ಧಾರವಾಡ ಲೋಕಸಭಾ ಕ್ಷೇತ್ರ; ಮತ ಎಣಿಕೆಗೆ ಸಕಲ ಸಿದ್ಧತೆ

ಮೇ 7 ರಂದು ಜರುಗಿದ ಧಾರವಾಡ ಲೋಕಸಭಾ ಮತಕ್ಷೇತ್ರದ ಚುನಾವಣೆಯ ಮತ ಏಣಿಕಾ ಕಾರ್ಯಕ್ಕೆ ಧಾರವಾಡ ಜಿಲ್ಲಾಡಳಿತದಿಂದ ಅಗತ್ಯ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿದೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಪ್ರತಿ ವಿಧಾನಸಭಾ ಮತಕ್ಷೇತ್ರಕ್ಕೆ 14 ಟೇಬಲ್‌ಗಳಂತೆ ಒಟ್ಟು 112 ಟೇಬಲ್‌ಗಳನ್ನು ಮತ ಏಣಿಕೆಗೆ ಸಿದ್ದಗೊಳಿಸಲಾಗಿದ್ದು, ಅಂದಾಜು 20 ಸುತ್ತುಗಳಲ್ಲಿ ಮತ ಏಣಿಕೆ ಕಾರ್ಯ ನಡೆಯಲಿದೆ ಎಂದು ಚುನಾವಣಾಧಿಕಾರಿ ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಭಾನುವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಲೋಕಸಭಾ ಚುನಾವಣೆಯ ಮತ  ಎಣಿಕೆ ಕಾರ್ಯದ ಸಿದ್ದತೆ ಮತ್ತು ಮತ ಎಣಿಕಾ ಕೇಂದ್ರದ ಕುರಿತು ಮಾಹಿತಿ ನೀಡಿ ಮಾತನಾಡಿದರು.

“ಭಾರತ ಚುನಾವಣಾ ಆಯೋಗದ ಆದೇಶದಂತೆ ಮೊಬೈಲ್ ಹಾಗೂ ಸ್ಮಾರ್ಟ್ ವಾಚ್, ಎಲೆಕ್ಟ್ರಾನಿಕ್ ಡಿವೈಸ್‌ಗಳನ್ನು ತರಲು ಅವಕಾಶವಿಲ್ಲ. ಮತ ಎಣಿಕಾ ಕೇಂದ್ರಕ್ಕೆ ಬರುವ ಅಭ್ಯರ್ಥಿಗಳು, ಮತ ಎಣಿಕಾ ಏಜಂಟರು, ಚುನಾವಣಾ ಏಜಂಟರು ಹಾಗೂ ಇತರರು ತಮ್ಮ ಮೊಬೈಲ್‌ಗಳನ್ನು ಮತ ಎಣಿಕಾ ಕೇಂದ್ರದ ಹೊರಗೆ ಬಿಟ್ಟು ಬರಬೇಕು. ಒಂದು ವೇಳೆ ಮರೆತು ತಂದರೂ, ಅವರಿಗೆ ಫಸ್ಟ್‌ಗೇಟ್‌ನಲ್ಲಿ ಮೊಬೈಲ್ ಸಂಗ್ರಹ ಕೇಂದ್ರ ತೆರೆಯಲಾಗಿದ್ದು, ಅಲ್ಲಿ ಇಟ್ಟು ಚೀಟಿ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಆದ್ದರಿಂದ ಮೊಬೈಲ್ ಹಾಗೂ ಇತರೆ ಡಿವೈಸ್‌ಗಳನ್ನು ಮತ ಎಣಿಕಾ ಕೇಂದ್ರಕ್ಕೆ ತರಬಾರದು” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮತ ಎಣಿಕಾ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿಯಲ್ಲಿ ಭಾನುವಾರ ಬೆಳಿಗ್ಗೆಯಿಂದ ನಿಷೆಧಾಜ್ಞೆ ಜಾರಿಗೊಳಿಸಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ಮತ್ತು ಸುತ್ತಲು ಅಗತ್ಯ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ” ಎಂದು ತಿಳಿಸಿದರು.

“ಚುನಾವಣಾ ವೇಳಾಪಟ್ಟಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 12ರಂದು ಅಧಿಸೂಚನೆ ಪ್ರಕಟವಾಗಿದ್ದು, ಏಪ್ರಿಲ್ 19 ರಿಂದ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಏಪ್ರಿಲ್ 20ರಂದು ನಾಮಪತ್ರ ಪರಿಶೀಲನೆ, ಏಪ್ರಿಲ್ 22 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಮೇ 7 ರಂದು ಮತದಾನ ಜರಗಿದ್ದು, ಜೂನ್ 4 ರಂದು ಕೃಷಿ ವಿಶ್ವವಿದ್ಯಾಲಯದ ಮುಖ್ಯ ಕಟ್ಟಡದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಜೂನ್ 6 ಕ್ಕೆ ಪ್ರಸುತ್ತ ಲೋಕಸಭೆ ಚುನಾವಣೆಯ ಮಾದರಿ ನೀತಿ ಸಂಹಿತೆ ಅವಧಿ ಮುಕ್ತಾಯ ಗೊಳ್ಳುವುದು ಎಂದು ಅವರು ತಿಳಿಸಿದರು.

ಇಟಿಪಿಬಿಎಸ್ ಮತಪತ್ರಗಳು

2024ರ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆಯು ಜೂನ್ 4ರಂದು ಜರಗಲಿದ್ದು, ಇಟಿಪಿಬಿಎಸ್ ಮತಪತ್ರಗಳ ಟ್ರಂಕನ್ನು ಜಿಲ್ಲಾ ಖಜಾನೆ ಧಾರವಾಡದ ಭದ್ರತಾ ಕೊಠಡಿಯಿಂದ ರಾಜಕೀಯ ಪಕ್ಷದ ಪ್ರತಿನಿಧಿಗಳು ಹಾಗೂ ಅಭ್ಯರ್ಥಿಗಳ ಉಪಸ್ಥಿತಿಯಲ್ಲಿ ಕರೆದು, ಜಿಪಿಎಸ್ ಅಳವಡಿಸಿದ ವಾಹನದಲ್ಲಿ ಪೊಲೀಸ್ ಬಂದೋಬಸ್ತ್‌ನೊಂದಿಗೆ ಮತ ಎಣಿಕೆ ಕೇಂದ್ರವಾದ ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಸಾಗಿಸಲಾಗುತ್ತದೆ.

“ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ವಿದ್ಯುನ್ಮಾನ ಮತಯಂತ್ರಗಳ ಭದ್ರತಾ ಕೊಠಡಿಯನ್ನು ಬೆಳಿಗ್ಗೆ 6-30ಕ್ಕೆ ಅಭ್ಯರ್ಥಿಗಳು ಮತ್ತು ಚುನಾವಣಾ ಏಜೆಂಟರುಗಳ ಉಪಸ್ಥಿತಿಯಲ್ಲಿ ತೆರಲಾಗುತ್ತದೆ. ಅಂಚೆ ಮತಪತ್ರಗಳ ಹಾಗೂ ವಿದ್ಯುನ್ಮಾನ ಮತಯಂತ್ರಗಳ ಮತ ಎಣಿಕೆಯ ಕಾರ್ಯವು ಜೂನ್ 4ರ ಬೆಳಿಗ್ಗೆ 8ರಿಂದ ಜರುಗುತ್ತದೆ” ಎಂದು ಅವರು ಹೇಳಿದರು.

“ಅಂಚೆ ಮತಪತ್ರ ಹಾಗೂ ಇಟಿಪಿಬಿಎಸ್, ಮತ ಎಣಿಕೆ ಕಾರ್ಯವನ್ನು ಚುನಾವಣಾಧಿಕಾರಿ ಕೊಠಡಿಯಲ್ಲಿ ಕೈಗೊಳ್ಳಲಾಗಿದ್ದು, ಮತ ಎಣಿಕೆ ಕಾರ್ಯಕ್ಕೆ ಹೆಚ್ಚುವರಿಯಾಗಿ 6 ಸಹಾಯಕ ಚುನಾವಣಾಧಿಕಾರಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, 6 ಟೇಬಲ್‌ಗಳಲ್ಲಿ ಅಂಚೆಮತ ಪತ್ರಗಳ ಮತ ಎಣಿಕೆ ಕಾರ್ಯ ಜರುಗಲಿದೆ” ಎಂದು ಹೇಳಿದರು.

ಮತ ಎಣಿಕೆ ಕಾರ್ಯಕ್ಕೆ ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು, ಇತರ ಸೇರಿದೆಂತೆ ಒಟ್ಟು 1500 ಜನ ಸಿಬ್ಬಂದಿಗಳು ಕಾರ್ಯನಿರ್ವಹಿಸಲಿದ್ದಾರೆ. ಹಾಗೂ 697 ಜನರು ರಾಜಕೀಯ ಪಕ್ಷ, ಪಕ್ಷೇತರ ಅಭ್ಯರ್ಥಿಗಳ ಪರವಾಗಿ ಏಣಿಕಾ ಏಜಂಟರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು.

ಜಿಲ್ಲೆಯಲ್ಲಿ ನಿಷೇಧಾಜ್ಞೆ: “ಜೂನ್ 4ರಂದು ಮತ ಎಣಿಕೆ ಕಾರ್ಯ ನಡೆಯುವುದರಿಂದ 2024ರ ಜೂನ್ 3ರ ಸಂಜೆ 6ರಿಂದ ಜೂನ್ 5ರ ರಾತ್ರಿ 10ರವರೆಗೆ ಜಿಲ್ಲೆಯಾದ್ಯಂತ ಶಾಂತಿ ಸುವ್ಯವಸ್ಥೆ ಕಾಪಾಡಲು ಸಿಆರ್‌ಪಿಸಿ 1973 ಕಲಂ 144 ರಡಿ ನಿಷೇದಾಜ್ಞೆ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ” ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳಿಗೆ ಪ್ರತ್ಯೇಕ ಕೇಂದ್ರ: ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಮಾಧ್ಯಮಗಳಿಗೆ ವಿಶೇಷವಾಗಿ ಪ್ರತ್ಯೇಕ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ಡಿವೈಸಸ್‌ ಬಳಕೆ ನಿಷೇಧ: “ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಧಾರವಾಡ ಲೋಕಸಭಾ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್, ಎಲೆಕ್ಟ್ರಾನಿಕ್ ಡಿವೈಸ್‌ಗಳ ಬಳಕೆಗೆ ಅವಕಾಶ ಇರುವುದಿಲ್ಲ. ಮತ ಎಣಿಕೆ ಕಾರ್ಯ ಮುಕ್ತಾಯಗೊಂಡ ನಂತರ ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಇವಿಎಂ ಮತ್ತು ಮತಪತ್ರ (Election Papers)ಗಳನ್ನು ಮುದ್ರೆ (ಸೀಲ್) ಮಾಡುವ ಕಾರ್ಯ ಕೈಗೊಳ್ಳಲಾಗುವುದು” ಎಂದು ತಿಳಿಸಿದರು.

“ಮುದ್ರೆ ಹಾಕಲಾದ ಇವಿಎಂಗಳನ್ನು ಧಾರವಾಡದ ಮಿನಿ ವಿಧಾನಸೌಧದ ಆವರಣದಲ್ಲಿರುವ ಇವಿಎಂ ವೇರ್‌ಹೌಸ್ ಅನ್ನು ಅಭ್ಯರ್ಥಿಗಳು ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ತೆರೆದು ವಿಧಾನಸಭಾ ಮತಕ್ಷೇತ್ರವಾರು ಭದ್ರಪಡಿಸಲಾಗುವುದು. ಮುದ್ರೆ ಹಾಕಲಾದ ಮತಪತ್ರ (Election Papers )ಗಳನ್ನು ಧಾರವಾಡದ ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿ ಭದ್ರಪಡಿಸಲಾಗುವುದು” ಎಂದು ತಿಳಿಸಿದರು.

ಪೊಲೀಸ್‌ ಹಾಗೂ ಇತರ ದಳಗಳ ಭದ್ರತೆ, ಪಾರ್ಕಿಂಗ್ ವ್ಯವಸ್ಥೆ: ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ

“ಸಿಆರ್‌ಪಿಎಫ್, ಕೆಎಸ್‌ಅರ್‌ಪಿ, ಸಿಎಆರ್, ಹೋಮ್ ಗಾರ್ಡ್‌ ಮತ್ತು ಸ್ಥಳೀಯ ಪೊಲೀಸ್ ಅಧಿಕಾರಿ, ಸಿಬ್ಬಂದಿಯವರನ್ನು ನಿಯೋಜಿಸಿದ್ದು, ಮತ ಎಣಿಕೆ ಕೇಂದ್ರದ ಸುತ್ತಲೂ ಭದ್ರತೆಗಾಗಿ 650 ಪೊಲೀಸ್ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿಲಾಗಿದೆ” ಎಂದು ಮಹಾನಗರ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದರು.

ಎಣಿಕೆ ಕೇಂದ್ರದ ಸುತ್ತಲಿನ ಪಾರ್ಕಿಂಗ್ ವ್ಯವಸ್ಥೆ 

ಚುನಾವಣಾ ಅಭ್ಯರ್ಥಿಗಳು ಮತ್ತು ಎಜೆಂಟರ್‌ಗಳಿಗೆ ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ಪೆಪ್ಪಿ ಕಂಪನಿ ಕ್ರಾಸ್‌ನಿಂದ ಡೈರಿ, ಕೃಷಿ ವಿಶ್ವವಿದ್ಯಾಲಯ, ಕೆಇಬಿ ಗ್ರೀಡ್ ಗೇಟ್ ಮೂಲಕ ಕಾರಂಜಿ ಹತ್ತಿರ ಖಾಲಿ ಜಾಗದಲ್ಲಿ ಚುನಾವಣಾ ಅಭ್ಯರ್ಥಿಗಳು ಮತ್ತು ಎಜೆಂಟರ್‌ಗಳಿಗೆ ವಾಹನಗಳ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

ಸಾರ್ವಜನಿಕರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ಹುಬ್ಬಳ್ಳಿ, ಸವದತ್ತಿ, ನವಲಗುಂದ, ಕಲಘಟಗಿ, ಕಡೆಯಿಂದ ಮತ ಎಣಿಕೆ ಕೇಂದ್ರಕ್ಕೆ ಬರುವ ಸಾರ್ವಜನಿಕರು ತಮ್ಮ ವಾಹನಗಳನ್ನು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ, ಶಿರಡಿನಗರದ ಮಾರ್ಗವಾಗಿ ಬಸವನಗರ ಹತ್ತೀರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಬೇಕು ಹಾಗೂ ಬೆಳಗಾವಿ ಕಡೆಯಿಂದ ಬರುವಂತ ವಾಹನಗಳು ಕೆಇಬಿ ಗ್ರೀಡ್ ಹತ್ತಿರ ಯು-ಟರ್ನ್ ಮಾಡಿಕೊಂಡು ಬಸವನಗರ ಹತ್ತಿರ ಎಡಭಾಗದಲ್ಲಿ ಖಾಲಿ ಜಾಗದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

ಚುನಾವಣಾ ಕರ್ತವ್ಯದ ಅಧಿಕಾರಿ ಮತ್ತು ಸಿಬ್ಬಂದಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ: ಪೆಪ್ಪಿ ಕಂಪನಿ ಕ್ರಾಸ್ ಮಾರ್ಗವಾಗಿ ಎತ್ತಿನಗುಡ್ಡ ಗ್ರಾಮದ ಕ್ರಾಸ್ ಮುಖಾಂತರ ಲೇಡಿಸ್ ಹಾಸ್ಟೆಲ್ ಕ್ರಾಸ್, ಮೆಣಸಿನಕಾಯಿ ಸರ್ಕಲ್ ಕಡೆಗೆ ಅಧಿಕಾರಿ ಮತ್ತು ಸಿಬ್ಬಂದಿ ಅವರನ್ನು ಇಳಿಸಿ ಪರತ್ ಅದೇ ಮಾರ್ಗವಾಗಿ ಹೊಸ ಆಡಳಿತ ಭವನದ ಹಿಂದುಗಡೆ ಖಾಲಿ ಜಾಗದಲ್ಲಿ ಮತ್ತು ಲೇಡಿಸ್ ಹಾಸ್ಟಲ್‌ನಿಂದ ಎಡಕ್ಕೆ ತಿರುಗಿ ಎತ್ತಿನಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಪಾರ್ಕಿಂಗ್ ಮಾಡಲು ತಿಳಿಸಲಾಗಿದೆ.

ಉಪನಗರ ಪೊಲೀಸ್ ಠಾಣೆ ಎದುರಿಗೆ (ಭಾರಿ ವಾಹನಗಳ ಡೈವರ್ಷನ್): ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ವಾಹನಗಳು ಉಪನಗರ ಪೊಲೀಸ್ ಠಾಣೆಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಜರ್ಮನ್ ಸರ್ಕಲ್ ಮಾರ್ಗವಾಗಿ ಕೆಲಗೇರಿ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಹೋಗಲು ಸೂಚಿಸಲಾಗಿದೆ.

ನರೇಂದ್ರ ಬೈಪಾಸ್ ಏರಟೆಕ್ ಕ್ರಾಸ್ (ಭಾರಿ ವಾಹನಗಳ ಡೈವರ್ಷನ್): ಪೆಪ್ಪಿ ಕಂಪನಿ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಭಾರೀ ವಾಹನಗಳು ನರೇಂದ್ರ ಟೋಲ್‌ ಪ್ಲಾಜಾ ಮುಖಾಂತರ ಕೆಲಗೇರಿ ಬ್ರಿಡ್ಜ್‌ನಿಂದ ಕೆಳಗೆ ಇಳಿದು ಜರ್ಮನ್ ಸರ್ಕಲ್, ಉಪನಗರ ಪೊಲೀಸ್ ಠಾಣೆ ಮಾರ್ಗವಾಗಿ ಹುಬ್ಬಳ್ಳಿ ಹಾಗೂ ಸವದತ್ತಿ, ನವಲಗುಂದ ಕಡೆಗೆ ಹೋಗಲು ಸೂಚಿಸಲಾಗಿದೆ.

ಹುಬ್ಬಳ್ಳಿ ಮತ್ತು ಸವದತ್ತಿ ಕಡೆಯಿಂದ ಬೆಳಗಾವಿ ಕಡೆಗೆ ಹೋಗುವಂತ ಲಘು ವಾಹನಗಳು ಪೆಪ್ಪಿ ಕಂಪನಿಯಿಂದ ಮಾರ್ಗ ಬದಲಾವಣೆ ಮಾಡಿಕೊಂಡು ಅರ್ಜಂಟ್‌ನಗರ ಶಿರಡಿನಗರ, ಬಸವನಗರ ಮಾರ್ಗವಾಗಿ ನರೇಂದ್ರ ಬೈಪಾಸ್ ಮುಖಾಂತರ ಬೆಳಗಾವಿ ಕಡೆಗೆ ಸಂಚರಿಸಬೇಕು.

ಬಸವನಗರ ಕ್ರಾಸ್ (ಲಘು ವಾಹನಗಳ ಡೈವರ್ಷನ್) ಬೆಳಗಾವಿ ಕಡೆಯಿಂದ ಧಾರವಾಡ ನಗರಕ್ಕೆ ಆಗಮಿಸುವ ಲಘು ವಾಹನಗಳು ಕೆಇಬಿ ಗ್ರಿಡ್ ಹತ್ತಿರ ಯು-ಟರ್ನ್ ಮಾಡಿಕೊಂಡು ಬಸವನಗರ ಶಿರಡಿನಗರ, ಅರ್ಜಂಟ್‌ನಗರ ಪೆಪ್ಪಿ ಕಂಪನಿ ಮಾರ್ಗವಾಗಿ ಹಳೇ ಪಿಬಿ ರಸ್ತೆ ಮುಖಾಂತರ ಧಾರವಾಡ ನಗರದ ಕಡೆಗೆ ಹೋಗಲು ಸೂಚಿಸಲಾಗಿದೆ ಎಂದು ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಲ್ ಮಾರ್ಕ್ಸ್‌ ಕಾರ್ಮಿಕರ ಮೂಲ ಸಮಸ್ಯೆಗಳಿಗೆ ಪರಿಹಾರ ಕೊಟ್ಟ ಮಹಾನ್ ದಾರ್ಶನಿಕ: ದಾದಾಪೀರ್ ನವಿಲೇಹಾಳ್

“ಮತ ಏಣಿಕಾ ಕೇಂದ್ರಕ್ಕೆ ಆಗಮಿಸುವವರನ್ನು ಮೂರು ಹಂತದಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ. ರಾಜಕೀಯ ಪಕ್ಷಗಳ ಏಜಂಟರಿಗೆ, ಅಧಿಕಾರಿಗಳಿಗೆ ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತ್ಯೇಕವಾದ ಸಂಚಾರ ಮಾರ್ಗಗಳನ್ನು ಮಾಡಲಾಗಿದೆ. ಜಿಲ್ಲೆಯಲ್ಲಿ 144 ಕಲಂ ಜಾರಿಯಲ್ಲಿ ಇರುವುದರಿಂದ ವಿಜಯೋತ್ಸವ ಆಚರಣೆ, ಪಟಾಕಿ ಹಚ್ಚುವುದನ್ನು ನಿರ್ಬಂಧಿಸಲಾಗಿದೆ” ಎಂದು ತಿಳಿಸಿದರು.

ಮಹಾನಗರ ಸೇರಿದಂತೆ ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸುಮಾರು 2500 ಮಂದಿ ಪೊಲೀಸ್ ಅಧಿಕಾರಿ,‌ ಸಿಬ್ಬಂದಿಗಳನ್ನು ಮತ್ತು 6 ಕೆಎಸ್‌ಆರ್‌ಪಿ ತುಕುಡಿಗಳನ್ನು ಹಾಗೂ 500 ಮಂದಿ ಹೋಮ್ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ” ಎಂದು ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಉಪ ಪೊಲೀಸ್ ಆ‌ಯುಕ್ತ ಕುಶಲ್ ಚೌಕ್ಸೆ, ಅಪರ ಜಿಲ್ಲಾಧಿಕಾರಿ ಗೀತಾ ಸಿ ಡಿ ಇದ್ದರು.

LEAVE A REPLY

Please enter your comment!
Please enter your name here