ಕರ್ನಾಟಕದಲ್ಲಿ ಮುಂಗಾರು ಮಳೆ ವಿಫಲವಾಗಿದ್ದು, ಕಾವೇರಿ ಜಲಾನಯನದ ಜಲಾಶಯಗಳು ಭರ್ತಿಯಾಗದೆ ಸಂಕಷ್ಟ ಎದುರಾಗಿದೆ. ಇಂತಹ ಸಮಯದಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ವಿಕರವೇ ರಾಜ್ಯಾಧ್ಯಕ್ಷ ಕೆ ಜಿ ಯಲ್ಲಪ್ಪ ಮಾತನಾಡಿ, “ಕರ್ನಾಟಕ ಸರ್ಕಾರ ರಾಜ್ಯದ ರೈತರ ಹಿತ ಕಾಯದೇ ಕಾವೇರಿ ನೀರು ನಿರ್ವಹಣಾ ಪಾಧಿಕಾರದ ನಿರ್ದೇಶನವಿದೆ ಎಂಬ ಕಾರಣ ಮುಂದಿಟ್ಟುಕೊಂಡು ತಮಿಳುನಾಡಿಗೆ ನಿತ್ಯ 5000 ಕ್ಯೂಸೆಕ್ ನೀರು ಹರಿಸುತ್ತಿರುವುದು ಖಂಡನೀಯ. ರಾಜ್ಯ ಸರ್ಕಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ಮರುಪರಿಶೀಲಿಸುವಂತೆ ಸರ್ವೋಚ್ಛ ನ್ಯಾಯಾಲಯಕ್ಕೆ ಹೋಗುವುದನ್ನು ಬಿಟ್ಟು ತಮಿಳುನಾಡಿಗೆ ನೀರು ಬಿಡುತ್ತಿರುವುದು ಖಂಡನೀಯ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಮಳೆ ಕೊರತೆಯಾದ ಈ ವರ್ಷದಲ್ಲಿ ನೆರವಿಗೆ ಬರುವಂತೆ ಹಾಗೂ ಸಂಕಷ್ಟದ ಸೂತ್ರವನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಿತ್ತು. ರಾಜ್ಯದ ಎಲ್ಲ ಶಾಸಕರು, ಸಂಸದರ ನಿಯೋಗ ತೆರಳಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಗಿತ್ತು” ಎಂದರು.
“ಮಳೆ ಬರದ ಇಂತಹ ಸಮಯದಲ್ಲಿ ನಾವು ಭಾರತೀಯ ಒಕ್ಕೂಟದಲ್ಲಿರುವ ರಾಜ್ಯಗಳೆಂದು ತಿಳಿದುಕೊಳ್ಳದೆ ನೀರಿಗಾಗಿ ಒತ್ತಾಯಿಸುತ್ತಿರುವ ತಮಿಳುನಾಡು ಸರ್ಕಾರಕ್ಕೆ ಕೇಂದ್ರ ಸರ್ಕಾರ ಕಿವಿಹಿಂಡಿ ಮನವರಿಕೆ ಮಾಡಿಕೊಡಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಡ ಹಾಕುವುದನ್ನು ಬಿಟ್ಟು ರಾತ್ರೋರಾತ್ರಿ ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಬೆಳಗಾವಿ | ರೈತ ಮುಖಂಡ ಯಲ್ಲಪ್ಪ ಹೆಗಡೆ ಮೇಲೆ ಹಲ್ಲೆ; ಆರೋಪಿಗಳ ಬಂಧನಕ್ಕೆ ಆಗ್ರಹ
“ನಿತ್ಯ 5000 ಕ್ಯೂಸೆಕ್ ನೀರನ್ನು 10 ದಿನ ಬಿಟ್ಟರೆ ರಾಜ್ಯದ ರೈತರ ಬೆಳೆಗೆ ನೀರು ಸಿಗುವುದಿರಲಿ, ಕುಡಿಯಲೂ ನೀರು ಸಿಗದಿರುವ ಸಾಧ್ಯತೆಗಳಿವೆ ಎಂಬುದನ್ನು ರಾಜ್ಯ ಸರ್ಕಾರ ಮನಗಾಣಬೇಕಾಗಿದೆ. ಆದ್ದರಿಂದ ಕೂಡಲೇ ಕರ್ನಾಟಕ ರಾಜ್ಯದ ರೈತರ ಹಿತ ಕಾಯುವ ದೃಷ್ಠಿಯಿಂದ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ನಿಲ್ಲಿಸಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ದಯಾನಂದ, ರಫಿ, ಅಮ್ಜದ್ಅಲಿ, ರಮೇಶ್, ನಾಗರಾಜ್, ಹುಲಿಗಪ್ಪ, ಎಂ ದರ್ಶನ್, ವಿನಯ ಕುಲಕರ್ಣಿ, ಎಸ್ ಸಿದ್ದೇಶ್ ಹಾಗೂ ಕಾರ್ಯಕರ್ತರು ಇದ್ದರು.