಯಂತಿ ಆಚರಿಸುತ್ತಿವೆ. ವಿವಾದಿತ ತಾಣವಾಗಿರುವ ಬಾಬಾಬುಡನ್‌ಗಿರಿಯಲ್ಲಿ ದತ್ತಜಯಂತಿ ನಡೆಯುತ್ತಿದೆ. ಅಲ್ಲಿಗೆ ತೆರಳುತ್ತಿದ್ದ ಭದ್ರಾವತಿ ತಾಲೂಕಿನ ದತ್ತ ಮಾಲಾಧಾರಿಗಳು ಸುಮಾರು 25 ಬೈಕ್‌ಗಳಲ್ಲಿ ಬಂದಿದ್ದು, ದರ್ಗಾ ಬಳಿ ದಾಂಧಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ದತ್ತ ಮಾಲಾಧಾರಿಗಳು ದರ್ಗಾದ ಬಳಿ ಬೈಕ್ ನಲ್ಲಿಸಿ, ‘ಜೈಶ್ರೀರಾಮ್’ ಘೋಷಣೆ ಕೂಗಿ ದರ್ಗಾಕ್ಕೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ, ದರ್ಗಾ ಬಳಿ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರು ಅವರನ್ನು ತಡೆದಿದ್ದಾರೆ. ಪೊಲೀಸರ ಮೇಲೂ ಹಲ್ಲೆ ಮಾಡಿದ್ದಾರೆ. ಹಲ್ಲೆಯಲ್ಲಿ ಪೊಲೀಸ್ ಪೇದೆಯೊಬ್ಬರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ದರ್ಗಾದ ಬಳಿಯಿದ್ದ ಹಸಿರು ಬಾವುಟಗಳನ್ನು ಕಿತ್ತು ಹಾಕಿ, ಕಾಣಿಕೆ ಡಬ್ಬಿಗೆ ಹಾನಿ ಮಾಡಿದ್ದಾರೆ. ಅಲ್ಲದೆ, ದರ್ಗಾದ ಮೇಲಿದ್ದ ಸಣ್ಣ ಗುಮ್ಮಟವನ್ನೂ ಹಾನಿಗೊಳಿಸಿದ್ದಾರೆ ಎನ್ನಲಾಗಿದೆ. ಈ ವೇಳೆ, ಸ್ಥಳೀಯ ಮುಸ್ಲಿಂ ಮತ್ತು ದಲಿತ ಮುಖಂಡರು ಸ್ಥಳಕ್ಕೆ ಬಂದಿದ್ದು, ಅವರನ್ನು ಕಂಡ ಮಾಲಾಧಾರಿಗಳು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ದರ್ಗಾದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು, ದಾಂಧಲೆ ನಡೆಸಿದವರ ದೃಶ್ಯಗಳು ಸೆರೆಯಾಗಿವೆ. ಅವುಗಳನ್ನು ಪರಿಶೀಲಿಸಿ ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಸ್ಥಳಕ್ಕೆ ತರೀಕೆರೆ ಡಿವೈಎಸ್‌ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಿಂಗದಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.