ದಾವಣೆಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅರಸಿನಗಟ್ಟ ಗ್ರಾಮದ ಧರ್ಮೇಂದ್ರ ಮತ್ತು ಪಾರ್ವತಮ್ಮ ವಾಸವಿದ್ದ ದನದ ಮನೆ ಬೆಂಕಿಗಾಹುತಿಯಾಗಿದೆ. ಸ್ಥಳ ಪರಿಶೀಲನೆಗೆ ಬಂದ ತಹಸೀಲ್ದಾರ್ ಬಡ ಕುಟುಂಬಕ್ಕೆ ನೆರವಾಗಿದ್ದಾರೆ.
ಓಡಾಡಲು ಆಗದ ಗಂಡನೊಂದಿಗೆ ಪತ್ನಿ ಪಾರ್ವತಮ್ಮ ಜೀವನ ನಡೆಸುತ್ತಿದ್ದರು. ಅವರು ವಾಸವಿದ್ದ ದನದ ಮನೆಯಲ್ಲಿ ಸೋಮವಾರ (ಮಾ.18) ಸಿಲಿಂಡರ್ ಸ್ಪೋಟಗೊಂಡು ಸಂಪೂರ್ಣ ಮನೆ ನೆಲಸಮಗಿತ್ತು.
ವಿಷಯ ತಿಳಿದು ಸ್ಥಳ ಪರಿಶೀಲನೆಗೆ ಬಂದಿದ್ದ ತಹಸೀಲ್ದಾರ್ ಯರ್ರಿಸ್ವಾಮಿ, ಬಡ ಕುಟುಂಬದ ಪರಿಸ್ಥಿತಿ ಅರಿತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಕಂದಾಯ ಇಲಾಖೆಯ ಸಿಬ್ಬಂದಿಯಿಂದ ಸುಮಾರು 65,000 ರೂ.ಗಳಷ್ಟು ಹಣವನ್ನು ಸಂಗ್ರಹಿಸಿ ನೊಂದ ಕುಟುಂಬಕ್ಕೆ ನೆರವು ನೀಡಿದ್ದಾರೆ.
ಸಿಲಿಂಡರ್ ಸ್ಪೋಟದ ಕುರಿತು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದ ಇಲಾಖೆಗಳಿಂದ ದೊರಕುವಂತಹ ಸೌಲಭ್ಯವನ್ನು ದೊರಕಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರು, ಕಂದಾಯ ಇಲಾಖೆಯ ಸಿಬ್ಬಂದಿ ಹಾಜರಿದ್ದರು.