ದಾವಣಗೆರೆ-ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿನ ರೋಗಿಗಳ ವಾರ್ಡ್‌ನಲ್ಲಿ ಏಕಾಏಕಿ ಮೇಲ್ಪಾವಣಿ ಕುಸಿದ ಘಟನೆ ನಡೆದಿದ್ದು, ವಾರ್ಡ್‌ನಲ್ಲಿದ್ದ ರೋಗಿಗಳು ಭಯಭೀತರಾಗಿದ್ದರು.
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಒಳರೋಗಿಯಾಗಿ ವಾರ್ಡ್‌ನಲ್ಲಿ ಮಲಗಿದ್ದ ರೋಗಿಗಳ ಮೇಲೆ ಮೇಲ್ಛಾವಣಿಯ ಒಳಪದರ ಕುಸಿದು ಬಿದ್ದಿದೆ. ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯ 71, 72ನೇ ವಾರ್ಡ್‌ನಲ್ಲಿ ರೋಗಿಗಳ ಮೇಲೆ ಮೇಲ್ಛಾವಣಿ ಕುಸಿದು ಬಿದ್ದಿದೆ. ಆದರೆ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ರೋಗಿಗಳು ಮಲಗಿದ್ದಾಗ ಏಕಾಏಕಿ ಮೇಲ್ಛಾವಣಿ ಬೀಳುತ್ತಿದ್ದಂತೆ ವಾರ್ಡ್‌ನಲ್ಲಿದ್ದ ರೋಗಿಗಳು ಭಯಗೊಂಡಿದ್ದಾರೆ.
“ಮೇಲ್ಛಾವಣಿ ಕುಸಿದು ಬೀಳುತ್ತಿದ್ದಂತೆ ರೋಗಿಗಳು ಗಾಬರಿಯಿಂದ ಎದ್ದು ಓಡಿ ಹೋಗಿದ್ದಾರೆ. ಅಲ್ಲದೆ, ಬೆಡ್ ಮೇಲೆ ಮಣ್ಣು ಬಿದ್ದಿದೆ. ರೋಗಿಗಳ ಮೇಲೆ ಪೂರ್ತಿ ಮೇಲ್ಛಾವಣಿ ಕುಸಿದು ಬಿದ್ದಿದ್ದರೆ ಗತಿ ಏನು? ಚಿಕಿತ್ಸೆ ಪಡೆದು ರೋಗಿಗಳು ಗುಣಮುಖರಾಗಲು ಇಲ್ಲಿಗೆ ಬರುತ್ತಾರೆ. ಜೀವಕ್ಕೆ ಕಂಟಕವಾದರೆ ಯಾರಿಗೆ ಹೇಳುವುದು. ಆದರೆ, ಈ ವಾರ್ಡ್ ಮಾತ್ರವಲ್ಲ, ಬೇರೆ ಕಡೆಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಹಾಗಾಗಿ, ಇಂಥ ಘಟನೆ ಮರುಕಳಿಸದಂತೆ ಕ್ರಮ ವಹಿಸಬೇಕು” ಎಂದು ರೋಗಿಗಳು ಮನವಿ ಮಾಡಿದ್ದಾರೆ.
“ಜಿಲ್ಲಾಸ್ಪತ್ರೆಗೆ ಬಡವರು ಚಿಕಿತ್ಸೆಗೆ ಬರುತ್ತಾರೆ. ಇದ್ದಕ್ಕಿದ್ದಂತೆ ಮತ್ತೊಂದು ಅನಾಹುತ ಸಂಭವಿಸಿದರೆ ಎಲ್ಲಿಗೆ ಹೋಗಬೇಕು. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುದ್ದ ಕ್ರಮ ಜರುಗಿಸಬೇಕು. ಆರೋಗ್ಯ ಸಚಿವರು ಇತ್ತ ಗಮನ ಹರಿಸಬೇಕು. ಇಲ್ಲಿಗೆ ಭೇಟಿ ನೀಡಿ ಅವ್ಯವಸ್ಥೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು” ಎಂದು ರೋಗಿಗಳ ಸಂಬಂಧಿಕರು ಆಗ್ರಹಿಸಿದ್ದಾರೆ.
“ಜಿಲ್ಲಾಸ್ಪತ್ರೆಯು 40ಕ್ಕೂ ಹೆಚ್ಚು ವರ್ಷ ಹಳೆಯದಾದ ಕಟ್ಟಡವಾಗಿದ್ದು, ಇಲ್ಲಿನ ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಸಂಘಟನೆಯ ಮುಖಂಡರು ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಉತ್ತಮ ಆರೋಗ್ಯ ವ್ಯವಸ್ಥೆ ಒದಗಿಸಲು ಒತ್ತಾಯಿಸುತ್ತಲೇ ಬಂದಿವೆ. ಈ ಮಧ್ಯೆ ಘಟನೆ ನಡೆದಿದ್ದು ರೋಗಿಗಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಇಲ್ಲಿನ ಅವ್ಯವಸ್ಥೆಗೆ ಸ್ಥಳೀಯ ಆಡಳಿತ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ, ಖಾಸಗಿ ಆಸ್ಪತ್ರೆಗಳ ಲಾಭಿ ಕಾರಣವಾಗಿದೆ” ಎಂಬ ಆರೋಪ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಮೆಣಸಿನಕಾಯಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿ ಸರ್ಕಾರವೇ ಖರೀದಿಸಬೇಕು: ಎಐಕೆಕೆಎಂಎಸ್
ಜಿಲ್ಲಾಸ್ಪತ್ರೆಯ ವ್ಯವಸ್ಥೆ ಬಗ್ಗೆ ರೋಗಿಗಳು ಅಕ್ರೋಶ ವ್ಯಕ್ತಪಡಿಸಿದ್ದು, ಆರೋಗ್ಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ.
