ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಎಪಿಎಂಸಿ ಮತ್ತು ಭೂ ಸುಧಾರಣೆ ಕಾಯ್ದೆ ಮತ್ತು ರೈತರ, ಕಾರ್ಮಿಕರ ಕಾಯ್ದೆಗಳ ತಿದ್ದುಪಡಿಗಳನ್ನು ವಿರೋಧಿಸಿ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚಾ ಮತ್ತು ಜಂಟಿ ಹೋರಾಟ ಸಮಿತಿ ದಾವಣಗೆರೆ ಘಟಕದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಿದ್ದುಪಡಿಗಳನ್ನು ಈ ಕೂಡಲೇ ಹಿಂಪಡೆಯುವಂತೆ ಒತ್ತಾಯಿಸಿತು.
ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಅಖಿಲ ಭಾರತ ಸಂಯುಕ್ತ ಕಿಸಾನ್ ಮೋರ್ಚ ಮತ್ತು ಜಂಟಿ ಹೋರಾಟ ಸಮಿತಿಯ ಕಾರ್ಯಕರ್ತರು, ಮುಖಂಡರು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ರೈತ ಹೋರಾಟಗಾರರು, ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಹಳೆಯ ನಿಯಮಗಳಿಗೆ ತಿಲಾಂಜಲಿ ಇಟ್ಟು ರೈತರ ಬದುಕನ್ನು ಅವರ ಸ್ವಾತಂತ್ರ್ಯವನ್ನು ಕಸಿಯುವ ಕೆಲಸವನ್ನು ಸರ್ಕಾರಗಳು ಮಾಡುತ್ತಿವೆ. ಈ ಕೂಡಲೇ ಇದನ್ನು ಹಿಂಪಡೆಯಬೇಕು. ಕಾರ್ಮಿಕರ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಬಿಲ್‌ಗಳನ್ನಾಗಿಸಿದ್ದು ಇವುಗಳು ಕಾರ್ಮಿಕರ ಶೋಷಣೆಗೆ ಕಾರಣವಾಗಿವೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತವೆ. ಹಾಗಾಗಿ ಈ ಕೂಡಲೇ ತಿದ್ದುಪಡಿಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ನಾಗಮಂಗಲ ಗಲಭೆ ಪ್ರಕರಣ | ಬಂಧನಕ್ಕೆ ಹೆದರಿ ಗ್ರಾಮ ತೊರೆದಿದ್ದ ಯುವಕ ‘ಬ್ರೈನ್ ಸ್ಟ್ರೋಕ್’ನಿಂದ ಸಾವು ವದಂತಿ; ಪೊಲೀಸರ ಸ್ಪಷ್ಟನೆ
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರುಗಳಾದ ಚಂದ್ರು ಅವರಗೆರೆ, ಉಮೇಶ್ ಆವರಗೆರೆ, ಲಕ್ಷ್ಮಣ್ ವಾಸು ಅವರಗೆರೆ, ಐರಣಿ ಚಂದ್ರು, ಸತೀಶ್ ಅರವಿಂದ್, ಶಿವಕುಮಾರ್, ರಫಿಕ್ಅಹ್ಮದ್ ಇನ್ನಿತರ ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.
