ಬೆಂಗಳೂರಿನ ಬಹುಜನ ಸಮಾಜ ಪಾರ್ಟಿಯಿಂದ ಸಂವಿಧಾನ ಸಂರಕ್ಷಣೆ ಮತ್ತು ಸಂಪೂರ್ಣ ಜಾರಿಗಾಗಿ ‘ಬಹುಜನರ ನಡಿಗೆ-ಪಾರ್ಲಿಮೆಂಟ್ ಕಡೆಗೆ’ ಬೆಂಗಳೂರು ವಿಭಾಗ ಮಟ್ಟದ ಸಮಾವೇಶವನ್ನು ಮಾರ್ಚ್ 9 ರಂದು ದೇವನಹಳ್ಳಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿಎಸ್‌ಟಿ ರಾಜ್ಯ ಕಾರ್ಯದರ್ಶಿ ಎಚ್ ಮಲ್ಲೇಶ್ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ದೇಶದೆಲ್ಲೆಡೆ ಇಂದು ಹೆಚ್ಚು ಚರ್ಚೆಗೊಳಗಾಗುತ್ತಿರುವ ವಿಷಯ ಸಂವಿಧಾನ. ಬಿಜೆಪಿ ತನ್ನ ಸರ್ಕಾರ ರಚಿಸುವಾಗಲೆಲ್ಲಾ ಸಂವಿಧಾನ ಬದಲಾಯಿಸುವುದಾಗಿ ಹೇಳುತ್ತಲೇ ಬಂದಿದೆ. ಇಂತಹ ಪ್ರಯತ್ನಕ್ಕೆ ಹಿಂದೆ ಎನ್‌ಡಿಎ ಸರ್ಕಾರ ಕೈ ಹಾಕಿದಾಗ ಕಾನ್ಶಿರಾಮ್ ಅವರ ಹೋರಾಟಕ್ಕೆ ಹೆದರಿ ಸುಮ್ಮನಾದರು” ಎಂದು ನೆನಪಿಸಿದರು.
“ಈ ಸಮಾವೇಶದ ಮೂಲಕ ಬಿಜೆಪಿ ಸಂವಿಧಾನ ವಿರೋಧಿ ಕೆಲಸಗಳ ಪಟ್ಟಿಯನ್ನು ಮಾಡಿ, ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಸಮಾವೇಶದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್ ಮುನಿಯಪ್ಪ, ಉಪಾಧ್ಯಕ್ಷ ಡಿ ಎಸ್ ಗಂಗಾಧರ್, ಬಹುಜನ ರಾಜ್ಯ ಕಾರ್ಯದರ್ಶಿ ಎಚ್ ಮಲ್ಲೇಶ್ ಹಾಗೂ ರಾಜ್ಯ ಸಮಿತಿ ಪದಾಧಿಕಾರಿಗಳು ಸಮಾವೇಶಕ್ಕೂ ಮುನ್ನ ಟಿಪ್ಪು ಸುಲ್ತಾನ್ ಪಾರ್ಕ್‌ನಿಂದ ಮೆರವಣಿಗೆ ಹೊರಟು ಸಮಾವೇಶದ ಸ್ಥಳವನ್ನು ತಲುಪಲಿದೆ. ದಾವಣಗೆರೆ ಜಿಲ್ಲೆಯಿಂದ 500ಕ್ಕೂ ಹೆಚ್ಚು ಕಾರ್ಯಕರ್ತರು ಸಮಾವೇಶಕ್ಕೆ ತೆರಳಲಿದ್ದಾರೆ” ಎಂದು ಮಾಹಿತಿ ನೀಡಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ಅಂತರ್ಜಲ ಮಟ್ಟ ಕುಸಿತ; ಬರದ ನಡುವೆ ಜಲಕ್ಷಾಮದ ಭೀತಿ
“ದಾವಣಗೆರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಮ್ಮ ಪಕ್ಷದಿಂದ ನಾಲ್ವರು ಆಕಾಂಕ್ಷಿಗಳಿದ್ದು, ಮಾರ್ಚ್ 12ರಂದು ನಡೆಯುವ ರಾಜ್ಯ ಸಮಿತಿಯಲ್ಲಿ ಅಂತಿಮವಾಗಿ ಅಭ್ಯರ್ಥಿಗಳ ನಿರ್ಧಾರ ಮಾಡಲಾಗುವುದು. ಈ ಚುನಾವಣೆಯಲ್ಲಿ ಸ್ಪರ್ಧಿಸಲು ನಾವುಗಳು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದೇವೆ” ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ಡಿ ಹನುಮಂತಪ್ಪ, ಯಶೋಧ ಪ್ರಕಾಶ್, ಜೆ ಡಿ ಕೃಷ್ಣಮೂರ್ತಿ ಇದ್ದರು.
