ಭದ್ರಾ ಜಲಾಶಯದಿಂದ ಬೇಸಿಗೆ ಹಂಗಾಮಿನಲ್ಲಿ ನಾಲೆಗೆ ಆನ್ ಅಂಡ್ ಆಫ್ ಪದ್ಧತಿಯಲ್ಲಿ ನೀರು ಹರಿಸಲಾಗುತ್ತಿದೆ. ನಾಲೆಯ ಗೇಟ್‌ನಲ್ಲಿ ಐದು ಅಡಿ ನೀರಿದ್ದಲ್ಲಿ ಮಾತ್ರ ರೈತರ ಜಮೀನಿಗೆ ನೀರು ಹರಿಯಲು ಸಾಧ್ಯ. ಗೇಟ್‌ನಲ್ಲಿ ಕೇವಲ ಒಂದೂವರೆ ಅಡಿ ಮಾತ್ರ ನೀರಿದೆ. ಇದರಿಂದ ಯಾವ ತೋಟಗಳಿಗೂ ನೀರು ಹಾಯಿಸಲು ಸಾಧ್ಯವಿಲ್ಲ ಎಂದು ನಾಲೆಗಿಳಿದು ದಾವಣಗೆರೆ ಜಿಲ್ಲೆಯ ರೈತರು ನೀರಾವರಿ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಾಡಾ ಸಮಿತಿ ಅಧಿಕಾರಿಗಳ ಅವೈಜ್ಞಾನಿಕ ನಿಲುವು ವಿರುದ್ಧ ಬಸವಾಪಟ್ಟಣ ಉಪ ವಿಭಾಗದ ಮಲೇಬೆನ್ನೂರು ಭಾಗದ ನೂರಾರು ರೈತರು ಭದ್ರಾ ನಾಲೆಗೆ ಉಳಿದು ಪ್ರತಿಭಟಿಸಿದರು. ಭದ್ರಾ ನಾಲೆಯ 8 ಮತ್ತು 9 ನೇ ವಲಯದ ನಾಲೆಗಳಲ್ಲಿ ಸಮರ್ಪಕ ನೀರು ಹರಿಯದ ಕಾರಣ, ತೋಟಗಳಿಗೆ ನೀರು ಹಾಯಿಸುವ ನಾಲೆಗೆ ಇಳಿದು ಕಿಡಿಕಾರಿದರು.
ನೀರಾವರಿ ಇತಿಹಾಸದಲ್ಲಿಯೇ ನಾಲೆ ಗೇಟ್ ಬಂದ್ ಮಾಡಿರಲಿಲ್ಲ, ಅಧಿಕಾರಿಗಳ ತಪ್ಪು ನಿರ್ಧಾರದಿಂದ ಈ ಗೇಟ್‌ನಿಂದ ಮೂರು ದಿನ ಮಾತ್ರ ನೀರು ಹರಿಸಲು ಆದೇಶ ಮಾಡಲಾಗಿದೆ. ಮೂರು ದಿನಗಳಲ್ಲಿ ಕುಣಬೆಳಕೆರೆ, ಆದಾಪುರ, ಬೂದಿಹಾಳು, ನಿಟ್ಟೂರು, ನೆಹರೂ ನಗರ, ಕುಂಬಳೂರು, ಹರಳಹಳ್ಳಿ, ಬನ್ನಿಕೋಡು ಗ್ರಾಮಗಳ ಎರಡು ಸಾವಿರ ಎಕರೆ ಅಚ್ಚುಕಟ್ಟಿಗೆ ನೀರು ಹರಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು. ಈ ಮುಖ್ಯ ಗೇಟ್ ನಿಂದ ಎರಡು ನಾಲೆಗಳು ಮತ್ತು ಉಪನಾಲೆಗಳಿಗೆ ನೀರು ಹರಿಯಬೇಕಿದೆ.
ದಿನವಿಡೀ ಎರಡು ಎಕರೆಗೆ ನೀರು ಹರಿಸಲು ಆಗಿಲ್ಲ. ಶಿವಮೊಗ್ಗ, ಭದ್ರಾವತಿ ಭಾಗದ ರೈತರ ಹಿತ ಕಾಯುವ, ಸಚಿವ ಮಧು ಬಂಗಾರಪ್ಪರಿಗೆ ರೈತರ ಕಷ್ಟಗಳು ತಿಳಿದಿಲ್ಲ.ಅಧಿಕಾರಿಗಳು ಫೋನ್ ಸ್ವೀಕರಿಸಲ್ಲ, ಜಿಲ್ಲಾ ಮಂತ್ರಿಗಳು ಮನೆ ಹತ್ತಿರ ಹೋದರೂ ಮಾತನಾಡಿಸುವವರಿಲ್ಲ. ನಮ್ಮ ನೋವು ಯಾರ ಬಳಿ ಹೇಳಿಕೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರಾದ ಮಂಜಣ್ಣ, ವೆಂಕಟನಾರಾಯಣ, ಬೆನ್ನೂರು ನಾಗರಾಜ್, ನಂದೀಶ್, ಸ್ವಾಮಿ, ಹರೀಶ್, ಕೃಷ್ಣಮೂರ್ತಿ, ಅಣ್ಣಪ್ಪ, ಚಕ್ರಧರ, ರೇವಣಪ್ಪ, ಶೇಷಗಿರಿ, ರುದ್ರೇಶ್, ಪ್ರಸಾದ್ ಮತ್ತಿತರರಿದ್ದರು.