ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಮರುಸ್ಥಾಪಿಸುವಂತೆ ಆಗ್ರಹಿಸಿ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳು ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
“ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಖಾಸಗಿ ಜಾಗದಲ್ಲಿ ಸಂಗೊಳ್ಳಿ ರಾಯಣ್ಣನ ಅಭಿಮಾನಿಗಳಿಂದ ಅಭಿಮಾನದಿಂದ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು. ಅನ್ಯ ಸಮುದಾಯದವರು ವಿರೋಧಿಸಿದರೆಂಬ ಒಂದೇ ಕಾರಣದಿಂದ ಸ್ವಾತಂತ್ರ್ಯ ಸೇನಾನಿ, ಸ್ವಾತಂತ್ರ್ಯ ಹೋರಾಟಗಾರ, ಹುತಾತ್ಮ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ತೆರವುಗೊಳಿಸಲಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಸಂಗೊಳ್ಳಿ ರಾಯಣ್ಣನ ಪ್ರತಿಮೆ ತೆರವುಗೊಳಿಸುವ ಮುನ್ನ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯ ಅಭಿಪ್ರಾಯ ಹಾಗೂ ಠರಾವನ್ನು ಸಂಗ್ರಹಿಸಿ ಕ್ರಮ ಕೈಗೊಳ್ಳಬಹುದಾಗಿತ್ತು. ಸರ್ಕಾರಿ ಜಾಗಗಳಲ್ಲಿ ಅನುಮತಿ ಪಡೆಯದೇ ಹಲವು ಹೆಸರಿನ ವೃತ್ತಗಳ ನಾಮಫಲಕಗಳು, ಮಹಾದ್ವಾರಗಳನ್ನು ನಿರ್ಮಿಸಿದ್ದು, ಗ್ರಾಮದ ಸೌಹಾರ್ದತೆಗೆ ಸಾಕ್ಷಿಯಾಗಿದ್ದರೂ ಸಹ, ಟ್ರಸ್ಟ್‌ನವರ ಖಾಸಗಿ ಸ್ಥಳದಲ್ಲಿ ಸ್ಥಾಪಿಸಿದ್ದ ಪ್ರತಿಮೆಯನ್ನು ತೆರವು ಗೊಳಿಸಿರುವುದು ಸಂಗೊಳ್ಳಿ ರಾಯಣ್ಣನವರಿಗೆ ಮಾಡಿದ ಅಪಮಾನವಾಗಿದೆ” ಎಂದು ಅಸಮಾಧಾನಪಟ್ಟರು.
“ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಥಮ ಬಾರಿಗೆ ಬ್ರಿಟೀಷರಿಗೆ ಸೋಲಿನ ರುಚಿಯನ್ನು ತೋರಿಸಿದ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟ ಹುತಾತ್ಮ, ಸ್ವಾತಂತ್ರ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರು ಹುಟ್ಟಿದ್ದು ಆಗಸ್ಟ್ 15, ಅಂದು ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನವಾಗಿರುತ್ತದೆ. ದೇಶಭಕ್ತ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರನ್ನು ಬ್ರಿಟಿಷರು ನೇಣಿಗೆ ಹಾಕಿದ ದಿನ ಜನವರಿ 26, ಅಂದು ಭಾರತ ಗಣರಾಜ್ಯವಾದ ದಿನವಾಗಿರುತ್ತದೆ. ಇಂತಹ ವೀರಪುರುಷ ಜಗತ್ತಿನಲ್ಲೇ ಅಪರೂಪ ಮತ್ತು ಭಾರತ ದೇಶದ ಹೆಮ್ಮೆಯೂ ಹೌದು. ಸಂಗೊಳ್ಳಿ ರಾಯಣ್ಣ ಯುವಕರಿಗೆ ಆದರ್ಶ, ಇಂತಹ ವೀರನ ಬಗ್ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೆಚ್ಚು ಪ್ರಚಾರ ಮಾಡಬೇಕಾಗಿತ್ತು. ಯುವಕರಲ್ಲಿ ದೇಶಪ್ರೇಮದ ಬಗ್ಗೆ ಜಾಗೃತಿ ಮೂಡಿಸಬೇಕಿತ್ತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಸ್ವಾತಂತ್ರ್ಯ ಉದ್ಯಾನವನಗಳನ್ನು, ಮೂರ್ತಿಗಳನ್ನು ಸ್ಥಾಪಿಸಬೇಕಿತ್ತು. ಆದರೆ ಸರ್ಕಾರಗಳು ಮಾಡಬೇಕಿದ್ದ ಕಾರ್ಯಗಳನ್ನು ಸಂಗೊಳ್ಳಿ ರಾಯಣ್ಣನವರ ಅಭಿಮಾನಿಗಳು ಮಾಡುತ್ತಿದ್ದಾರೆ. ಹೀಗಾಗಿ ರಾಯಣ್ಣನ ಪ್ರತಿಮೆಯನ್ನು ಮರುಸ್ಥಾಪನೆ ಮಾಡಬೇಕು” ಎಂದು ಅಭಿಮಾನಿಗಳು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗೃಹ ಕಾರ್ಮಿಕರ ಸಾಮಾಜಿಕ ಸುರಕ್ಷತೆ, ಭದ್ರತೆಗೆ ಆಗ್ರಹ
“ಭಾನುವಳ್ಳಿ ಗ್ರಾಮದಲ್ಲಿನ ಎಲ್ಲ ಸಮಾಜದವರ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಭಾನವಳ್ಳಿ ಗ್ರಾಮ ಪಂಚಾಯಿತಿಯ ಸಾಮಾನ್ಯ ಸಭೆಯು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದು, ದಾವಣಗೆರೆಯ ಜಿಲ್ಲಾಧಿಕಾರಿಯವರು ಗ್ರಾಮ ಪಂಚಾಯಿತಿಯ ಠರಾವಿಗೆ ಮಾನ್ಯತೆ ನೀಡಿ ಲೋಪದೋಷ ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುರುಬ ಜಿಲ್ಲಾ ಸಮಿತಿ, ಹರಿಹರ ತಾಲೂಕು ಸಮಿತಿ ಸಮಾಜದ ಎಲ್ಲ ಮುಖಂಡರು, ಗ್ರಾಮಸ್ಥರು ಇದ್ದರು.