ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರ ‘108’ ಆ್ಯಂಬುಲೆನ್ಸ್‌ಗಳನ್ನು ಒದಗಿಸಿದೆ. ಹೋಬಳಿ ಮಟ್ಟದ ಬಹುತೇಕ ಆಸ್ಪತ್ರೆಗಳಲ್ಲೂ ‘108’ ಆ್ಯಂಬುಲೆನ್ಸ್‌ಗಳಿವೆ. ಆದರೆ, ಅವುಗಳು ಬಳಕೆಯಾಗುತ್ತಿಲ್ಲ ಎಂಬ ಆರೋಪಗಳಿವೆ. ಸರ್ಕಾರಿ ಆಸ್ಪತ್ರೆಗಳಿಗೆ ‘108’ ಆ್ಯಂಬುಲೆನ್ಸ್ ವಾಹನವನ್ನು ಕೊಡುವುದು ರೋಗಿಗಳ ಸೇವೆಗೋ? ಅಥವಾ ಆವರಣದಲ್ಲಿ ನಿಲ್ಲಿಸಿ ಪ್ರದರ್ಶನ ಮಾಡುವುದಕ್ಕೋ? ಎಂದು ಸಾರ್ವಜನಿಕರು ಕಿಡಿಕಾರಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸರ್ಕಾರಿ ಆಸ್ಪತ್ರೆ ಬಳಿ 108 ಅಂಬ್ಯುಲೆನ್ಸ್ ಕಳೆದ 25 ದಿನಗಳಿಂದ ಕೆಟ್ಟು ನಿಂತಿದೆ. ಪರಿಣಾಮವಾಗಿ ರೋಗಿಗಳು, ಗರ್ಭಿಣಿಯರು ತುರ್ತು ಸಂದರ್ಭಗಳಲ್ಲಿ 108ಕ್ಕೆ ಕರೆ ಮಾಡಿದರೆ ಅಂಬ್ಯುಲೆನ್ಸ್ ಸಿಗುತ್ತಿಲ್ಲ ಎಂದು ರೋಗಿಗಳು ಮತ್ತು ಅವರ ಪಾಲಕರು ದೂರಿದ್ದಾರೆ.
ಕಷ್ಟಕಾಲದಲ್ಲಿ ರೋಗಿಗಳಿಗೆ ನೆರವಿಗೆ ನಿಲ್ಲಬೇಕಾದ ‘108’ ಆ್ಯಂಬುಲೆನ್ಸ್, ರೋಗಿಗಳಿಗೆ ಉಪಯೋಗವಾಗುದಕ್ಕಿಂತಲೂ ಕೆಟ್ಟು ನಿಲ್ಲುವುದೇ ಹೆಚ್ಚಾಗಿದೆ. ಆಸತ್ರೆಯ ವೈದ್ಯಾಧಿಕಾರಿಗಳ ನಿರ್ಲಕ್ಷ ಅಥವಾ ಆ್ಯಂಬುಲೆನ್ಸ್ ನಿರ್ವಹಣೆ ಮಾಡುವ ಅಧಿಕಾರಿಗಳ ನಿರ್ಲಕ್ಷದಿಂದಾಗಿ, ಸೂಕ್ತ ನಿರ್ವಹಣೆ ಇಲ್ಲದೆ ಆ್ಯಂಬುಲೆನ್ಸ್ ಸಾರ್ವಜನಿಕರ ಬಳಕೆಗೆ ದೊರೆಯದಂತಾಗಿದೆ ಎಂದು ಕಿಡಿಕಾರಿದ್ದಾರೆ.
ಕಳೆದ 25 ದಿನಗಳಿಂದ 108 ಅಂಬುಲೆನ್ಸ್ ವಾಹನದ ಬ್ಯಾಟರಿ ಹಾಳಾಗಿದೆ. ಏಜೆನ್ಸಿಯವರಾಗಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾಗಲೀ ಆ ಬಗ್ಗೆ ಗಮನ ಕೊಡುತ್ತಿಲ್ಲ. ಪರಿಣಾಮ ತಾಲೂಕಿನ ಮಹಿಳೆಯರು, ರೋಗಿಗಳು ಸಮಸ್ಯೆ ಎದುರಿಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಹರಿಹರ ತಾಲೂಕಿನ ಜನರು ಒತ್ತಾಯಿಸಿದ್ದಾರೆ.