ಹನ್ನೆರೆಡು ವರ್ಷದ ಒಳಗಿನ ಯಾವುದೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುವುದನ್ನು ಘೋರ ಅಪರಾಧವೆಂದು ಪರಿಗಣಿಸಿ ಮರಣ ದಂಡನೆ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎಂದು ದಾವಣಗೆರೆ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷೆ ರಾಜೇಶ್ವರಿ ಎನ್ ಹೆಗಡೆ ತಿಳಿಸಿದರು.
ದಾವಣಗೆರೆ ಜಿಲ್ಲಾ ಕಾನೂನು ಸೇವಾಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಉತ್ತರ ಕಚೇರಿ ಹಾಗೂ ವಲಯ ಶಾಲಾ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪೋಕ್ಸೊ ಕಾನೂನಿನ ಅರಿವು ಹಾಗೂ ಮಕ್ಕಳ ಹಕ್ಕುಗಳ ಕಾರ್ಯಗಾರದಲ್ಲಿ ಮಾತನಾಡಿದರು.
“ಲಿಂಗ ಬೇಧವಿಲ್ಲದೆ 18 ವರ್ಷದೊಳಗಿನ ಯಾವುದೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ, ಶೋಷಣೆ ಮಾಡುವುದು ಕಂಡುಬಂದರೆ ಕೂಡಲೇ ದೌರ್ಜನ್ಯ ಪ್ರಕರಣಗಳನ್ನು ನಡೆಸಲೆಂದೇ ಲೈಂಗಿಕ ವಿಶೇಷ ನ್ಯಾಯಾಲಯಗಳನ್ನು ರಚಿಸಲಾಗಿದೆ. ಸಂಬಂಧಿಸಿದ ಪ್ರಾಧಿಕಾರ ಮಕ್ಕಳ ಸ್ನೇಹಿ ಪೊಲೀಸರ ನ್ಯಾಯಾಲಯಗಳ ಗಮನಕ್ಕೆ ತರಬೇಕು. ಯಾವುದೇ ಪ್ರಭಾವಿ ವ್ಯಕ್ತಿಯಾಗಲಿ ಇಂತಹ ಪ್ರಕರಣಗಳಲ್ಲಿ ಭಾಗಿಯಾದರೆ ಎಲ್ಲರಿಗೂ ಶಿಕ್ಷೆ ಆಗುವುದು ಖಚಿತ. ಅಲ್ಲದೇ ಇದಕ್ಕೆ ಪ್ರೋತ್ಸಾಹ ನೀಡುವವರಿಗೂ ಶಿಕ್ಷೆ ಆಗಲಿದೆ” ಎಂದು ಎಚ್ಚರಿಕೆ ನೀಡಿದರು.
“ಮಕ್ಕಳನ್ನು ಕಾಪಾಡುವುದು ಕೇವಲ ಅಧಿಕಾರಿಗಳ ಕೆಲಸ ಅಲ್ಲ. ಸಾರ್ವಜನಿಕರ ಜವಾಬ್ದಾರಿಯೂ ಇದೆ. ಇಂದಿನ ಮಕ್ಕಳು ನಾಳಿನ ಪ್ರಜೆಗಳು. ಮಕ್ಕಳು ಬೌದ್ಧಿಕ, ಸಾಮಾಜಿಕವಾಗಿ ಬೆಳೆದು ನಾಳಿನ ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಮಕ್ಕಳನ್ನು ಸಂರಕ್ಷಣೆ ಮಾಡಬೇಕು. ಯೂ ಟ್ಯೂಬ್, ಸೋಷಿಯಲ್ ಮೀಡಿಯಾಗಳಲ್ಲಿ ಲೈಂಗಿಕ ದೌರ್ಜನ್ಯ ಪ್ರಚೋದನೆ ಕಂಡು ಬರುತ್ತಿವೆ. ಇಂತಹ ವೇಳೆ ಪೋಷಕರು ಜಾಗೃತರಾಗಿ ಮಕ್ಕಳ ರಕ್ಷಣೆಗೆ ಮುಂದಾಗಬೇಕು” ಎಂದು ಕಿವಿಮಾತು ಹೇಳಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯ ರಕ್ಷಣೆಗೆ ಕ್ರಮವಹಿಸಿ: ಶಿವಾನಂದ ಕಾಪಶಿ
ಹಿರಿಯ ಸಿವಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ ಮಾತನಾಡಿ, “ಅಲ್ಪ ವಯಸ್ಸಿನ ಯಾವುದೇ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಕಾಯಿದೆ ಜಾರಿಗೆ ತರಲಾಗಿದೆ. ಎಲ್ಲಿಯೇ ಇಂತಹ ಪ್ರಕರಣಗಳು ನಡೆದರೆ ಯಾವುದೇ ನಾಚಿಕೆ, ಹಿಂಜರಿಕೆ, ಸಂಕೋಚ, ಹೆದರಿಕೆ ಇಲ್ಲದೆ ಇವುಗಳ ವಿರುದ್ಧ ದನಿ ಎತ್ತಬೇಕು. ಯಾವುದೇ ರಾಜಕೀಯ ಧಾರ್ಮಿಕ ಗುರುಗಳಾಲೀ ಯಾರೇ ವ್ಯಕ್ತಿಯಾಗಲೀ, ಭಾಗಿಯಾದರೆ ಅವರಿಗೆ ಶಿಕ್ಷೆ ಖಚಿತ” ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ತಿಪ್ಪೇಶಪ್ಪ ಜಿ ಆರ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣ್ ಕುಮಾರ್, ಕಾರ್ಯದರ್ಶಿ ಎಸ್ ಬಸವರಾಜ್, ಉತ್ತರ ವಲಯದ ಶಿಕ್ಷಣಾಧಿಕಾರಿ ಟಿ ಅಂಬಣ್ಣ, ಮುಖ್ಯ ಶಿಕ್ಷಕ ನಿರಂಜನ್, ರೆಹನಾಬಾನು, ಶಾಂತ ವೀರಣ್ಣ, ಡಿ ನಾಗರಾಜ್, ರವಿಕುಮಾರ್ ಇದ್ದರು.