ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಮತ್ತು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಷಡ್ಯಂತ್ರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದಾವಣಗೆರೆ ಜಿಲ್ಲೆ ಶೋಷಿತ ಸಮುದಾಯದ ಒಕ್ಕೂಟದ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ನಗರದ ಉಪ ವಿಭಾಗಾಧಿಕಾರಿ ಕಚೇರಿ ಬಳಿ ಮೌನ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ.ಮಂಜಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಡಾ ಹಗರಣದಲ್ಲಿ ಯಾವುದೇ ತಪ್ಪು ಮಾಡಿಲ್ಲ. ಆದರೂ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ನ್ಯಾಯಾಲಯ ಒಳ್ಳೆಯ ತೀರ್ಪು ನೀಡುವ ವಿಶ್ವಾಸವಿತ್ತು. ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಪ್ರಾಮಾಣಿಕವಾಗಿ ಎರಡನೇ ಬಾರಿಗೆ ಒಳ್ಳೆಯ ಅಧಿಕಾರ ನೀಡುತ್ತಿದ್ದಾರೆ. ಬಿಜೆಪಿಯವರು ರಾಜ್ಯಪಾಲರ ಮೂಲಕ ಷಡ್ಯಂತ್ರ ರೂಪಿಸಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿಯವರು ಸಿದ್ದರಾಮಯ್ಯನವರ ರಾಜೀನಾಮೆ ಕೇಳುತ್ತಿದ್ದಾರೆ. ಅವರಿಗೆ ಯಾವ ನೈತಿಕತೆ ಇದೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ ಅವರು, ರಾಜ್ಯದ ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ
ಮುಂದುವರಿಯಬೇಕು. ಅವರ ಪರ ಇಡೀ
ರಾಜ್ಯದ ಜನರಿದ್ದಾರೆ. 136 ಶಾಸಕರಿದ್ದಾರೆ.
ಕಾಂಗ್ರೆಸಿನವರಿಗೆ ದಿನಕ್ಕೊಂದು ನೋಟಿಸ್
ನೀಡುವ ರಾಜ್ಯಪಾಲರು ಬಿಜೆಪಿಯವರಿಗೆ
ಏನೂ ಕೇಳುವುದಿಲ್ಲ. ರಾಜ್ಯಪಾಲರ ಕಚೇರಿ
ಬಿಜೆಪಿ ಕಚೇರಿ ಆಗಿದೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮೇಯರ್ ಬಿ.ಎಚ್. ವಿನಾಯಕ ಪೈಲ್ವಾನ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್, ಕೆ.ಜಿ. ಶಿವಕುಮಾರ್, ಬಿ. ವೀರಣ್ಣ, ಎಲ್.ಡಿ. ಗೋಣೆಪ್ಪ, ಇಟ್ಟಿಗುಡಿ ಮಂಜುನಾಥ್, ಎಸ್. ವೆಂಕಟೇಶ್, ಕಾವ್ಯ, ಕವಿತಾ ಚಂದ್ರಶೇಖರ್, ಬಿ.ಎಚ್. ಪರಶುರಾಮಪ್ಪ, ಎಸ್. ಮಲ್ಲಿಕಾರ್ಜುನ್, ಎಸ್. ಎಲ್. ಆನಂದಪ್ಪ, ಸುರೇಶ್ ಕೋಗುಂಡೆ, ಕೆ.ಎನ್. ಮಂಜುನಾಥ್, ಮಂಜುನಾಥ್, ಎಸ್. ಎಸ್. ಗಿರೀಶ್, ನಂಜಾನಾಯ್ಕ, ಎಚ್. ಜಯಣ್ಣ, ಸಯೀದ್ ಚಾರ್ಲಿ, ಆದಿಲ್ ಖಾನ್, ರವೀಂದ್ರ, ಜಯಶ್ರೀ, ಡಿ. ಶಿವಕುಮಾರ್, ಆರ್. ಪ್ರತಾಪ್, ಜಿ.ಸಿ. ನಿಂಗಪ್ಪ, ರೇವಣಸಿದ್ದಪ್ಪ, ಲಿಯಾಖತ್ ಅಲಿ ಇತರ ಕಾರ್ಯಕರ್ತರು ಭಾಗವಹಿಸಿದ್ದರು.
