ಹೊರಗುತ್ತಿಗೆ ಏಜೆನ್ಸಿಯವರು ಮೂರು ತಿಂಗಳಾದರೂ ವಾಹನ ಚಾಲಕರಿಗೆ ವೇತನ ನೀಡಿಲ್ಲ. ಆದ್ದರಿಂದ, ಏಜೆನ್ಸಿಗಳನ್ನು ರದ್ದುಪಡಿಸಿ ಪಾಲಿಕೆಯಿಂದ ವೇತನ ಪಾವತಿ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ವಾಹನ ಚಾಲಕರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಪಾಲಿಕೆ, ನಗರಸಭೆ, ಪುರಸಭೆ, ಪ.ಪಂ ಹೊರಗುತ್ತಿಗೆ ನೌಕರರ ಸಂಘ ಹಾಗೂ ಮಹಾನಗರ ಪಾಲಿಕೆಯ ಹೊರಗುತ್ತಿಗೆ ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರ ಸಂಘದ ಸದಸ್ಯರು ದಾವಣಗೆರೆ ಮಹಾನಗರ ಪಾಲಿಕೆ ಆವರಣದಲ್ಲಿ ಪ್ರತಿಭಟಿಸಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್. ದುಗ್ಗೇಶ್ ಮಾತನಾಡಿ, ಮಹಾನಗರ ಪಾಲಿಕೆಯ ಕಸ ಸಾಗಾಣಿಕೆ, ಒಳಚರಂಡಿ ಹಾಗೂ ಇತರ ವಿಭಾಗದಲ್ಲಿ ಸುಮಾರು ವರ್ಷಗಳಿಂದ ಹೊರಗುತ್ತಿಗೆ ಏಜೆನ್ಸಿಗಳ ಮೂಲಕ ಚಾಲಕರಾಗಿ ನಾವುಗಳು ಸೇವೆ ಸಲ್ಲಿಸುತ್ತಿದ್ದು, ಇದುವರೆಗೂ ಏಜೆನ್ಸಿಗಳ ಮೂಲಕ ಪ್ರತೀ ತಿಂಗಳು ವೇತನವನ್ನು ಪಡೆಯುತ್ತಿದ್ದೇವು. ಆದರೆ, ಕಳೆದ 2023ರ ಅಕ್ಟೋಬರ್ ತಿಂಗಳಿಂದ ಟೆಂಡರ್ ಮೂಲಕ ಏಜೆನ್ಸಿ ಬದಲಾವಣೆಯಾಗಿದ್ದು, ಆದರ್ಶ ಎಂಟರ್ ಪ್ರೈಸಸ್ ಹುಬ್ಬಳ್ಳಿ ಇವರಿಗೆ ಟೆಂಡರ್ ನೀಡಲಾಗಿದೆ.
ಆದರೆ, ಇವರು ಈ ಹಿಂದೆ ಹುಬ್ಬಳ್ಳಿ ಪಾಲಿಕೆಯಲ್ಲಿಯೂ ಚಾಲಕರುಗಳಿಗೆ ವೇತನ ನೀಡುವುದರಲ್ಲಿ ಸತಾಯಿಸುತ್ತಿರುವುದಾಗಿ ತಿಳಿದುಬಂದಿದ್ದು, ಟೆಂಡರ್ ನೀಡದಂತೆ ನಾವು ಈ ಹಿಂದೆ ಟೆಂಡರ್ ಸಮಯದಲ್ಲಿಯೇ ಮನವಿ ನೀಡಿದ್ದೆವು, ಆದರ್ಶ ಎಂಟರ್‌ಪ್ರೈಸಸ್ ಹುಬ್ಬಳ್ಳಿ ಏಜೆನ್ಸಿಯವರು ಆರಂಭದಲ್ಲಿಯೇ ಅಕ್ಟೋಬರ್ 2023ರ ವೇತನವನ್ನು ಕೊಡುವಲ್ಲಿ ಸತಾಯಿಸಿ, ಪಾಲಿಕೆಯಿಂದ ನೀಡಿದ ಮೇಲೆ ಪಾವತಿಸುತ್ತೇನೆ ಎಂದಿದ್ದಾರೆ. ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ ಎಂದರು.
ಏಜೆನ್ಸಿಯವರು ನಮ್ಮ ದೂರವಾಣಿ ಕರೆಯನ್ನು ಸಹ ಸ್ವೀಕರಿಸುತ್ತಿಲ್ಲ. ಇದರಿಂದ ನಮ್ಮ ಸ್ಥಿತಿ ಅತಂತ್ರವಾಗಿದ್ದು, ಕುಟುಂಬ ನಿಭಾಯಿಸುವುದು ಕಷ್ಟವಾಗಿದೆ. ಮೂರು ತಿಂಗಳ ವೇತನ ನೀಡದೇ ಸತಾಯಿಸುತ್ತಿರುವ ಆದರ್ಶ ಎಂಟರ್‌ಪ್ರೈಸಸ್, ಹುಬ್ಬಳ್ಳಿ ಏಜೆನ್ಸಿಯವರ ಟೆಂಡರ್ ರದ್ದುಪಡಿಸಿ ಪಾಲಿಕೆಯಿಂದಲೇ ವೇತನ ನೀಡಿ. ಇಲ್ಲವೇ ಸ್ಥಳೀಯ ಏಜೆನ್ಸಿಗಳಿಗೆ ಟೆಂಡರ್ ನೀಡುವಂತೆ ಪ್ರತಿಭಟನಾನಿರತರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಎಂ.ವೀರೇಶ್, ಕಿರಣ್ ಕುಮಾರ್, ಎಚ್.ಎಂ. ಪ್ರಭಾಕರ್, ಸಂತೋಷ್, ಪ್ರಕಾಶ್, ಕೊಟ್ರೇಶ್, ಸಿದ್ದಲಿಂಗೇಶ್ವರ್, ಚಿದಾನಂದ, ಮೈಲಾರಿ, ನವೀನ್ ಮತ್ತಿತರರ ಕಾರ್ಮಿಕರು ಹಾಜರಿದ್ದರು.