ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡುವುದೇ ಪ್ರಯಾಣಿಕರು ಸಾರ್ವಜನಿಕರ ಅನುಕೂಲಕ್ಕಾಗಿ. ಆ ನಿಲ್ದಾಣಗಳು ಜನರ ಉಪಯೋಗಕ್ಕೆ ಬಾರದೆ ಹೋದರೆ ಅವುಗಳ ಅಸ್ತಿತ್ವವಾದರೂ ಏನು ಎನ್ನುವುದು ಪ್ರಶ್ನೆ. ಹೀಗೊಂದು ಪರಿಸ್ಥಿತಿ ದಾವಣಗೆರೆ ಜಿಲ್ಲೆಯ ಗ್ರಾಮಾಂತರ ವಿಭಾಗದ ಆನಗೋಡು ಗ್ರಾಮದ ಬಸ್ ನಿಲ್ದಾಣದ್ದು.
ಈ ಬಸ್ ನಿಲ್ದಾಣದಲ್ಲಿ ಉತ್ತಮ ಕಟ್ಟಡವಿದೆ. ಕುಳಿತುಕೊಳ್ಳಲು ಕಟ್ಟೆಗಳು ಕೂಡ ವ್ಯವಸ್ಥಿತವಾಗಿಯೂ ಇದೆ. ಆದರೆ, ಅಲ್ಲಿಗೆ ಬಸ್ಗಳು ಬರುವುದೇ ಸವಾಲಾಗಿದೆ. ಬಸ್ ನಿಲ್ದಾಣದ ಮುಂದೆ ತರಕಾರಿ ವ್ಯಾಪಾರಿಗಳು, ಸಂತೆ ವ್ಯಾಪಾರಿಗಳು ಗುಡಾರವನ್ನು ಹಾಕಿಕೊಂಡಿದ್ದಾರೆ. ಪರಿಣಾಮವಾಗಿ ಬಸ್ ನಿಲ್ದಾಣದ ಬಳಿ ನಿಲ್ಲಲು ಜಾಗವಿಲ್ಲದಂತಾಗಿದೆ. ಹೀಗಾಗಿ, ಬಸ್ ನಿಲ್ದಾಣದ ಮುಂದೆ ಬಸ್ಗಳು ನಿಲ್ಲದೆ ದೂರದಲ್ಲಿಲ್ಲೋ ಸೇತುವೆ ಕೆಳಗೆ ನಿಲ್ಲುತ್ತವೆ ಅಥವಾ ರಸ್ತೆ ಮಾರ್ಗದ ಬದಿಯಲ್ಲಿ ನಿಲ್ಲಿಸುತ್ತವೆ. ಇದರಿಂದ, ಜನರು ಬಿಸಿಲಿನಲ್ಲಿ ಬಸ್ಗಾಗಿ ಕಾಯುವ ಪರಿಸ್ಥಿತಿ ಉಂಟಾಗಿದೆ. ಇದನ್ನು ಸ್ಥಳೀಯ ಆಡಳಿತ ಗಮನಿಸದೆ ಹಾಗೆ ಬಿಟ್ಟಿರುವುದು ಕೂಡ ಈ ದುಸ್ಥಿತಿಗೆ ಪ್ರಮುಖ ಕಾರಣ.
ಇದೆಲ್ಲದರಿಂದ ಬಸ್ ನಿಲ್ದಾಣ ಕೂಡ ನಾಯಿಗಳ ತಂಗುದಾಣವಾಗಿದ್ದು, ಕುಡುಕರು, ಜೂಜಿನ ವ್ಯಸನಿಗಳು ಇಲ್ಲಿ ಕಾಲಕಳೆಯುವ ಮತ್ತು ಮಲಗುವ ಆಶ್ರಯ ತಾಣವಾಗಿ ಬಳಸಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಸ್ಥಳೀಯ ವಿದ್ಯಾರ್ಥಿ ರಂಗನಾಥ್ ಈದಿನ.ಕಾಮ್ ಜೊತೆ ಮಾತನಾಡಿದ್ದು, “ನಾನು ಈ ರಸ್ತೆಯಲ್ಲಿ ಸುಮಾರು ಐದಾರು ವರ್ಷಗಳಿಂದ ವಿದ್ಯಾಭ್ಯಾಸಕ್ಕೆ ಪ್ರಯಾಣ ಮಾಡುತ್ತಿದ್ದೇನೆ. ನಿಲ್ದಾಣವನ್ನು ನಿರ್ಮಿಸಿ ಬಹಳ ವರ್ಷಗಳೇ ಕಳೆದಿವೆ. ನನಗೆ ತಿಳಿದಿರುವಂತೆ ಇದು ನಿರುಪಯುಕ್ತವಾಗಿದೆ. ಅಣಜಿ ಮಾರ್ಗದ ನಿಲ್ದಾಣದ್ದು ಈ ಪರಿಸ್ಥಿತಿ ಇದ್ದರೆ, ಇನ್ನೊಂದು ಭಾಗದಲ್ಲಿ ಹೊಸದುರ್ಗ ಮಾರ್ಗದಲ್ಲಿ ಬಸ್ ನಿಲ್ದಾಣ ಇಲ್ಲದೆ ಪ್ರಯಾಣಿಕರು ಬಿಸಿಲಿನಲ್ಲಿ ನಿಲ್ಲುತ್ತಾರೆ. ಹೋಬಳಿ ಕೇಂದ್ರವಾದರೂ ಎರಡು ಮಾರ್ಗಗಳಲ್ಲಿ ಸುಸಜ್ಜಿತ ಬಸ್ ನಿಲ್ದಾಣವಿಲ್ಲ. ಸ್ಥಳೀಯ ಆಡಳಿತ ಗಮನ ಹರಿಸಿ ವ್ಯಾಪಾರಿಗಳಿಗೆ ಬೇರೆ ಜಾಗದಲ್ಲಿ ಅನುಕೂಲ ಮಾಡಿಕೊಟ್ಟು, ಬಸ್ ನಿಲ್ದಾಣವನ್ನು ಸಾರ್ವಜನಿಕರ ಅನುಕೂಲಕ್ಕೆ ಒದಗಿಸಬೇಕು” ಎಂದು ಒತ್ತಾಯಿಸಿದರು.