ಲೋಕಸಭಾ ಚುನಾವಣೆಯಲ್ಲಿ ದಾವಣಗೆರೆ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಮತ್ತವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಕಳೆದ 8-10 ತಿಂಗಳಿನಿಂದ ಅಸಮಾಧಾನ ವ್ಯಕ್ತಪಡಿಸಿ, ಬಿಗಿಪಟ್ಟು ಹಿಡಿದಿದ್ದ ದಾವಣಗೆರೆ ಬಿಜೆಪಿಯ ರೆಬೆಲ್ ತಂಡ, ತನ್ನ ಬಿಗಿ ಪೆಟ್ಟಿನಿಂದ ಹಿಂದೆ ಸರಿಯುವ ಲಕ್ಷಣಗಳು ಕಾಣುತ್ತಿಲ್ಲ.
ದಾವಣಗೆರೆಗೆ ಹೊಸ ಅಭ್ಯರ್ಥಿ ಘೋಷಣೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಬಿ.ಎಸ್. ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ, ಕೊನೆಗೆ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ಕೊಡಿಸಿದ್ದರ ಬಗ್ಗೆ ಜಿಲ್ಲಾ ಕಾರ್ಯಕರ್ತರ ಆದಿಯಾಗಿ ರೆಬೆಲ್ ತಂಡಕ್ಕೆ ತೀವ್ರ ಅಸಮಾಧಾನ ಉಂಟಾಗಿದೆ.
ನಿಗದಿಯಂತೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ನಿವಾಸದಲ್ಲಿ ಭಾನುವಾರ ಸಂಜೆ ನಡೆದ ದಾವಣಗೆರೆ ಉತ್ತರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಜಿ.ಎಂ. ಸಿದ್ದೇಶ್ವರರ ವಿರುದ್ಧ ಬಹಳಷ್ಟು ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪ ಅವರೇ ಖುದ್ದಾಗಿ ದಾವಣಗೆರೆಗೆ ಬರುವುದಾಗಿ ತಿಳಿಸಿದ್ದು, ಬಿಎಸ್‌ವೈ ಬಂದು ನಮ್ಮ ಬೇಡಿಕೆ ಕೇಳಿ, ಅಭ್ಯರ್ಥಿ ಬದಲು ಮಾಡುವವರೆಗೂ ನಮ್ಮ ಬಿಗಿ ಪಟ್ಟು ಸಡಿಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.
ಇದುವರೆಗೂ ಕಣದಲ್ಲಿ ರವೀಂದ್ರನಾಥ್ ಮತ್ತು ರೇಣುಕಾಚಾರ್ಯ ಬಣದ ರೆಬೆಲ್ ಟೀಮ್ ವಿರೋಧ ವ್ಯಕ್ತಪಡಿಸುತ್ತಿದ್ದು, ಇದೀಗ ಕೆಲವು ಕಾರ್ಯಕರ್ತರು ಕೂಡ ಬಂಡಾಯಕ್ಕೆ ದನಿಗೂಡಿಸಿ ಸಿದ್ದೇಶ್ವರ ಕುಟುಂಬದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಕೇಳಿ ಬಂದಿದೆ.
ನರೇಂದ್ರ ಮೋದಿಯವರು ಪ್ರಧಾನಿಯಾಗಬೇಕು. ಆದರೆ, ದಾವಣಗೆರೆ ಬಿಜೆಪಿಯನ್ನು ಜಿ.ಎಂ.ಸಿದ್ದೇಶ್ವರ್ ಕುಟುಂಬದ ಹಿಡಿತದಿಂದ ಬಿಡಿಸಿಯೇ ಸಿದ್ಧ ಎಂದು ಬಿಜೆಪಿ ರೆಬೆಲ್ ಟೀಂ ರಣಕೇಕೆ ಹಾಕಿದೆ.
ದಾವಣಗೆರೆ ಜಿಲ್ಲಾದ್ಯಂತ ಮೂಡಿದ್ದ ಜಿ.ಎಂ. ವಿರೋಧಿ ಕೂಗನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಜಿ.ಎಂ. ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಮತ್ತಷ್ಟು ಆಕ್ರೋಶಗೊಂಡಿರುವ ದಾವಣಗೆರೆ ರೆಬೆಲ್ ಟೀಂ, ಅಭ್ಯರ್ಥಿ ಬದಲಿಗೆ ಪಟ್ಟು ಹಿಡಿದಿದೆ.
‘ನಮ್ಮನ್ನು ಎದುರು ಹಾಕಿಕೊಂಡು ಮುಂದಿನ ಚುನಾವಣೆ ಹೇಗೆ ಗೆಲ್ತೀರ ನೋಡೋಣ’ ಎಂಬರ್ಥದಲ್ಲಿ ಜಿ.ಎಂ. ಸಿದ್ದೇಶ್ವರ ಅವರು ನಮ್ಮ ಗುಂಪಿನ ಸದಸ್ಯರಿಗೆ ಸವಾಲು ಹಾಕಿದ್ದಾರೆ. ನಮಗೇ ಹೀಗಾದರೆ ಸಾಮಾನ್ಯ ಕಾರ್ಯಕರ್ತರ ಪಾಡೇನು, ಬಿಜೆಪಿ ಬಗ್ಗೆ ಯಾವ ಭಾವನೆ ಮೂಡಬಹುದು ಎನ್ನುವುದನ್ನು ಯೋಚಿಸಬೇಕು ಎಂದು ದಾವಣಗೆರೆ ದಕ್ಷಿಣ ಬಿಜೆಪಿ ಪರಾಜಿತ ಅಭ್ಯರ್ಥಿಯಾಗಿದ್ದ ಬಿ.ಜೆ. ಅಜಯ್ ಕುಮಾರ್ ಬೇಸರ ಹೊರಹಾಕಿದ್ದಾರೆ.
ಜಿ.ಎಂ. ಸಿದ್ದೇಶ್ವರ ಮತ್ತವರ ಕುಟುಂಬ ರಾಜಕಾರಣದ ವಿರುದ್ಧ ಒಗ್ಗಟ್ಟಾಗಿರುವ 11 ಜನರ ತಂಡಕ್ಕೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರೇ ನೇತೃತ್ವ ವಹಿಸಿದ್ದು, ಇವರೊಂದಿಗೆ ಮಾಜಿ ಸಚಿವರಾದ ಜಿ. ಕರುಣಾಕರ ರೆಡ್ಡಿ, ಎಂ.ಪಿ. ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ. ಟಿ.ಜಿ.ರವಿಕುಮಾರ್, ಸೋಮೇಶ್ವರ ಸುರೇಶ್, ಎಲ್. ಎನ್.ಕಲ್ಲಪ್ಪ ಅವರ ಈ ಎಲ್ಲರ ತೀವ್ರ ವಿರೋಧವು ಜಿ.ಎಂ. ಸಿದ್ದೇಶ್ವರ ಪಾಳಯಕ್ಕೆ ಹೆದರಿಕೆ ಹುಟ್ಟಿಸಿದೆ ಎನ್ನಲಾಗಿದೆ.
