ಪದೇ ಪದೆ ಹಾಲಿನ ದರ ಕಡಿಮೆ ಮಾಡುತ್ತಿರುವ ಶಿಮುಲ್ ವಿರುದ್ಧ ಜನವರಿ 9ರಂದು ಶಿವಮೊಗ್ಗ ಸಮೀಪದ ಮಾಚೇನಹಳ್ಳಿಯಲ್ಲಿ ಇರುವ ಶಿಮುಲ್ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘ ದಕ್ಷಿಣ ಪ್ರಾಂತದ ಅಧ್ಯಕ್ಷ ಪ್ರವೀಣ್ ಪಟೇಲ್ ತಿಳಿಸಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಜನವರಿ 9ರ ಬೆಳಿಗ್ಗೆ 10.30 ರಿಂದ ಪ್ರತಿಭಟನೆ ನಡೆಸಲಾಗುವುದು. ಸ್ಥಳದಲ್ಲೇ ಹಾಲು ಉತ್ಪಾದಕರ ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಡೆಸಲಾಗುವುದು” ಎಂದು ತಿಳಿಸಿದರು.
“ಶಿವಮೊಗ್ಗ ಹಾಲು ಉತ್ಪಾದಕರ ಸಂಘ ಕಳೆದ ನಾಲ್ಕು ತಿಂಗಳಲ್ಲಿ ಪಶು ಆಹಾರ, ಔಷಧಗಳ ಬೆಲೆ ಹೆಚ್ಚಿಸಿದೆ. ಗ್ರಾಹಕರಿಗೆ ಪ್ರತಿ ಲೀಟರ್‌ಗೆ ₹42ರಿಂದ ₹43ರಷ್ಟು ನಿಗದಿಪಡಿಸಲಾಗಿದೆ. ಆದರೆ, ಹಾಲು ಉತ್ಪಾದಕರಿಗೆ ₹29.50 ಕೊಡಲಾಗುತ್ತಿರುವುದರಿಂದ ಸಾಕಷ್ಟು ತೊಂದರೆಯಾಗುತ್ತಿದೆ. ಉತ್ಪಾದನೆ ವೆಚ್ಚದ ಆಧಾರದಲ್ಲಿ ಪ್ರತಿ ಲೀಟರ್‌ಗೆ ಕನಿಷ್ಠ ₹60 ನೀಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕಾರ್ಮಿಕರೊಬ್ಬರಿಂದ ಒಳಚರಂಡಿ ಸ್ವಚ್ಛತೆ; ಎಫ್‌ಐಆರ್ ದಾಖಲು
“ಶಿವಮೊಗ್ಗ ಹಾಲು ಒಕ್ಕೂಟ ರೈತರಿಂದ ಹಾಲು ಖರೀದಿಸಿ ಖಾಸಗಿಯವರಿಗೆ ಮಾರುವ ಮೂಲಕ ಲಾಭ ಮಾಡಿಕೊಳ್ಳುತ್ತಿದೆ. ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಯ ಹಾಲು ಒಕ್ಕೂಟ ರೈತರು ಕಟ್ಟಿರುವ ಒಕ್ಕೂಟ. ಹಾಗಾಗಿ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಲಾಗುತ್ತದೆ. ಬೇಡಿಕೆ ಈಡೇರಿಸದಿದ್ದಲ್ಲಿ ಪರ್ಯಾಯ ವ್ಯವಸ್ಥೆಯತ್ತ ಗಮನ ಹರಿಸಲಾಗುವುದು” ಎಂದರು.
ಜಿಲ್ಲಾ ಸಂಘದ ಅಧ್ಯಕ್ಷ ಚಿದಾನಂದ್, ವಸಂತಮ್ಮ, ಪ್ರಕಾಶ್ ನೇರ್ಲಿಗೆ, ಬಸವರಾಜ್ ಸೇರಿದಂತೆ ಇತರರು ಇದ್ದರು.