ಕೆಪಿಎಸ್ಸಿ ಮರುಪರೀಕ್ಷೆಯಲ್ಲೂ ಸಹ ಸಾಕಷ್ಟು ಭಾಷಾಂತರ ಲೋಪಗಳು ಕಂಡುಬಂದಿದ್ದು, ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ತೊಂದರೆ ಉಂಟಾಗಿದೆ. ಹಾಗಾಗಿ ಪರೀಕ್ಷೆ ಬರೆದಿರುವ ಎಲ್ಲಾ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ದಾವಣಗೆರೆಯ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆ ಸರ್ಕಾರಕ್ಕೆ ಮನವಿ ಸಲ್ಲಿಸಿತು.
ಕಳೆದ ವರ್ಷ ಆಗಸ್ಟ್ 27ರಂದು ಕೆಪಿಎಸ್ಸಿ ಗೆಜೆಟೆಡ್ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯಲ್ಲಿ ಸಾಕಷ್ಟು ಭಾಷಾಂತರ ತಪ್ಪುಗಳು ಕಂಡುಬಂದ ಹಿನ್ನೆಲೆ ಡಿಸೆಂಬರ್ 29ಕ್ಕೆ ಮರು ಪರೀಕ್ಷೆ ನಡೆಸಲಾಗಿತ್ತು. ಈ ಪರೀಕ್ಷೆಯಲ್ಲಿ ಕೂಡ ಸಾಕಷ್ಟು ಭಾಷಾಂತರ ತಪ್ಪುಗಳು ಕಂಡುಬಂದಿದ್ದು, ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಅವಕಾಶ ವಂಚಿತರಾಗಿದ್ದಾರೆ. ಈ ಕೂಡಲೇ ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆಗೆ ಅವಕಾಶ ನೀಡಬೇಕೆಂದು ವೇದಿಕೆ ಆಗ್ರಹಿಸಿತು.
ಮನವಿ ಸಲ್ಲಿಸಿ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಕೆ ಜಿ ಯಲ್ಲಪ್ಪ, “ಕಳೆದ ಬಾರಿ ಇದೇ ರೀತಿ ಭಾಷಾಂತರದ ಲೋಪ ದೋಷಗಳಿಂದ ಮರು ಪರೀಕ್ಷೆಗೆ ಅವಕಾಶ ನೀಡಲಾಗಿತ್ತು. ಈ ಬಾರಿ ಕೂಡ ಸರಿಯಾದ ಭಾಷಾ ತಜ್ಞರಿಂದ ಭಾಷಾಂತರ ಮಾಡಿಸದೇ ಮತ್ತೆ ತಪ್ಪುಗಳು ಕಂಡುಬಂದಿವೆ. ಇದರಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಅಂಕಗಳು ಕಡಿಮೆಯಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಉತ್ತರ ಬರೆದ ಅಭ್ಯರ್ಥಿಗಳಿಗೆ ಹೆಚ್ಚಿನ ಅಂಕ ದೊರೆತು ಹೆಚ್ಚಿನ ಅವಕಾಶಗಳು ಸಿಗುತ್ತದೆ. ಇದೇ ರೀತಿ 2010, 2014, 2015 ಮತ್ತು 2017ನೇ ಸಾಲಿನಲ್ಲಿ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿ ಇಂಗ್ಲಿಷ್ ನಲ್ಲಿ ಉತ್ತರಿಸಿದ ಅಭ್ಯರ್ಥಿಗಳೇ ಹೆಚ್ಚು ಆಯ್ಕೆ ಆಗಿರುವುದು ಕನ್ನಡಿಗರಿಗಾದ ಅನ್ಯಾಯ. ಪರೀಕ್ಷೆ ಬರೆದ ಎಲ್ಲಾ ಅಭ್ಯರ್ಥಿಗಳಿಗೂ ಮುಖ್ಯ ಪರೀಕ್ಷೆಗೆ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
”ಬೆಂಗಳೂರು ವಿ ವಿ ಕನ್ನಡ ಅಧ್ಯಯನ ಕೇಂದ್ರ ಡಿ. 29ರಂದು ನಡೆದಿರುವ ಪರೀಕ್ಷೆಯಲ್ಲಿ ಶೇ.45 ರಿಂದ 50ರಷ್ಟು ಲೋಪ ದೋಷಗಳನ್ನು ಗುರುತಿಸಿದೆ. ಅದರಲ್ಲಿ 29 ಗಂಭೀರವಾದ ದೋಷಗಳಿವೆ ಎಂದು ಪರಿಗಣಿಸಿದೆ. ಇಂಗ್ಲಿಷ್ ಪ್ರಶ್ನೆ ಮತ್ತು ಕನ್ನಡ ಪ್ರಶ್ನೆಯಲ್ಲಿ ಅರ್ಥದ ವ್ಯತ್ಯಾಸವಿದೆ. ಭಾಷಾಂತರವನ್ನು ಕನ್ನಡದ ವಿಷಯ ತಜ್ಞರಿಂದ ಮಾಡಿಸಿದರೆ ಇಷ್ಟೊಂದು ತಪ್ಪು ಆಗುತ್ತಿರಲಿಲ್ಲ. ಬದಲಾಗಿ ಸೀಮಿತ ಭಾಷೆಯ ಜ್ಞಾನ ಇರುವವರು ಅನುವಾದಿಸಿದಂತಿದೆ. ವಾಕ್ಯ ರಚನೆಯಲ್ಲಿ ತಪ್ಪುಗಳಿವೆ. ಕೆಲವು ವಾಕ್ಯಗಳ ರಚನೆಯೇ ಸರಿಯಾಗಿಲ್ಲ. ಈ ರೀತಿ ಆದರೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ಭವಿಷ್ಯದ ಗತಿಯೇನು” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಕನ್ನಡ ನಾಡಿನಲ್ಲಿ ಕನ್ನಡಿಗರ ಸೇವೆ ಮಾಡುವ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರೀಕ್ಷೆಯಲ್ಲಿ ಇಂಗ್ಲಿಷ್‌ನಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿ ಕನ್ನಡಕ್ಕೆ ಭಾಷಾಂತರ ಮಾಡುವ ಬದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ರಚಿಸಿ ಇಂಗ್ಲಿಷ್‌ಗೆ ಭಾಷಾಂತರ ಮಾಡಬೇಕು. ಕನ್ನಡಿಗರು ಅವಕಾಶ ವಂಚಿತರಾಗುವುದನ್ನು ತಡೆಯಬೇಕು” ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ?: ದಾವಣಗೆರೆ | ತುಂಗಭದ್ರಾ ನದಿಗೆ ಹಾರಿ ಶಿಕ್ಷಕಿ ಆತ್ಮಹತ್ಯೆ; ಮೈಕ್ರೋ ಫೈನಾನ್ಸ್ ಕಿರುಕುಳ ಶಂಕೆ
ಈ ಸಂದರ್ಭದಲ್ಲಿ ಮುಖಂಡರಾದ ಬಾಬುರಾವ್, ಮಂಜುನಾಥ ಶೆಟ್ಟಿ, ಅನಿಲ್, ಅಲೋಕ್ ಕೆವೈ, ಎಂ ರವಿ, ಸೈಯದ್ ಶಾಬಾಜ್, ದಯಾನಂದ್ ಎಂ, ಮಂಜುನಾಥ್, ಬಿವಿ ಗಿರೀಶ್, ಖಲಂದರ್, ಸಂತೋಷ್ ದೊಡ್ಮನಿ ಗದಿಗೆಪ್ಪ ಎಂ, ಅಶೋಕ, ರಂಗನಾಥ್ ಕೆಪಿ, ನವೀನ್ ಹಾಗೂ ಇತರರು ಹಾಜರಿದ್ದರು.
