ದಾವಣಗೆರೆಯ ಕರ್ನಾಟಕ ಜನಶಕ್ತಿ ಕಚೇರಿಯಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಕಾರ್ಯಕರ್ತರು ಸೇರಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಸೇನಾನಿ ಭಗತ್ ಸಿಂಗ್ ಅವರ 117ನೇ ಜಯಂತ್ಯೋತ್ಸವ ಆಚರಿಸಲಾಯಿತು.
ಟಿಪ್ಪು ಸುಲ್ತಾನ್ ವೇದಿಕೆ, ಕರ್ನಾಟಕ ಶ್ರಮಿಕ ಶಕ್ತಿ, ಯೂತ್ ಡೆವಲಪ್‌ಮೆಂಟ್ ಆರ್ಗನೈಸೇಷನ್, ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಸೇರಿ ಶಾಹೀದ್ ಭಗತ್ ಸಿಂಗ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ನಗರದ ರೈಲ್ವೆ ನಿಲ್ದಾಣದ ಮುಂದಿರುವ ಭಗತ್ ಸಿಂಗ್ ಪುತ್ಥಳಿಗೆ ಮಾಲಾರ್ಪಣೆ ಮೂಲಕ ಅವರ ಬಲಿದಾನಕ್ಕೆ ಗೌರವ ಸಮರ್ಪಿಸಿದರು.
ಕರ್ನಾಟಕ ಜನಶಕ್ತಿ ಮತ್ತು ಶ್ರಮಿಕ ಶಕ್ತಿಯ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ್ ಮಾತನಾಡಿ, “ಭಗತ್ ಸಿಂಗ್ ಒಬ್ಬ ಮಹಾನ್ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರನಾಗಿದ್ದು, 23 ವರ್ಷಕ್ಕೆ ನೇಣಿಗೆ ಕೊರಳೊಡ್ಡಿದ ಮಹಾನ್ ವೀರ ಕ್ರಾಂತಿಕಾರಿ. ಅವರು ಸ್ವಾತಂತ್ರ್ಯ ಎಂದರೆ ಬಿಳಿಯರ ಬದಲು ದೇಶದ ಕಂದು ಬಣ್ಣದ ದೊರೆಗಳು ಆಡಳಿತ ನಡೆಸುವುದಲ್ಲ. ಅಂದರೆ ಭಾರತೀಯ ರಾಜಕಾರಣಿಗಳು ಆಡಳಿತ ನೆಡೆಸುವುದಲ್ಲ, ನಿಜವಾದ ಸ್ವಾತಂತ್ರ್ಯ ರೈತರು, ಕಾರ್ಮಿಕರು ಮತ್ತು ಶೋಷಿತ ವರ್ಗದವರಿಗೆ ಸಿಗಬೇಕೆಂದು ಬಯಸಿದ್ದ ಮಹಾನ್ ಕ್ರಾಂತಿಕಾರಿ ಭಗತ್ ಸಿಂಗ್” ಎಂದು ಹೇಳಿದರು.

“ಪ್ರಸ್ತುತ ದಿನಮಾನಗಳಲ್ಲಿ ಭಗತ್ ಸಿಂಗ್ ಒಂದು ಜಾತಿ ವರ್ಗ ಧರ್ಮಕ್ಕೆ ಸೀಮಿತಗೊಳಿಸುವ ಪ್ರಯತ್ನಗಳಾಗುತ್ತಿದ್ದು, ಅವರನ್ನು ಮತ್ತು ಅವರ ತತ್ವ ಸಿದ್ಧಾಂತಗಳನ್ನು ಆದರ್ಶಗಳನ್ನು ಹೈಜಾಕ್ ಮಾಡುವ ಕೆಲಸ ಆಗುತ್ತಿದೆ. ಭಗತ್ ಸಿಂಗ್ ಅವರ ಆದರ್ಶವನ್ನು ಹಿಂದಿನ ಯುವಜನತೆ ಪಾಲಿಸಿ ಸೌಹಾರ್ದತೆ ಕಾಪಾಡಿಕೊಳ್ಳುವ ಅವಶ್ಯಕತೆ ಎಂದಿಗಿಂತ ಇಂದು ಹೆಚ್ಚಿದೆ” ಎಂದು ಅಭಿಪ್ರಾಯಪಟ್ಟರು.
ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಮುಖಂಡ ಶಿವಕುಮಾರ್ ಮಾಡಾಳ್ ಮಾತನಾಡಿ, “ಭಗತ್ ಸಿಂಗ್ ಸ್ವಾತಂತ್ರ್ಯಕ್ಕಾಗಿ ನಗುನಗುತ್ತಾ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿ. 23ನೇ ವಯಸ್ಸಿಗೆ ಅವರ ಚಿಂತನೆಗಳು ಮತ್ತು ಬೌದ್ಧಿಕ ಚಿಂತನೆಗಳನ್ನು ಈಗಿನ 23 ವರ್ಷದ ಯುವಕರಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ನಾವು ಅಂಬೇಡ್ಕರ್, ಭಗತ್ ಸಿಂಗ್ ಅವರಂತಹ ಚಿಂತನೆಗಳನ್ನ ಪಾಲಿಸುವುದು ಅಗತ್ಯವಿದೆ. ಸಮಾಜದಲ್ಲಿ ಎಲ್ಲ ಧರ್ಮಗಳ ಜಾತಿಗಳ ಸಮಾನತೆ ಮತ್ತು ಎಲ್ಲರಿಗೂ ಸ್ವಾತಂತ್ರ್ಯದ ಪರಿಕಲ್ಪನೆಯನ್ನು ಅವರು ಯೋಚಿಸಿದ್ದರು. ಇದಕ್ಕೆ ಆಪತ್ತು ಬಂದಾಗ ಭಗತ್ ಸಿಂಗ್ ಅವರ ಚಿಂತನೆಗಳನ್ನು ಮತ್ತೆ ಅಳವಡಿಸಿಕೊಂಡು ನಡೆಯುವ ಮೂಲಕ ಸರಿದಾರಿಗೆ ತರಬೇಕಾಗಿದೆ. ಇಂತಹ ಕಾರ್ಯಕ್ರಮಗಳು ಸಾರ್ವಜನಿಕವಾಗಿ ನಡೆದು ವಿದ್ಯಾರ್ಥಿಗಳು ಯುವಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಭಗತ್ ಸಿಂಗ್‌ರನ್ನು ಅವರಿಗೆ ಸರಿಯಾದ ಮಾರ್ಗದಲ್ಲಿ ಪರಿಚಯಿಸುವ ಕೆಲಸವಾಗಬೇಕಿದೆ” ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಎಐಡಿಎಸ್ಒ ಸಂಘಟನೆಯಿಂದ ಕ್ರಾಂತಿಕಾರಿ ಭಗತ್ ಸಿಂಗ್ ಜನ್ಮದಿನಾಚರಣೆ
ಮುಖಂಡ ಲಕ್ಷ್ಮಣ್ ಮಾತನಾಡಿ, “ಇಂದು ವಿದ್ಯಾರ್ಥಿಗಳಿಗೆ, ಯುವಜನರಿಗೆ ನಾವು ಭಗತ್ ಸಿಂಗ್ ಅವರ ಬೌದ್ಧಿಕ ಆದರ್ಶ ಮತ್ತು ಅವರ ವಿಚಾರಧಾರೆಗಳ ಬೀಜ ಬಿತ್ತುವ ಕೆಲಸವಾಗಬೇಕು. ನಮ್ಮ ಮನೆಯವರಿಗೆ ಮಕ್ಕಳಿಗೆ ಮೊದಲು ತಿಳಿಸುವ ಕೆಲಸ ಮಾಡಬೇಕಾಗಿದೆ. ನಾವು ಹೊರಗಡೆ ಎಲ್ಲರಿಗೂ ತಿಳಿಸುತ್ತೇವೆ. ಆದರೆ ನಮ್ಮ ಮಕ್ಕಳಿಗೆ ಬೌದ್ಧಿಕ ಚಿಂತನೆಗಳನ್ನು ತಿಳಿಸುವ ಕೆಲಸವಾಗುತ್ತಿಲ್ಲ. ಹಾಗಾಗಿ ಮೊದಲು ನಮ್ಮ ಮನೆಗಳಿಂದಲೇ ಇದನ್ನು ಪ್ರಾರಂಭಿಸಿ, ಎಲ್ಲರಲ್ಲೂ ಈ ವಿಚಾರಧಾರೆಗಳನ್ನು ಬಿತ್ತುವ ಕೆಲಸಗಳಾಗಬೇಕು” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಜನಶಕ್ತಿಯ ಗೌರವಾಧ್ಯಕ್ಷ ಕಲೀಲ್, ಮುಖಂಡ ರಾಮಾಂಜನೇಯ, ಎಎಪಿಯ ಆದಿಲ್ ಖಾನ್, ರವೀಂದ್ರ, ಶಿಡ್ಲಪ್ಪ, ಪವಿತ್ರ ಅರವಿಂದ್, ಚಂದ್ರು, ರವಿಕುಮಾರ್, ಹನುಮಂತ್, ರಮೇಶ್ ಸೇರಿದಂತೆ ಇತರರು ಇದ್ದರು.