ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡಲು ನವೆಂಬರ್ 26ರಂದು ಸಂಯುಕ್ತ ಹೋರಾಟ-ಕರ್ನಾಟಕ ಕರೆ ನೀಡಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರೈತ ಕಾರ್ಮಿಕರ ಎಚ್ಚರಿಕೆ ಜಾಥಾ ಪೂರ್ವಭಾವಿಯಾಗಿ ಪೋಸ್ಟರ್ ಬಿಡುಗಡೆ ಮಾಡಿ ಪ್ರಚಾರ ಆರಂಭಿಸಲಾಯಿತು.
ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಮುಖಂಡರು, “ಸಂಯುಕ್ತ ಹೋರಾಟ-ಕರ್ನಾಟಕ ಅಡಿಯಲ್ಲಿ ನವೆಂಬರ್ 26ರಂದು ಎಚ್ಚರಿಕೆ ಜಾಥಾ ಮೂಲಕ ನಾವು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಮೂರು ತಿಂಗಳಲ್ಲಿ ಕೊಟ್ಟ ಮಾತು ಈಡೇರಿಸದಿದ್ದರೆ ರೈತರು ಹಾಗೂ ದುಡಿಯುವ ಜನರ ಆಕ್ರೋಶವನ್ನು ನೀವು ಎದುರಿಸಬೇಕಾಗುತ್ತದೆ” ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡ ಉಮೇಶ್ ಆವರಗೆರೆ ಮಾತನಾಡಿ, “ಈ ಹಿಂದೆ ಕೇಂದ್ರ ಸರ್ಕಾರ ಐತಿಹಾಸಿಕ ರೈತ ಹೋರಾಟದ ಸಂದರ್ಭದಲ್ಲಿ ಲಿಖಿತ ರೂಪದಲ್ಲಿ ಭರವಸೆಯನ್ನು ಕೊಟ್ಟಿದ್ದು, ಅದನ್ನು ಈಡೇರಿಸಬೇಕು. ಕೂಡಲೇ ರೈತ ಹಾಗೂ ಕಾರ್ಮಿಕ ಸಂಘಟನೆಗಳ ಜತೆಗೆ ಮಾತುಕತೆಯನ್ನು ಪುನರ್ ಆರಂಭಿಸಬೇಕು. ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾಯ್ದೆಯಾಗಬೇಕು. ಎಲ್ಲ ಅಸಂಘಟಿತ ಕಾರ್ಮಿಕರಿಗೂ ಕನಿಷ್ಟ ₹27,000 ವೇತನ ಮತ್ತು ಸಾಮಾಜಿಕ ಭದ್ರತೆ ಖಾತ್ರಿಯಾಗಬೇಕು” ಎಂದು ಒತ್ತಾಯಿಸಿದರು.
ಸಂಚಾಲಕ ಸತೀಶ್ ಅರವಿಂದ್ ಮಾತನಾಡಿ, “ದಮನಿತ ಸಮುದಾಯಗಳಿಗೆ ರಕ್ಷಣೆ, ಯುವಜನರಿಗೆ ಉದ್ಯೋಗ ಭದ್ರತೆ ಹಾಗೂ ಸಮಾಜದಲ್ಲಿ ಸೌಹಾರ್ದದ ವಾತಾವರಣ ಖಾತ್ರಿಪಡಿಸಲು ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ಜಿಎಸ್‌ಟಿ ಮತ್ತು ಸೆಸ್ ತಗ್ಗಿಸುವ ಮೂಲಕ ಬೆಲೆ ಏರಿಕೆ ಇಳಿಸಬೇಕು. ಈ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಎಐಕೆಕೆಎಂಎಸ್ ಮುಖಂಡ ಮಧು ತೊಗಲೇರಿ ಮಾತನಾಡಿ, “ಸಂಯುಕ್ತ ಹೋರಾಟ-ಕರ್ನಾಟಕದ ಮೂಲಕ ರಾಜ್ಯ ಸರ್ಕಾರದ ಮುಂದೆ ಒಂದು ಹಕ್ಕೊತ್ತಾಯವನ್ನು ಇಡುತ್ತಿದ್ದು, ವಿವಿಧ ಜನವಿಭಾಗಗಳ ಬದುಕಿಗೆ ಸಂಬಂಧಿಸಿದ ಮೇಲ್ಕಂಡ ವಿಚಾರಗಳನ್ನು ಕೂಲಂಕುಷವಾಗಿ ಚರ್ಚಿಸಲು ಮೂರು ದಿನಗಳ ಅಧಿವೇಶನ ಕರೆಯಬೇಕು. ಅಧಿವೇಶನದಲ್ಲಿ ಪ್ರತಿಯೊಂದಕ್ಕೂ ನಿರ್ಧಿಷ್ಟ ತೀರ್ಮಾನಗಳನ್ನು ತೆಗೆದುಕೊಳ್ಳಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ಕ್ಯಾಬಿನೆಟ್ ಸಚಿವರು, ಸಂಬಂಧಿತ ಅಧಿಕಾರಿಗಳು ಹಾಗೂ ವಿವಿಧ ಜನಚಳವಳಿಗಳ ಮುಖಂಡರು ಹಾಜರಿದ್ದು, ಜನರ ಬದುಕಿನ ಮುಖ್ಯ ಸಮಸ್ಯೆಗಳ ಕುರಿತು ಕೂಲಂಕುಷ ಚರ್ಚೆಯಾಗಬೇಕು. ಅದರಲ್ಲಿ ಎರಡೂ ಕಡೆಯಿಂದ ಒಪ್ಪಿತವಾಗುವ ವಿಚಾರಗಳು ಸೂಕ್ತ ಸರ್ಕಾರಿ ಪ್ರಕ್ರಿಯೆ ಮೂಲಕ ಕೂಡಲೇ ಅನುಷ್ಠಾನಕ್ಕೆ ಬರಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ವಕೀಲ ಕಣ್ಣನ್ ಹತ್ಯೆ ಖಂಡಿಸಿ ಬೃಹತ್ ಪ್ರತಿಭಟನೆ
ಈ ಸಂದರ್ಭದಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ದಾವಣಗೆರೆಯ ಸಂಚಾಲಕ ಹೊನ್ನೂರು ಮುನಿಯಪ್ಪ, ಸಂಚಾಲನಾ ಸಮಿತಿಯ ಸದಸ್ಯರಾದ ಶ್ರೀನಿವಾಸ್, ಆದಿಲ್ ಖಾನ್, ಗುಮ್ಮನೂರು ಬಸವರಾಜ್, ಬುಳ್ಳಾಪುರ ಹನುಮಂತಪ್ಪ, ಮಂಜುನಾಥ್ ರೆಡ್ಡಿ, ರಾಜು, ಐರಣಿ ಚಂದ್ರು, ಭರಮಪ್ಪ ಹಾಗೂ ಜೆಸಿಟಿಯು ಜಿಲ್ಲಾ ಮುಖಂಡರಾದ ಅವರಗೆರೆ ಚಂದ್ರು, ಮಂಜುನಾಥ್ ಕುಕ್ಕವಾಡ, ಆನಂದ್ ರಾಜು ಸೇರಿದಂತೆ ಇತರರು ಇದ್ದರು.