- ‘ಬ್ಲಾಕ್’ ಮಾಡಿರುವುದಾಗಿ ಮಾಹಿತಿ ಹಂಚಿಕೊಂಡ ವಾರ್ತಾಭಾರತಿ, ಸನ್ಮಾರ್ಗ ನ್ಯೂಸ್
- ವಿಡಿಯೋ ಪ್ರಸಾರವನ್ನು ಮಾತ್ರ ತಡೆ ಹಿಡಿಯುವಂತೆ ನಿರ್ದೇಶನ ನೀಡಿದ್ದ ಕೇಂದ್ರ ಸರ್ಕಾರ
ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಸಾರ್ವಜನಿಕವಾಗಿ ಬೆತ್ತಲೆಗೊಳಿಸಿ ಲೈಂಗಿಕ ದೌರ್ಜನ್ಯ ಎಸಗಿದ ಹೇಯ ಕೃತ್ಯದ ಬಗ್ಗೆ ಚರ್ಚೆ ಹಾಗೂ ವಿಮರ್ಶೆ ನಡೆಸಿದ್ದ ಮಾಧ್ಯಮ ಸಂಸ್ಥೆಗಳ ವಿಡಿಯೋಗಳನ್ನು ‘ಯೂಟ್ಯೂಬ್’ ಬ್ಲಾಕ್ ಮಾಡಿರುವುದಾಗಿ ವರದಿಯಾಗಿದೆ.
ಹಿಂಸಾಚಾರ ಪೀಡಿತ ಮಣಿಪುರದಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ, ಮೆರವಣಿಗೆ ಮಾಡಿದ ಘಟನೆಗೆ ಸಂಬಂಧಿಸಿ ಹರಿದಾಡುತ್ತಿರುವ ವಿಡಿಯೋವನ್ನು ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರವು ಟ್ವಿಟರ್ ಸಹಿತ ಇತರೆ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಪ್ರಕರಣವು ಪ್ರಸ್ತುತ ತನಿಖೆಯಲ್ಲಿರುವುದರಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡುವುದು ದೇಶದ ಕಾನೂನುಗಳಿಗೆ ವಿರುದ್ಧವಾಗಿದೆ. ಹಾಗಾಗಿ, ಪ್ರಸಾರ ಮಾಡದಂತೆ ಕೇಂದ್ರ ಸರ್ಕಾರವು ಸೂಚಿಸಿತ್ತು.
ಮಣಿಪುರದ ಬೆತ್ತಲೆ ಮೆರವಣಿಗೆಗೆ ಸಂಬಂಧಿಸಿದ ವಿಡಿಯೋ ಪ್ರಸಾರ ಮಾಡದಂತೆ ತಿಳಿಸಿತ್ತಾದರೂ, ಚರ್ಚಾ ಕಾರ್ಯಕ್ರಮ ಹಾಗೂ ವಿಶ್ಲೇಷಣೆ ನಡೆಸಿರುವ ಕಾರ್ಯಕ್ರಮವನ್ನು ಕೂಡ ಪ್ರಸಾರ ಮಾಡದಂತೆ ತಡೆಹಿಡಿದಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ತಮ್ಮ ಸಂಸ್ಥೆ ನಡೆಸಿರುವ ಚರ್ಚಾ ಕಾರ್ಯಕ್ರಮವನ್ನು ಯೂಟ್ಯೂಬ್ ಯಾವುದೇ ವೀಕ್ಷಕರಿಗೆ ಕಾಣಿಸದಂತೆ ಬ್ಲಾಕ್ ಮಾಡಿದೆ ಎಂದು ‘ವಾರ್ತಾಭಾರತಿ ಡಿಜಿಟಲ್ ಚಾನಲ್’ ಮಾಹಿತಿ ಹಂಚಿಕೊಂಡಿದೆ.
‘ಚರ್ಚಾ ಕಾರ್ಯಕ್ರಮದಲ್ಲಿ ಮಣಿಪುರ ಘಟನೆಯ ವಿಡಿಯೋವನ್ನಾಗಲಿ, ಫೋಟೋವನ್ನಾಗಲಿ ಬಳಸಿಲ್ಲ. ಒಮ್ಮೆ ಪ್ರಕರಣದ ಆರೋಪಿಗಳನ್ನು ಮಾತ್ರ ತೋರಿಸಲಾಗಿತ್ತು. ಘಟನೆಯಲ್ಲಿ ಸಂತ್ರಸ್ತ ಮಹಿಳೆಯರ ಫೋಟೋ, ವಿಡಿಯೋ ಯಾವುದನ್ನೂ ಕಾರ್ಯಕ್ರಮದಲ್ಲಿ ಬಳಸಿಲ್ಲ’ ಎಂದು ‘ವಾರ್ತಾಭಾರತಿ’ ತಿಳಿಸಿದೆ.
ಮಣಿಪುರದಲ್ಲಿ ನಡೆದ ಹೀನಾಯ ಕ್ರೌರ್ಯದ ಸುತ್ತ ನಮ್ಮ ಚಾನೆಲ್ ನಲ್ಲಿ ಪ್ರಸಾರವಾಗಿದ್ದ ‘ಎಡಿಟರ್ಸ್ ಪಿಕ್’ ವಿಶ್ಲೇಷಣಾ ಕಾರ್ಯಕ್ರಮವನ್ನು ಯಾವುದೇ ಸೂಚನೆ ನೀಡದೆ ಯೂಟ್ಯೂಬ್ ಬ್ಲಾಕ್ ಮಾಡಿರುವುದಾಗಿ ‘ಸನ್ಮಾರ್ಗ ನ್ಯೂಸ್’ ಕೂಡ ಮಾಹಿತಿ ಹಂಚಿಕೊಂಡಿದೆ.
‘ಸಂಪಾದಕ ಏ ಕೆ ಕುಕ್ಕಿಲ ಅವರು ನಡೆಸಿಕೊಟ್ಟ ಈ ಕಾರ್ಯಕ್ರಮ ಜುಲೈ 20ರ ಗುರುವಾರ ಸಂಜೆ ಏಳು ಗಂಟೆಗೆ ಪ್ರಸಾರವಾಗಿತ್ತು. ಈ ಕಾರ್ಯಕ್ರಮದಲ್ಲಿ ಮಣಿಪುರದ ಬೆತ್ತಲೆ ಪ್ರಕರಣದ ಜೊತೆ ಜೊತೆಗೇ ಈ ಹಿಂದಿನ ಬಿಲ್ಕಿಸ್ ಬಾನು ಪ್ರಕರಣವನ್ನು ಮತ್ತು ಅಪರಾಧಿಗಳ ಬಿಡುಗಡೆಯನ್ನೂ ವಿಶ್ಲೇಷಣೆಗೆ ಒಳಪಡಿಸಲಾಗಿತ್ತು. ಕಾರ್ಯಕ್ರಮ ವೀಕ್ಷಣೆಗೆ ಲಭ್ಯವಾಗುತ್ತಿಲ್ಲ ಎಂದು ವೀಕ್ಷಕರು ದೂರಿಕೊಂಡಾಗಲೇ ಕಾರ್ಯಕ್ರಮ ಬ್ಲಾಕ್ ಮಾಡಿರುವುದು ಚಾನೆಲ್ ಗಮನಕ್ಕೆ ಬಂದಿದೆ’ ಎಂದು ‘ಸನ್ಮಾರ್ಗ ನ್ಯೂಸ್’ ತಿಳಿಸಿದೆ.