ಕನ್ನಡ ಹೋರಾಟಗಾರರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿ ಜೈ ಕರುನಾಡ ವೇದಿಕೆ ಮತ್ತು ಕರ್ನಾಟಕ ನವ ನಿರ್ಮಾಣ ಸೇನೆ ಕಾರ್ಯಕರ್ತರು ದಾವಣಗೆರೆ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಕನ್ನಡಪರ ಹೋರಾಟಗಾರರು, ಕಳೆದ ಡಿ.27ರಂದು ಬೆಂಗಳೂರಿನಲ್ಲಿ ಇಂಗ್ಲಿಷ್ ಫಲಕಗಳನ್ನು ತೆರವುಗೊಳಿಸಲು ಒತ್ತಾಯಿಸಿ ಕನ್ನಡ ಪರ ಸಂಘಟನೆಗಳು ಆಂಗ್ಲ ಫಲಕಗಳಿಗೆ ಮಸಿ ಬಳಿಯಲು ಪ್ರಯತ್ನಿಸಿದಾಗ, ಬೆಂಗಳೂರಿನ ಪೊಲೀಸರು ಕನ್ನಡ ಪರ ಸಂಘಟನೆಗಳ ಹೋರಾಟಗಾರರನ್ನು ಬಂಧಿಸಿದ್ದಾರೆ.
ಇದು ಖಂಡನೀಯ ಕನ್ನಡದ ನೆಲ, ಜಲ, ಭಾಷೆ, ಗಡಿ ಸಂಸ್ಕೃತಿಗಾಗಿ ಹೋರಾಟ ಮಾಡುತ್ತಿರುವ ಕನ್ನಡಿಗರನ್ನು ಏಕಾಏಕಿ ಬಂಧಿಸಿರುವುದು ಸರಿಯಲ್ಲ. ಈ ಕೂಡಲೇ ಕನ್ನಡ ಪರ ಸಂಘಟನೆಗಳ ಹೋರಾಟಗಾರರನ್ನು ಬಿಡುಗಡೆಗೊಳಿಸ ಬೇಕೆಂದು ಆಗ್ರಹಿಸಿದರು.
ನಂತರ, ಜಯದೇವ ವೃತ್ತದಿಂದ ಉಪ ವಿಭಾಗಾಧಿಕಾರಿಗಳ ಕಛೇರಿಯವರೆಗೆ ಪ್ರತಿಭಟನಾ ಮೆರವಣಿಗೆ ಮುಖಾಂತರ ತೆರಳಿ ಉಪ ವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ, ಬಂಧನದಲ್ಲಿರುವ ಕನ್ನಡಪರ ಹೋರಾಟಗಾರರನ್ನು ಕೂಡಲೇ ಬಿಡುಗಡೆಗೊಳಿಸಲು ಸರ್ಕಾರಕ್ಕೆ ಮನವಿ ಮಾಡಿದರು.
ಮತ್ತೊಂದು ಪ್ರತಿಭಟನೆಯಲ್ಲಿ ಕನ್ನಡೇತರ ನಾಮಫಲಕ ತೆರವಿಗೆ ಒತ್ತಾಯಿಸಿ ಹೋರಾಟ ನಡೆಸುತ್ತಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಜನೇವರಿ 2ರಂದು ದಾವಣಗೆರೆಯ ಜಯದೇವ ವೃತ್ತದಲ್ಲಿ ಬೆಳಗ್ಗೆ 8ಗಂಟೆಯಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕನ್ನಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಟಿ. ಶಿವಕುಮಾರ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡಕ್ಕಾಗಿ ಹೋರಾಡಿದ ಹೋರಾಟಗಾರರನ್ನು ಬಂಧಿಸಿ ಜೈಲಿನಲ್ಲಿಟ್ಟಿರುವುದು ತಪ್ಪು. ಆಂಗ್ಲ ಫಲಕ ತೆಗೆಯಲು ಹೇಳಿದ ಕನ್ನಡಪರ ಹೋರಾಟಗಾರರನ್ನು ಅಪರಾಧಿಗಳಂತೆ ಬಿಂಬಿಸಬಾರದು ಎಂದರು. ನಾಡು-ನುಡಿ, ಜಲಕ್ಕಾಗಿ ಹೋರಾಟ ಮಾಡುವ ಕನ್ನಡದ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರಾಜೇಂದ್ರ ಬಂಗೇರ, ಕೆ.ಎನ್. ವೆಂಕಟೇಶ್, ನಾಗೇಂದ್ರ ಬಂಡೀಕರ್, ಕೆ.ಜಿ ರಾಮೇಗೌಡ, ಕೆ.ಟಿ. ಗೋಪಾಲಗೌಡ, ಎಸ್.ಜಿ. ಸೋಮಶೇಖರ್, ಐಗೂರು ಸುರೇಶ್, ರುದ್ರೇಶ್, ಶುಭಮಂಗಳ, ಟಿ. ಮಂಜುನಾಥ ಗೌಡ, ಶೇರ್ ಅಲಿ, ನಾರಾಯಣ, ಅರುಣ್ ಕುಮಾರ್, ಗಿರೀಶ್, ಸಮೀರ್, ಮೋಹನ್ ಸೇರಿದಂತೆ ಅನೇಕರಿದ್ದರು.