ಗ್ರಾಮೀಣ ಕೂಲಿಕಾರರ ಸಂಘಟನೆ(ಗ್ರಾಕೂಸ್)ಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕು ಸಂಯೋಜಕಿ, ದಲಿತ ನಾಯಕಿ ಸುಧಾ ಪಲ್ಲಾಗಟ್ಟಿ ಎಂಬುವವರ ಮೇಲೆ ವೈದ್ಯಾಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ನೆಪವೊಡ್ಡಿ, ಗ್ರಾಮದ ಕೆಲವರು ಹಲ್ಲೆಗೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ಕೋವಿಡ್ ಸಂದರ್ಭದಲ್ಲಿ ಪಲ್ಲಾಗಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಸವಂತಪ್ಪ ಎಂಬುವವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ, ತಾಲೂಕು ವೈದ್ಯಾಧಿಕಾರಿಗಳಿಗೆ ದೂರು ನೀಡಿದ್ದರು. ಕಳೆದ ಜುಲೈ 16ರಂದು ಸುಧಾ ಪಲ್ಲಾಗಟ್ಟಿಯವರು ಚಿಕಿತ್ಸೆಗೆಂದು ವೃದ್ದೆಯೊಬ್ಬರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಕೋವಿಡ್ ಸಂದರ್ಭದಲ್ಲಿ ವಿರುದ್ಧ ಮಾಡಿದ್ದ ಆರೋಪವನ್ನೇ ನೆಪವಾಗಿರಿಸಿಕೊಂಡು ವೈದ್ಯಾಧಿಕಾರಿ ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಸುಧಾ ಪಲ್ಲಾಗಟ್ಟಿಯವರು ವಿಡಿಯೋವೊಂದನ್ನು ಮಾಡಿಕೊಂಡಿದ್ದಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದರು.
ಇಂದು ಗ್ರಾಕೂಸ್ ಸಂಘಟನೆಯ ಮುಖಂಡರು ಹಾಗೂ ಕಾರ್ಯಕರ್ತರು ತಾಲೂಕು ಆಸ್ಪತ್ರೆಗೆ ಬಂದು, ನಿಂದಿಸಿದ ಬಗ್ಗೆ ವೈದ್ಯಾಧಿಕಾರಿಗಳ ಬಳಿ ಪ್ರಶ್ನಿಸಲೆಂದು ಹೋಗಿದ್ದಾರೆ. ಈ ವೇಳೆ ವೈದ್ಯಾಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ.
ಆ ಬಳಿಕ ಹಲ್ಲೆಗೆ ಮುಂದಾದವರೇ, ವೈದ್ಯಾಧಿಕಾರಿಗಳಿಂದ ದೂರು ನೀಡಿಸಿದ್ದಾರೆ. ಆ ಬಳಿಕ ಬಿಳಿಚೋಡು ಪೊಲೀಸ್ ಠಾಣೆಯವರು, ಗ್ರಾಕೂಸ್ ಸಂಘಟನೆಯ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದರು ಎಂದು ತಿಳಿದುಬಂದಿದೆ.
ಸಿಕ್ಕಿರುವ ಮಾಹಿತಿಯ ಪ್ರಕಾರ, ಡಾಕ್ಟರ್ ಅವರನ್ನು ಗ್ರಾಕೂಸ್ ಕಾರ್ಯಕರ್ತರು ಪ್ರಶ್ನಿಸಲು ಹೋಗಿದ್ದಾಗ ಅಲ್ಲಿಗೆ ಬಂದ ಊರಿನ ಗ್ರಾಮ ಪಂಚಾಯಿತಿ ಸದಸ್ಯರು, ಮಾಜಿ ಸದಸ್ಯರು, ಅವರ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ.
ಗ್ರಾಮೀಣ ಕೂಲಿಕಾರರ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸುಧಾ ಪಲ್ಲಾಗಟ್ಟಿ, ಕೂಲಿಕಾರರಿಗೆ ಪಂಚಾಯಿತಿಗಳಿಂದ ಕೆಲಸ ಕೊಡಿಸುವ ಕಾರ್ಯವನ್ನು ಮಾಡುತ್ತಿದ್ದರು. ಅಲ್ಲದೇ, ಗ್ರಾಮ ಪಂಚಾಯತ್ನಲ್ಲಿನ ಅವ್ಯವಹಾರಗಳನ್ನು ತಡೆಯಲು ಕೂಡ ಶ್ರಮಿಸುತ್ತಿದ್ದರು. ಇದು ಕೆಲವರ ಕಣ್ಣು ಕೆಂಪಗಾಗಿಸಿತ್ತು. ಇದೇ ಅವಕಾಶವನ್ನು ಬಳಸಿಕೊಂಡ ಗ್ರಾಮದ ಕೆಲವರು, ಈ ಪ್ರಕರಣವನ್ನು ದಾಳವಾಗಿ ಬಳಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ವೈದ್ಯಾಧಿಕಾರಿಗಳ ದೂರಿನ ಮೇರೆಗೆ ಗ್ರಾಕೂಸ್ ಕಾರ್ಯಕರ್ತೆ ಸುಧಾ, ಇತರ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದರು. ಆ ಬಳಿಕ ಠಾಣೆಯಲ್ಲಿ ರಾಜಿ ಪಂಚಾಯತಿ ನಡೆಸಿದ ಪೊಲೀಸರು, ಸದ್ಯ ಪ್ರಕರಣಕ್ಕೆ ಅಂತ್ಯ ಹಾಡಿದ್ದಾರೆ.
ಅಲ್ಲದೇ, ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡಿದ್ದು, ಇನ್ನು ಮುಂದೆ ಇಂತಹ ವಾಗ್ವಾದವನ್ನು ಮುಂದುವರಿಸದಂತೆ ಹಾಗೂ ಯಾವುದೇ ಕೆಲಸಗಳಿಗೆ ಅಡ್ಡಿಪಡಿಸದೇ ಕಾರ್ಯ ನಿರ್ವಹಿಸಲು ಬಿಳಿಚೋಡು ಪೊಲೀಸ್ ಠಾಣೆಯವರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ವರದಿ: ವಿನಾಯಕ್, ದಾವಣಗೆರೆ