ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಭರವಸೆ ನೀಡಿದ್ದ 6ನೇ ಗ್ಯಾರಂಟಿಯನ್ನು ಮರೆತಿದೆ. ಈ ಗ್ಯಾರಂಟಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಬಿಸಿಯೂಟ ಯೋಜನೆಯ ಅಡುಗೆ ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಕನಿಷ್ಟ ವೇತನ ನೀಡುವುದಾಗಿ ಕೊಟ್ಟಿದ್ದ ಭರವಸೆ ಸೇರಿದಂತೆ ಜನತೆಗೆ ನೀಡಿದ ಎಲ್ಲ ಭರವಸೆಗಳನ್ನೂ ಈಡೇರಿಸಬೇಕು ಎಂದು ಸಿಪಿಐ ದಾವಣಗೆರೆ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಸರ್ಕಾರವನ್ನು ಒತ್ತಾಯಿಸಿದರು.
ನಗರದ ಜಯದೇವ ಸರ್ಕಲ್ ಬಳಿ ಸೇರಿದ್ದ ಭಾರತೀಯ ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ಜನಾಗ್ರಹ ಜನಾಂದೋಲನದ ಭಾಗವಾಗಿ ಪೋಸ್ಟರ್ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

“ರೈತರು, ಕಾರ್ಮಿಕರು ಮತ್ತು ದುಡಿಯುವ ಜನರ ಮತಗಳಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದುಡಿಯುವ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ಹಿಂದೆ ಬಿದ್ದಿದೆ. ಕೂಡಲೇ ಕೊಟ್ಟ ಭರವಸೆ ಈಡೇರಿಸಿ ಜನರ ನೈಜ ಸಮಸ್ಯೆಗಳನ್ನು ಪರಿಹರಿಸಬೇಕು” ಎಂದು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ರೈತರ ಅಗತ್ಯತೆಗಳ ಈಡೇರಿಕೆಗೆ ಆಗ್ರಹ
ಈ ಸಂದರ್ಭದಲ್ಲಿ ಸಿಪಿಐ ಜಿಲ್ಲಾ ಖಜಾಂಚಿ ಆನಂದ್ ರಾಜ್, ತಾಲೂಕು ಕಾರ್ಯದರ್ಶಿಗಳಾದ ಮಹಮ್ಮದ್ ಭಾಷಾ ಜಗಳೂರು, ಮಹಮ್ಮದ್ ರಫೀಕ್ ಚೆನ್ನಗಿರಿ, ಟಿ ಎಚ್ ನಾಗರಾಜ್ ಹರಿಹರ, ಮುಖಂಡರುಗಳಾದ ವಿ ಲಕ್ಷ್ಮಣ, ಎಚ್ ಎಸ್ ಚಂದ್ರು, ನಿಟುವಳ್ಳಿ ಬಸವರಾಜ, ಮಹೇಶ, ಸರೋಜಾ, ಅಜೀಜ್ ಶೇಖರ ನಾಯಕ, ಕುಮಾರ ನಾಯಕ, ಸಿದ್ದಲಿಂಗೇಶ್, ಜಯಪ್ಪ ಸೇರಿದಂತೆ ಹಲವು ಕಾರ್ಯಕರ್ತರು ಇದ್ದರು.