ದಾವಣಗೆರೆಯಲ್ಲಿ ಸಾರ್ವಜನಿಕ ಹಿಂದೂ ಗಣಪತಿಗಳ ಒಕ್ಕೂಟದಿಂದ ನಾಗಮಂಗಲ ಘಟನೆ ಖಂಡಿಸಿ ನಡೆಸಿದ್ದ ಪ್ರತಿಭಟನೆಯ ವೇಳೆ ಪ್ರಚೋದನಕಾರಿ ಹೇಳಿಕೆ ನೀಡಿದ್ದ ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಹೇಳಿಕೆಗೆ ಪ್ರತಿಯಾಗಿ ಅದೇ ರೀತಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ನಗರದ ಮಂಡಕ್ಕಿ ಭಟ್ಟಿ ಲೇಔಟ್‌ನ ಕಿಡಿಗೇಡಿಯನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ನಗರದ ಮಂಡಕ್ಕಿ ಭಟ್ಟಿ ಲೇಔಟ್‌ನ ಸೈಯದ್ ನೂರ್ ಅಹಮದ್ ಬಂಧಿತ ಆರೋಪಿ. ದಾವಣಗೆರೆಯ ಬಸವ ನಗರದ ಪೊಲೀಸರು ಆರೋಪಿಯನ್ನು ಹರಿಹರ ನಗರದಲ್ಲಿ ಬಂಧಿಸಿದ್ದಾರೆ.
ಆರೋಪಿಯನ್ನು ದಾವಣಗೆರೆಯ ಒಂದನೇ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಪ್ರಶಾಂತ್ ಅವರ ಎದುರು ಹಾಜರುಪಡಿಸಲಾಗಿದ್ದು, ನ್ಯಾಯಾಧೀಶರು ಆರೋಪಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ಆತನನ್ನು ದಾವಣಗೆರೆಯ ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ನಾಗಮಂಗಲದಲ್ಲಿ ಗಣೇಶಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ನಡೆದಿದ್ದ ಕಲ್ಲುತೂರಾಟಕ್ಕೆ ಸಂಬಂಧಿಸಿದಂತೆ ಸಂಘಪರಿವಾರವು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದ್ದವು. ಈ ವೇಳೆ ಸಂಘಪರಿವಾರದ ಮುಖಂಡ ಸತೀಶ್ ಪೂಜಾರಿ ಪ್ರಚೋದನಕಾರಿ ಮಾತುಗಳನ್ನು ಆಡಿದ್ದರು. ಇದಕ್ಕೆ ಪ್ರತಿಯಾಗಿ ಸೈಯದ್ ನೂರ್ ಅಹಮದ್ ಕೂಡ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದನು. ಮರುದಿನ ಬೇತೂರು ರಸ್ತೆಯ ಅರಳಿಮರ ಸರ್ಕಲ್ ಬಳಿ ವೆಂಕಟೇಶ್ವರ ಸರ್ಕಲ್‌ನಲ್ಲಿ ನಡೆದ ಗಣಪತಿ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ಹೋರಾಟದ ಪ್ರಕರಣ ನಡೆದಿತ್ತು.
ಇದನ್ನು ಓದಿದ್ದೀರಾ? ಮಂಡ್ಯ | ಪ್ರವಾದಿ ಮಹಮ್ಮದ್ ಲೇಖನ ಸಂಕಲನ ಪುಸ್ತಕ ಬಿಡುಗಡೆ ಮಾಡಿದ ನಿರ್ಮಲಾನಂದ ಸ್ವಾಮೀಜಿ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಾವಣಗೆರೆಯ ಪೊಲೀಸ್ ಠಾಣೆಗಳಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಸಂಘಪರಿವಾರದ ಮುಖಂಡ ಸತೀಶ್ ಪೂಜಾರಿಯನ್ನು ದಾವಣಗೆರೆ ಪೊಲೀಸರು ಈಗಾಗಲೇ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದರು.
