ಕನ್ನಡ ಪರ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರೆಂದು ಹೇಳಿಕೊಂಡು ಕಾನೂನು ಬದ್ಧವಾಗಿ ನಡೆಸುತ್ತಿರುವ ನಮ್ಮ ಶಾಲೆಯ ವಿರುದ್ಧ ವಿನಾಕಾರಣ ಶಿಕ್ಷಣ ಇಲಾಖೆಗೆ ದೂರು ನೀಡಿದ್ದಲ್ಲದೇ, ದೂರು ಹಿಂಪಡೆಯಲು ₹5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ನನ್ನ ಬಳಿ ಇದ್ದ ಹಣವನ್ನು ದೋಚಿ, ಕೊಲೆ ಬೆದರಿಕೆ ಹಾಕಿರುವ ಕಿಡಿಗೇಡಿಗಳ ವಿರುದ್ಧ ಪೊಲೀಸ್ ಇಲಾಖೆ ಕಾನೂನು ಕ್ರಮ ಕೈಗೊಂಡು ಈ ಕೂಡಲೇ ಬಂಧಿಸಬೇಕು ಎಂದು ಗ್ಲೋಬಲ್ ಪಬ್ಲಿಕ್ ಎಜುಕೇಶನ್ ಅಂಡ್ ವೆಲ್ಫೇರ್ ಫೌಂಡೇಶನ್ ಸೈಯದ್ ಅಕ್ಟರ್ ಅಲಿ ಒತ್ತಾಯಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ನಮ್ಮ ಶಾಲೆಯನ್ನು ಕಾನೂನು ಬದ್ಧವಾಗಿ ನಡೆಸಿಕೊಂಡು ಬರಲಾಗುತ್ತಿದೆ. 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ, ವಿನಾಕಾರಣ ಹಣಕ್ಕಾಗಿ ಶಿಕ್ಷಣ ಇಲಾಖೆಗೆ ಆಧಾರ ರಹಿತ ಸುಳ್ಳು ದೂರನ್ನು ನೀಡಿ ಕಿರುಕುಳ ನೀಡುತ್ತಿದ್ದಾರೆ” ಎಂದು ಆರೋಪಿಸಿದರು.
“ದೂರು ನೀಡಿದ ವ್ಯಕ್ತಿ ಈ ಕುರಿತು ಮಾತುಕತೆ ನಡೆಸಲು ಬಡಾವಣೆ ಪೊಲೀಸ್ ಠಾಣೆಯ ಸಮೀಪದ ಪ್ರವಾಸಿ ಮಂದಿರದ ಬಳಿ ಕರೆಸಿ, ನಾವು ನೀಡಿರುವ ದೂರನ್ನು ಹಿಂಪಡೆಯಬೇಕಾದರೆ ₹5 ಲಕ್ಷ ನೀಡಬೇಕು. ಇಲ್ಲವಾದರೆ ನಿಮ್ಮ ಶಾಲೆಯನ್ನು ಬಂದ್ ಮಾಡಿಸುತ್ತೇವೆಂದು ದಬ್ಬಾಳಿಕೆ ನಡೆಸಿದ್ದಾರೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಸಚಿವ ಖರ್ಗೆ ಕ್ಷೇತ್ರದಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕಾಗಿ ದಿನನಿತ್ಯ 2 ಕಿ.ಮೀ ನಡೆಯುವ ಪುಟ್ಟ ಮಕ್ಕಳು
“ಇದೇ ವೇಳೆ ನನ್ನ ಜೇಬಿನಲ್ಲಿ ಇದ್ದ ಹಣವನ್ನು ಬಲವಂತವಾಗಿ ಕಿತ್ತುಕೊಂಡಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ. ನಮಗೆ ರಾಜಕೀಯ ಹಿನ್ನೆಲೆ ಇದೆ. ನೀವು ಹಣ ಕೊಡಲೇಬೇಕೆಂದು ಮಾನಸಿಕವಾಗಿ ಒತ್ತಡ ಹೇರುತ್ತಿದ್ದಾರೆ. ನನಗೆ ಜೀವ ಭಯ ಕಾಡುತ್ತಿದೆ” ಎಂದು ಅವಲತ್ತುಕೊಂಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಸಾದುಲ್ಲಾ, ಮಹಮ್ಮದ್ ರಸೂಲ್, ಶಾಹೀದ್ ಆಜಂ, ವಾಹೀದಾ ಬಾಬು ಇದ್ದರು.