ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಗ್ರಾಮಗಳಲ್ಲಿ ಹೊಸ ಕುಂದವಾಡ ಗ್ರಾಮ ಕೂಡ ಒಂದು. ಈ ಗ್ರಾಮದಲ್ಲಿ ನಾನಾ ಕಾರಣಕ್ಕೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಆದರೆ ಈ ಗ್ರಾಮದಲ್ಲಿ ಶವಸಂಸ್ಕಾರ ನಡೆಸಲು ರುದ್ರಭೂಮಿ ಇಲ್ಲ. ಈ ಕಾರಣಕ್ಕೆ ಪಾಲಿಕೆ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು, ಮೃತರ ಕುಟುಂಬದವರು, ಸಂಬಂಧಿಕರು ಆಕ್ರೋಶ ಹೊರಹಾಕಿದ ಘಟನೆ ಗುರುವಾರ ನಡೆದಿದೆ.
“ಈ ಗ್ರಾಮದಲ್ಲಿ ಐದು ಸಾವಿರ ಜನರು ವಾಸವಾಗಿದ್ದಾರೆ. ಆದರೆ, ಈ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಜಾಗವೇ ಇಲ್ಲ. ಈ ಮೊದಲು ನಾವು ಹಳೆ ಕುಂದವಾಡದಲ್ಲಿ ಶವಸಂಸ್ಕಾರ ಮಾಡುತ್ತಿದ್ದೆವು. ಈಗ ಅಲ್ಲಿನವರಿಗೂ ನಮಗೂ ಗ್ರಾಮ ದೇವತೆಯ ಹಬ್ಬದ ವಿಚಾರದಲ್ಲಿ ಮನಸ್ತಾಪ ಇರುವುದರಿಂದ ಅಲ್ಲಿನವರು ಕೂಡ ಅವಕಾಶ ನೀಡುತ್ತಿಲ್ಲ. ಹಾಗಾಗಿ ನಮ್ಮ ಗ್ರಾಮಕ್ಕೂ ರುದ್ರಭೂಮಿಯ ವ್ಯವಸ್ಥೆ ಬೇಕು” ಎಂದು ಹೊಸ ಕುಂದವಾಡದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಂತ್ಯಸಂಸ್ಕಾರಕ್ಕೆ ಜಾಗ ನೀಡದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಒಂದೇ ದಿನ ಏಳು ಸಾವು
ಈ ಬೆಳವಣಿಗೆಗೆ ಕಾರಣವಾದದ್ದು ಗ್ರಾಮದಲ್ಲಿ ಒಂದೇ ದಿನ ನಡೆದ ಏಳು ಮಂದಿಯ ಸಾವು. ಒಂದೇ ದಿನ ಹೊಸಕುಂದವಾಡ ಗ್ರಾಮದಲ್ಲಿ ವಯೋಸಹಜ, ಅನಾರೋಗ್ಯ ಸೇರಿದಂತೆ ವಿವಿಧ ಕಾರಣಗಳಿಂದ ಏಳು ಜನರು ಅಸುನೀಗಿದ್ದಾರೆ.
ಅಸಹಜ, ಆಕಸ್ಮಿಕ ಎಂಬಂತೆ ವಿವಿಧ ಕಾರಣಕ್ಕೆ ಒಂದೇ ದಿನ ಹಲವು ಕುಟುಂಬಗಳ ಏಳು ಜನರು ಸಾವು ಕಂಡಿದ್ದು, ನಾಲ್ವರು ವಯೋಸಹಜದಿಂದ ಮೃತಪಟ್ಟರೆ, ಮೂವರು ಅನಾರೋಗ್ಯದಿಂದ ಕೊನೆಯುಸಿರೆಳೆದಿದ್ದಾರೆ. ಎರಡು ದಿನದ ನವಜಾತ ಶಿಶು ಸಹ ಕಣ್ಣು ಮುಚ್ಚಿದೆ.
ಮಾರಿಯಕ್ಕ(70), ಸಂತೋಷ (30), ಈರಮ್ಮ (60), ಸುನಿಲ್ (25), ಶಾಂತಮ್ಮ ( 65) ಭೀಮಕ್ಕ (70), ಎರಡು ದಿನದ ನವಜಾತ ಶಿಶು ಮೃತಪಟ್ಟವರು.
ಇವರ ಅಂತ್ಯಸಂಸ್ಕಾರಕ್ಕೆಂದು ಹೋದ ವೇಳೆ ಪಕ್ಕದ ಊರಿನ ಹಳೆ ಕುಂದುವಾಡ ಗ್ರಾಮದ ಜನರು ತಮ್ಮ ಊರಿನ ಸ್ಮಶಾನದಲ್ಲಿ ಶವ ಸಂಸ್ಕಾರಕ್ಕೆ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲು ಜಾಗ ಸಿಗದೇ ಗ್ರಾಮಸ್ಥರು, ಸಂಬಂಧಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು.
ಊರುಗಳ ಮಧ್ಯೆ ಮನಸ್ತಾಪ
ಗ್ರಾಮ ದೇವತೆಯ ಹಬ್ಬದ ವಿಚಾರದಲ್ಲಿ ಈ ಮೊದಲು ಹಳೆ ಕುಂದುವಾಡ ಮತ್ತು ಹೊಸ ಕುಂದುವಾಡ ಗ್ರಾಮದ ಜನರ ಮಧ್ಯೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ, ಕೊನೆಗೆ ಗ್ರಾಮ ದೇವತೆಯ ಹಬ್ಬವನ್ನು ಎರಡೂ ಊರಿನವರು ಪ್ರತ್ಯೇಕವಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವಿವಾದಕ್ಕೂ ಮೊದಲು ಪಕ್ಕದ ಹಳೇ ಕುಂದುವಾಡ ಗ್ರಾಮದ ಸ್ಮಶಾನದಲ್ಲಿ ಹೋಗಿ ಹೊಸ ಕುಂದುವಾಡದ ಗ್ರಾಮಸ್ಥರು ಶವಸಂಸ್ಕಾರ ನಡೆಸುತ್ತಿದ್ದರು.
“ನಮ್ಮ ಊರಿನಲ್ಲಿ ನಿಮ್ಮ ಗ್ರಾಮದವರ ಶವಸಂಸ್ಕಾರ ಮಾಡಬೇಡಿ” ಎಂದು ಹಳೆ ಕುಂದುವಾಡದ ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ, ದಾರಿ ಕಾಣದಾಗದೇ ಹೊಸ ಕುಂದುವಾಡದ ಜನರು ಮಹಾನಗರ ಪಾಲಿಕೆಯ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
“ನಿಮ್ಮ ಗ್ರಾಮದಲ್ಲಿ ನೀವು ಶವಸಂಸ್ಕಾರ ಮಾಡಿ ಎಂದು ಹೇಳುತ್ತಿದ್ದಾರೆ. ನಮ್ಮ ಊರಿನಲ್ಲಿ ರುದ್ರಭೂಮಿ ಇಲ್ಲ ಎಂದು ಈ ಮೊದಲೇ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಜಿಲ್ಲಾಧಿಕಾರಿಗಳು ಸೇರಿದಂತೆ ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಹೊಸಕುಂದವಾಡ ಗ್ರಾಮಕ್ಕೆ ತಹಶೀಲ್ದಾರ್ ಅಶ್ವಥ್ ಭೇಟಿ
ವಿಷಯ ತಿಳಿದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ದಾವಣಗೆರೆ ತಹಶೀಲ್ದಾರ್ ಡಾ.ಅಶ್ವತ್ ಎಂ.ಬಿ. ಗ್ರಾಮಸ್ಥರ ಜೊತೆ ಚರ್ಚೆ ನಡೆಸಿದರು. ವಯೋಸಹಜವಾಗಿ ಸಾವನಪ್ಪಿರುವವರ ಬಗ್ಗೆ ಗ್ರಾಮಸ್ಥರ ಬಳಿ ಮಾಹಿತಿ ಕಲೆ ಹಾಕಿದರು. ಬಳಿಕ ಮೃತರ ಅಂತ್ಯಕ್ರಿಯೆ ಕುರಿತು ಚರ್ಚೆ ನಡೆಸಿದ್ದು, ಸ್ಮಶಾನ ವಿಚಾರವಾಗಿ ಪ್ರತಿಭಟನೆ ಮಾಡುತ್ತಿದ್ದ ಹೊಸ ಕುಂದವಾಡ ಗ್ರಾಮಸ್ಥರನ್ನು ಪ್ರತಿಭಟನೆ ಕೈಬಿಡುವಂತೆ ಮನವೊಲಿಸಿದರು.
ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ಶವಸಂಸ್ಕಾರ ಮಾಡಲು ಸ್ಮಶಾನ ಸಮಸ್ಯೆ ಎದುರಾದ ಹಿನ್ನೆಲೆ ಗ್ರಾಮಸ್ಥರ ಪ್ರತಿಭಟನೆ ನಡೆಸಿದ್ದಾರೆ. ಮೃತರ ಅಂತ್ಯಕ್ರಿಯೆ ನಡೆಸಲು ಕುಂದವಾಡ ಗ್ರಾಮಕ್ಕೆ ಈಗಾಗಲೇ ಮೂರು ಎಕರೆ ಸ್ಮಶಾನ ಇದೆ. ಗ್ರಾಮಸ್ಥರು ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಮನವಿ ಸಲ್ಲಿಸಿದ್ದಾರೆ. ಅದು ಇನ್ನೊಂದು ಇಲಾಖೆಯ ಅನುಮತಿ ಬೇಕಾಗಿರುವ ಕಾರಣ, ಆ ಪ್ರಕ್ರಿಯೆ ನಡೆಯುತ್ತಿದೆ. ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಯಾವುದೇ ತೊಂದರೆ ಇಲ್ಲ” ಎಂದು ತಿಳಿಸಿದರು.
“ಅಂತ್ಯಸಂಸ್ಕಾರಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಈಗಿರುವ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲು ವ್ಯವಸ್ಥೆ ಮಾಡಲಾಗುವುದು. ಹೆಚ್ಚುವರಿ ಸ್ಮಶಾನ ಜಾಗಕ್ಕಾಗಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳ ಒಳಗಾಗಿ ಸಮಸ್ಯೆ ಇತ್ಯರ್ಥ ಆಗಲಿದೆ. ಏಳು ಜನರ ಅಂತ್ಯಸಂಸ್ಕಾರ ಕುರಿತು ಗ್ರಾಮಸ್ಥರೊಟ್ಟಿಗೆ ಚರ್ಚೆ ಮಾಡಲಾಗುತ್ತದೆ” ಎಂದರು.
ವಾಂತಿ, ಭೇದಿಯಿಂದ ಇಬ್ಬರು ಸಾವು: ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ
ಒಂದೇ ದಿನ ಏಳು ಮಂದಿ ಸಾವನ್ನಪ್ಪಿದ ಕಾರಣ ಆರೋಗ್ಯ ಇಲಾಖೆ ಸಿಬ್ಬಂದಿ, ಪೊಲೀಸರು, ತಹಶೀಲ್ದಾರ್ ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಇಬ್ಬರು ವಾಂತಿ, ಭೇದಿಯಿಂದ ಸಾವನ್ನಪ್ಪಿದ್ದು, ಉಳಿದವರು ವಯೋಸಹಜವಾಗಿ ಅಸುನೀಗಿದ್ದಾರೆ. ಒಂದು ಮಗು ಮಾತ್ರ ಹುಟ್ಟಿದ ಎರಡೇ ದಿನಕ್ಕೆ ಅಕಾಲಿಕವಾಗಿ ಸಾವನ್ನಪ್ಪಿದೆ ಎಂದು ಆರೋಗ್ಯ ಇಲಾಖೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
