ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ರಾಜ್ಯಪಾಲರ ನಡೆಗೆ ಅಹಿಂದ ಖಂಡನೆ ವ್ಯಕ್ತಪಡಿಸಿದ್ದು, ಅಹಿಂದ ಸಂಘಟನೆಯ ಕಾರ್ಯಕರ್ತರು ದಾವಣಗೆರೆಯ ಗಾಂಧಿ ಸರ್ಕಲ್‌ನಲ್ಲಿ ಹೋರಾಟ ನಡೆಸಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಧಿಕ್ಕಾರದ ಘೋಷಣೆ ಕೂಗಿ ಗಾಂಧಿ ವೃತ್ತ, ಹಳೇ ಪಿಬಿ ರಸ್ತೆಯಲ್ಲಿ ರಸ್ತೆತಡೆ ನಡೆಸಿದ ಕಾರ್ಯಕರ್ತರು, ʼಇದು ರಾಜ್ಯಪಾಲರು ಹಾಗೂ ಕೇಂದ್ರ ಸರ್ಕಾರದ ಷಡ್ಯಂತ್ರʼ ಎಂದು ಆರೋಪಿಸಿದರು.
ಅಹಿಂದ ಹೋರಾಟ ಪ್ರತಿಭಟನೆಯಲ್ಲಿ ಕಾರ್ಯಕರ್ತರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳುವ ಆತ್ಮಹತ್ಯೆ ಯತ್ನ ನೆಡೆಸಿದರು. ಮುಂಜಾಗರೂಕತೆಯಿಂದ ಮಧ್ಯೆ ಪ್ರವೇಶಿಸಿದ ಪೋಲೀಸರು ಪೆಟ್ರೋಲ್ ತುಂಬಿದ ಬಾಟಲ್‌ಗಳನ್ನು ಕಾರ್ಯಕರ್ತರ ಕೈಯಿಂದ ಕಿತ್ತುಕೊಂಡು ಆತ್ಮಹತ್ಯೆ ಯತ್ನ ವಿಫಲಗೊಳಿಸಿದರು. ಪೆಟ್ರೋಲ್ ಬಾಟಲ್ ಕಿತ್ತುಕೊಳ್ಳುವ ಪ್ರಯತ್ನದಲ್ಲಿ ಕೆಲವು ಪೊಲೀಸ್ ಸಿಬ್ಬಂದಿ, ಮಹಿಳಾ ಪೊಲೀಸರ ಮೇಲೆ ಹಾಗೂ ಕಾರ್ಯಕರ್ತರ ಮೇಲೂ ಪೆಟ್ರೋಲ್ ಚೆಲ್ಲಾಡಿ ಮೈಮೇಲೆ ಬಿದ್ದಿದ್ದು ಅದೃಷ್ಟವಶಾತ್ ಪೊಲೀಸರ ಸಮಯಪ್ರಜ್ಞೆಯಿಂದ ಯಾವುದೇ ಅವಘಡ ಸಂಭವಿಸಿಲ್ಲ. ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಕುರುಬ ಸಮಾಜದ ಮುಖಂಡ ಎಚ್ ಬಿ ಮಂಜಪ್ಪ ಮಾತನಾಡಿ, “ಯಾವುದೇ ಭ್ರಷ್ಟಾಚಾರ ಹಿನ್ನೆಲೆ ಇಲ್ಲದ ಎಲ್ಲ ವರ್ಗದ ಸಾಮಾಜಿಕ ನ್ಯಾಯದ ನೇತಾರ ಸಿದ್ದರಾಮಯ್ಯನವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಹುನ್ನಾರದಿಂದ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ಇದರ ಹಿಂದೆ ಕೇಂದ್ರ ಸರ್ಕಾರ ಹಾಗೂ ಬಿಜೆಪಿ-ಜೆಡಿಎಸ್ ಮಿತ್ರ ಪಕ್ಷಗಳ ಕೈವಾಡವಿದೆ. ರಾಜ್ಯದಲ್ಲಿ ಜನಪರ ಆಡಳಿತ ನೀಡಲು ಜನಾದೇಶ ಪಡೆದು ಅಧಿಕಾರಕ್ಕೆ ಬಂದ ಬಡವರು, ಹಿಂದುಳಿದ ವರ್ಗಗಳ ನಾಯಕ ಸಿದ್ದರಾಮಯ್ಯ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿವೆ. ಇದಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಸಿಎಂ ವಿರುದ್ಧ ತನಿಖೆಗೆ ಅನುಮತಿ : ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಕಿಡಿ
ಪ್ರತಿಭಟನೆಯಲ್ಲಿ ಚಮನ್ ಸಾಬ್, ಬಿ ವೀರಣ್ಣ, ಪಾಲಿಕೆ ಸದಸ್ಯ ನಾಗರಾಜ್ ಎ, ಲಿಂಗರಾಜ್, ಪುಟ್ಬಾಲ್ ಗಿರೀಶ್, ಕತ್ತಲಗೆರೆ ತಿಪ್ಪಣ್ಣ, ಅಯೂಬ್ ಪೈಲ್ವಾನ್, ಹೊದಿಗೆರೆ ರಮೇಶ್, ಎಸ್ ಮಲ್ಲಿಕಾರ್ಜುನ್, ಗೋಣೆಪ್ಪ, ಬಿ ಬಿ ಮಲ್ಲೇಶ್, ಪರಶುರಾಮಪ್ಪ ಮತ್ತು ಅಹಿಂದ ಮುಖಂಡರು, ಕಾರ್ಯಕರ್ತರು ಇದ್ದರು.