ಕೈಗಾರಿಕಾ ಕ್ರಾಂತಿಯ ನಂತರ ಕಾರ್ಮಿಕರ ಪರಿಸ್ಥಿತಿ ಇನ್ನೂ ಹದಗೆಟ್ಟಿತು. ದಿನಕ್ಕೆ 18 ಗಂಟೆಗಳ ಕಾಲ ಕೆಲಸ ಮಾಡಬೇಕಾಗಿದ್ದ ಸಂದರ್ಭದಲ್ಲಿ 1886ರಲ್ಲಿ ಚಿಕಾಗೋದಲ್ಲಿ ನಡೆದ ಕಾರ್ಮಿಕರ ಹೋರಾಟವು ಅವಿಸ್ಮರಣೀಯವಾದದ್ದು. ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಕ್ಕರೆ ತಿನ್ನುವ ಅವಕಾಶವಿಲ್ಲದಂತಹ ಪರಿಸ್ಥಿತಿ ಇನ್ನೂ ಹಾಗೆಯೇ ಇದೆ. ಕಾರ್ಲ್ ಮಾಕ್ಸ್ ಅವರು ಕಾರ್ಮಿಕರ ಮೂಲ ಸಮಸ್ಯೆಗಳಿಗೆ ಪರಿಹಾರ ಕೊಟ್ಟಂತಹ ಮಹಾನ್ ದಾರ್ಶನಿಕರು ಎಂದು ಡಾ.ದಾದಾಪೀರ್ ನವಿಲೇಹಾಳ್ ಹೇಳಿದರು.
ದಾವಣಗೆರೆ ನಗರ ವನಿತಾ ಸಮಾಜದಲ್ಲಿ ಇಂದು ಕರ್ನಾಟಕ ಶ್ರಮಿಕ ಶಕ್ತಿ(ಕೆಎಸ್‌ಎಸ್) ಜಿಲ್ಲಾ ಘಟಕ ಹಮ್ಮಿಕೊಂಡಿದ್ದ 138ನೇ ಕಾರ್ಮಿಕ ದಿನಾಚರಣೆ ಮತ್ತು ಹಿರಿಯ ಕಾರ್ಮಿಕರಿಗೆ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿಶ್ವದ ಕಾರ್ಮಿಕರೇ ಒಂದಾಗಿ ನೀವುಗಳು ಕಳೆದುಕೊಳ್ಳುವುದು ಏನೂ ಇಲ್ಲ ಎಂಬ ಸಂದೇಶವನ್ನು ವಿಶ್ವಕ್ಕೆ ಕೊಟ್ಟಿದ್ದಾರೆ. ದಾವಣಗೆರೆಯ ಮಿಲ್ ಕಾರ್ಮಿಕರ ಹೋರಾಟದ ಉಚ್ಛ್ರಾಯ ಸ್ಥಿತಿಯಲ್ಲಿ ಇದನ್ನು ಕಾಣಬಹುದಾಗಿದೆ. 15 ವರ್ಷಗಳ ಕಾಲ ಕಾರ್ಮಿಕ ನಾಯಕ ಪಂಪಾಪತಿಯವರು ಶಾಸಕರಾಗಿ ಆಯ್ಕೆಯಾಗಿದ್ದರು ಅಂದರೆ ಕಾರ್ಮಿಕರ ಒಗ್ಗಟ್ಟಿನ ಶಕ್ತಿಯೇ ಕಾರಣ” ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕರ್ನಾಟಕ ಶ್ರಮಿಕ ಶಕ್ತಿಯ ಮುಖಂಡ ಸತೀಶ್ ಅರವಿಂದ್ ಮಾತನಾಡಿ, “138 ವರ್ಷಗಳ ಹಿಂದೆ ನಡೆದ ಕಾರ್ಮಿಕರ ಸಂಘರ್ಷವೇ ನಾವುಗಳು ಇಂದು ಒಟ್ಟಾಗಿ ಸೇರಲು ಮತ್ತು ಕನಿಷ್ಟ ಹಕ್ಕುಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ. ನಮ್ಮ ಮುಂದೆ ಇನ್ನೂ ಹಲವಾರು ಜಟಿಲ ಸಮಸ್ಯೆಗಳು ಇವೆ. ಅವುಗಳ ನಿವಾರಣೆಗಾಗಿ ಎಲ್ಲಾ ಅಸಂಘಟಿತ ಕಾರ್ಮಿಕರೆಲ್ಲರೂ ಒಟ್ಟಾಗಿ ಹೋರಾಟ ಮಾಡೋಣ. ಅದಕ್ಕಾಗಿ ಕರ್ನಾಟಕ ಶ್ರಮಿಕ ಶಕ್ತಿಯು ನಿಮ್ಮ ಜೊತೆ ಇರುತ್ತದೆ” ಎಂದು ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ತುಮಕೂರು | ಪರಿಷತ್ ಚುನಾವಣೆ; ಮೈತ್ರಿಗೆ ವಿರೋಧಿ ಅಲೆ, ಕಾಂಗ್ರೆಸ್‌ಗೆ ಗೆಲ್ಲುವ ಸವಾಲು
ಇದೇ ವೇಳೆ ಕಾರ್ಯಕ್ರಮದಲ್ಲಿ ಹಿರಿಯ ಕಾರ್ಮಿಕರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಆದಿಲ್ ಖಾನ್, ಪವಿತ್ರ, ಟಿ ಹೆಚ್ ಲಕ್ಷ್ಮೀಕಾಂತ್, ಅಶ್ಫಕ್, ಮಹಮ್ಮದ್ ರಫೀಕ್, ಹನುಮಂತಪ್ಪ, ನಾಜೀಮಾ ಬಾನು, ಅಕ್ಬರ್, ಅಪ್ರೋಜ್, ವೆಂಕಟೇಶ್ ಸೇರಿದಂತೆ ಬಹುತೇಕ ಕಾರ್ಮಿಕರು ಇದ್ದರು.
