ಕರ್ನಾಟಕ ರಾಜ್ಯೋತ್ಸವ ಸಮಸ್ತ ಕನ್ನಡಿಗರ ಹಬ್ಬ. ಕರ್ನಾಟಕವು ಹಲವು ಜಗತ್ತುಗಳು ತುಂಬಿದ ಒಂದು ರಾಜ್ಯ. ಇಲ್ಲಿನ ಸರ್ವ ಜನಾಂಗದ ಅಭಿವೃದ್ದಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ತಿಳಿಸಿದರು.
ದಾವಣಗೆರೆ ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾದ 69ನೇ ಕರ್ನಾಟಕ ರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ, ಜನತೆಗೆ ರಾಜ್ಯೋತ್ಸವದ ಶುಭಾಶಯ ತಿಳಿಸಿ ಮಾತನಾಡಿದರು.
1956ರಲ್ಲಿ ಏಕೀಕರಣಗೊಂಡ ಮೈಸೂರು ರಾಜ್ಯವನ್ನು 1973 ರಲ್ಲಿ ದೇವರಾಜ್ ಅರಸು ಆಡಳಿತದಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಈಗಾಗಲೇ ನಾಮಕರಣವಾಗಿ 50 ವರ್ಷಗಳನ್ನು ಪೂರೈಸಿದ್ದು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಮೊಟ್ಟ ಮೊದಲ ಕನ್ನಡ ಶಾಸನ ಹಲ್ಮಿಡಿ ಶಿಲಾಶಾಸನದ ಪ್ರತಿಕೃತಿಯನ್ನು ಅನಾವರಣಗೊಳಿಸಲಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮದ ಅಂಗವಾಗಿ ನಾಡಿನಾದ್ಯಂತ ಹಲವಾರು ಕನ್ನಡ ಪರ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ದಾವಣಗೆರೆ ನಗರದ ಗಾಜಿನಮನೆಯ ಆವರಣದಲ್ಲಿ ನವೆಂಬರ್ ತಿಂಗಳಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯವು ಕಾವೇರಿಯಿಂದ ಗೋದಾವರಿಯವರೆಗೆ ವಿಸ್ತಾರವಾಗಿ ಹರಡಿದ್ದ ನಾಡು. ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ. ಸಾಮ್ರಾಟ ಅಶೋಕ ಹಾಗೂ ಶಾತವಾಹನರ ಆಳ್ವಿಕೆಯಲ್ಲಿಯೂ ಕನ್ನಡ ಭಾಷೆಯ ಬಳಕೆಯನ್ನು ಕಾಣಬಹುದು. ರಾಜ ಮನೆತನಗಳಾದ ಕದಂಬ, ಗಂಗರು, ಚಾಲುಕ್ಯ, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರದ ಅರಸರು ಮತ್ತು ಮೈಸೂರು ಒಡೆಯರ ಕಾಲದಲ್ಲಿ ಕನ್ನಡ ಭಾಷೆ ಸಾಹಿತ್ಯಿಕವಾಗಿ ಹಾಗೂ ಜನಮನದ ಭಾಷೆಯಾಗಿ ಹುಲುಸಾಗಿ ಬೆಳೆದು ಬಂದಿತು. ಕರ್ನಾಟಕ ರಾಜ್ಯೋತ್ಸವ ಸಮಸ್ತ ಕನ್ನಡಿಗರ ಹಬ್ಬ, ಇದು ನಮ್ಮ ನಾಡು-ನುಡಿ, ಹಿರಿಮೆ-ಗರಿಮೆ ಗಳನ್ನು ಮೆಲುಕು ಹಾಕುವ ಸಾಂಸ್ಕೃತಿಕ ಉತ್ಸವವಾಗಿದೆ ಎಂದರು.
ಕಳೆದ 5 ದಶಕಗಳಲ್ಲಿ ರಾಜ್ಯದ ಬೆಳವಣಿಗೆಯನ್ನು ಅವಲೋಕಿಸಿದರೆ ಆಡಳಿತ, ಸಂಸ್ಕೃತಿ, ಸಾಹಿತ್ಯ, ಶಿಕ್ಷಣ, ಲಲಿತಕಲೆ, ನೀರಾವರಿ, ಪ್ರವಾಸೋದ್ಯಮ, ತಂತ್ರಜ್ಞಾನ, ಕೈಗಾರಿಕೆ, ಜಾನಪದ, ಕೃಷಿ, ವಿಜ್ಞಾನ, ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಮಹತ್ತರ ಸಾಧನೆ ಮಾಡುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನದೇ ಆದ ವಿಶಿಷ್ಟ ಸ್ಥಾನ ಪಡೆದಿದೆ. ನಾಡು ಹಲವು ಕ್ಷೇತ್ರಗಳಲ್ಲಿ ಅಭಿವೃದ್ದಿ ಹೊಂದುತ್ತಿದ್ದು ಈಗಿನ ಯುವ ಜನರಿಗೆ ಪ್ರೇರಣಾದಾಯಕವಾಗಿದೆ. ಎಲ್ಲರೂ ಸಹ ಕನ್ನಡ ನಾಡಿನ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡು ರಚನಾತ್ಮಕ ಸಾಧನೆಗಳನ್ನು ಮಾಡುವಂತಾಗಲಿ ಎಂದು ತಮ್ಮ ಆಶಯ ವ್ಯಕ್ತಪಡಿಸಿದರು.

ರಾಜ್ಯೋತ್ಸವ ಅಂಗವಾಗಿ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಅವರು, ಕನ್ನಡತಾಯಿ ಭುವನೇಶ್ವರಿ ಪ್ರತಿಮೆಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಲಾ ತಂಡಗಳೊಂದಿಗೆ ವಿವಿಧ ಸ್ತಬ್ದ ಚಿತ್ರಗಳೊಂದಿಗೆ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆ ಕಲಾತಂಡಗಳೊಂದಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಿತು.
ನಗರದ ನಿಜಲಿಂಗಪ್ಪ ಬಡಾವಣೆಯ ಗುರುಕುಲ ಪಬ್ಲಿಕ್ ಶಾಲೆ, ಶಾಮನೂರು ಜೈನ್ ವಿದ್ಯಾಲಯ, ನಿಟ್ಟುವಳ್ಳಿಯ ನಿಂಚನ ಪಬ್ಲಿಕ್ ಶಾಲೆ, ಸಿಬಿಎಸ್‍ಇ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಕನ್ನಡ ಹಾಡುಗಳಿಗೆ ಹೆಜ್ಜೆ ಹಾಕಿದರು. ಮೊಟ್ಟಮೊದಲ ಹಲ್ಮಿಡಿ ಶಾಸನದ ಪ್ರತಿಕೃತಿಯನ್ನು ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಲಾಯಿತು. ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ನೆರವೇರಿಸಿದರು.
ಸಮಾರಂಭದಲ್ಲಿ ಶಾಸಕರಾದ ಕೆ.ಎಸ್.ಬಸವಂತಪ್ಪ, ಮೇಯರ್ ಚಮನ್ ಸಾಬ್.ಕೆ, ದೂಡಾ ಅಧ್ಯಕ್ಷರಾದ ದಿನೇಶ್ ಕೆ.ಶೆಟ್ಟಿ, ಉಪ ಮೇಯರ್ ಸೋಗಿ ಶಾಂತಕುಮಾರ್, ಜಿ.ಪಂ ಸಿಇಒ ಸುರೇಶ್ ಇಟ್ನಾಳ್, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗವಹಿಸಿದ್ದರು.
ದಾವಣಗೆರೆಯ ನೂತನ @KSRTC_Journeys ನಿಲ್ದಾಣದಲ್ಲಿ ರಾಜ್ಯೋತ್ಸವದ ಆಚರಣೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಬಸ್ ನಿಲ್ದಾಣದ ಮುಂಭಾಗದಲ್ಲೇ ಪುಟ್ಟ ಬಸ್ಸೊಂದು ಟ್ರ್ಯಾಕಿನಲ್ಲಿ ಸುತ್ತುತ್ತಿದ್ದ ಟ್ಯಾಬ್ಲೋ ಎಲ್ಲರ ಗಮನ ಸೆಳೆದಿತ್ತು. ಶಕ್ತಿ ಯೋಜನೆಯ ಪ್ರಚಾರಕ್ಕೆ ಇದನ್ನು ಮಾಡಲಾಗಿತ್ತು.@RLR_BTM @BMTC_BENGALURU #davanagere pic.twitter.com/s8qB09fdks
— eedina.com ಈ ದಿನ.ಕಾಮ್ (@eedinanews) November 1, 2024
ದಾವಣಗೆರೆಯ ನೂತನ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ರಾಜ್ಯೋತ್ಸವದ ಆಚರಣೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕೆಲವು ಮಾರ್ಗಗಳ ಬಸ್ ಗಳಿಗೆ ಸಂಪೂರ್ಣವಾಗಿ ಕನ್ನಡವನ್ನೇ ಮೈವೆತ್ತಂತೆ ಅಲಂಕರಿಸಲಾಗಿತ್ತು. ಬಸ್ ನಿಲ್ದಾಣದ ಮುಂಭಾಗದಲ್ಲೇ ಪುಟ್ಟ ಬಸ್ಸೊಂದು ಟ್ರ್ಯಾಕಿನಲ್ಲಿ ಸುತ್ತುತ್ತಿದ್ದ ಟ್ಯಾಬ್ಲೋ ಎಲ್ಲರ ಗಮನ ಸೆಳೆದಿತ್ತು. ಶಕ್ತಿ ಯೋಜನೆಯ ಪ್ರಚಾರಕ್ಕೆ ಇದನ್ನು ಮಾಡಲಾಗಿತ್ತು. ಕನ್ನಡಕ್ಕೆ ಸೇವೆ ಸಲ್ಲಿಸುತ್ತಿದವರ ಭಾವಚಿತ್ರಗಳಿದ್ದ ಕನ್ನಡ ರಾಜ್ಯೋತ್ಸವದ ಟ್ಯಾಬ್ಲೋ ಎಲ್ಲರ ಗಮನ ಸೆಳೆದಿತ್ತು. ಸಾರ್ವಜನಿಕರು ಟ್ಯಾಬ್ಲೋ ಮುಂದೆ ನಿಂತು ಪೋಟೋ ತೆಗೆಸಿಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.
