ಸ್ಮಾರ್ಟ್ ಸಿಟಿ ರಿಂಗ್ ರೋಡ್‌ಗಾಗಿ ನಮ್ಮ ಮನೆಗಳನ್ನು ವಶಪಡಿಸಿಕೊಂಡು, ನಮ್ಮನ್ನು ಒಕ್ಕಲೆಬ್ಬಿಸಿದರು. ಒಂದು ತಿಂಗಳಲ್ಲಿ ಸಂಪೂರ್ಣವಾಗಿ ಪುನರ್ವಸತಿ ಕಲ್ಪಿಸುವುದಾಗಿ ಹೇಳಿದ್ದರು. ಆದರೆ, ಈಗ ಆರು ತಿಂಗಳು ಕಳೆದಿವೆ. ನಮಗೆ ಯಾವುದೇ ಪುನರ್ವಸತಿ, ಮೂಲ ಸೌಕರ್ಯ ತೊರೆದಿಲ್ಲ. ಬದುಕು ದುಸ್ತರವಾಗಿದೆ. ಬಿಸಿಲು, ಗಾಳಿ, ಮಳೆಯ ನಡುವೆ ವಿಷಜಂತುಗಳ ಆತಂಕದಲ್ಲಿ ದಿನನಿತ್ಯ ಬದುಕುವುಂತಾಗಿದೆ – ಇದು ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಸ್ತೆಗಾಗಿ ತಮ್ಮ ಮನೆಗಳನ್ನು ಕಳೆದುಕೊಂಡ ರಾಮಕೃಷ್ಣ ಹೆಗಡೆ ನಗರದ ನಿವಾಸಿಗಳ ಗೋಳು.
ದಾವಣಗೆರೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ರಿಂಗ್ ರೋಡ್ ನಿರ್ಮಾಣ ಮಾಡಲಾಗುತ್ತಿದೆ. ಅದಕ್ಕಾಗಿ, ರಾಮಕೃಷ್ಣ ಹೆಗಡೆ ನಗರದಲ್ಲಿ ಹಲವಾರು ಮನೆಗಳ ಭೂಮಿಯನ್ನು ಜಿಲ್ಲಾಡಳಿತ ಮತ್ತು ಸ್ಮಾರ್ಟ್ ಸಿಟಿ ಪ್ರಾಧಿಕಾರ ಸ್ವಾಧೀನಪಡಿಸಿಕೊಂಡಿವೆ. ಅಲ್ಲಿದ್ದ ನಿವಾಸಿಗಳನ್ನು ದೊಡ್ಡಬಾತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಖಾಲಿ ಜಾಗದಲ್ಲಿ ತಾತ್ಕಾಲಿಕ ಶೆಡ್ಡುಗಳಿವೆ ಸ್ಥಳಾಂತರಿಸಿದೆ. ಆದರೆ, ಆ ಶೆಡ್ಡುಗಳಲ್ಲಿ ವಾಸಿಸುತ್ತಿರುವ ಜನರ ಬದುಕು ಈಗ ಮತ್ತಷ್ಟು ದುಸ್ತರವಾಗಿದೆ.
ಕಳೆದ ಆರು ತಿಂಗಳಿಂದ ಅಲ್ಲಿನ ನಿವಾಸಿಗಳು ಈ ಶೆಡ್ಡುಗಳಲ್ಲಿ ವಾಸಿಸುತ್ತಿದ್ದಾರೆ. ಚಳಿ, ಬಿಸಿಲಿನಲ್ಲಿ ಬಳಲಿದ್ದಾರೆ. ವಿಷಜಂತುಗಳ ಹಾವಳಿಯಿಂದ ಹೈರಾಣಾಗಿದ್ದಾರೆ. ಇದೀಗ, ಗಾಳಿ-ಮಳೆಯೂ ಆರಂಭವಾಗಿದ್ದು, ಅಪಾಯದ ಆತಂಕ ಎದುರಾಗಿದೆ. ಇತ್ತೀಚೆಗೆ ಸುರಿದ ಮಳೆ ಮತ್ತು ಬಿರುಗಾಳಿಗೆ ನೂರಕ್ಕೂ ಹೆಚ್ಚು ಶೆಡ್ಡುಗಳು ನಾಶವಾಗಿವೆ. ಬಟ್ಟೆ, ಆಹಾರ ಸಾಮಗ್ರಿಗಳು ಹಾಳಾಗಿವೆ. ಹಲವು ಮನೆಗಳ ಮೇಲೆ ವಿದ್ಯುತ್ ಕಂಬಗಳು ಉರುಳಿವೆ. ಅದೃಷ್ಟವಶಾತ್ ಯಾವುದೇ ಪಾಣಾಪಾಯವಾಗಿಲ್ಲ. ಜನರು ಬೀದಿಯಲ್ಲಿ ಅಡುಗೆ ಮಾಡಿಕೊಂಡು ತಿನ್ನುವ ಪರಿಸ್ಥಿತಿ ಎದುರಾಗಿದೆ. ಅಲ್ಲಿನ ನಿವಾಸಿಗಳು ದಿನನಿತ್ಯ ಅಧಿಕಾರಿಗಳಿಗೆ ಶಾಪ ಹಾಕುತ್ತಾ, ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.
ತಮ್ಮ ಸಮಸ್ಯೆಯ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಮುಬೀನಾ ಬೀ, “ಊರ ಒಳಗೆ ಇದ್ದ ನಮ್ಮನ್ನು ಯಾರು ಇಲ್ಲದ ಜಾಗದಲ್ಲಿ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಿ ಇಲ್ಲಿಗೆ ಕಳುಹಿಸಿದ್ದಾರೆ. ಇಲ್ಲಿಗೆ ಬಂದು ಆರು ತಿಂಗಳಾಯಿತು. ಚಳಿ, ಬಿಸಿಲಿಗೆ ನಲುಗಿ ಸಾಕಾಗಿದೆ. ಈಗ ಮಳೆ ನಮ್ಮ ಬದುಕು ಕಸಿದಿದೆ. ನಾವು ಕೂಲಿ ಮಾಡಿ ಜೀವನ ಮಾಡುತ್ತಿದ್ದು, ನಮಗೆ ಬಾಡಿಗೆ ಕಟ್ಟಲು ಆಗಲ್ಲ. ಮಳೆಯಿಂದಾಗಿ, ಹಾವು-ಚೇಳುಗಳು ಮನೆಗಳಿಗೆ ನುಗ್ಗುವ ಆತಂಕವಿದೆ. ಇಲ್ಲಿ ಹೇಗೆ ವಾಸಿಸುವುದು” ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
“ರಾತ್ರಿ ಮಳೆಗೆ ವಿದ್ಯುತ್ ಕಂಬ ಬಿದ್ದಿವೆ. ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ. ಕುಡಿಯಲು ಶುದ್ಧ ನೀರಿಲ್ಲ. ಬಯಲೇ ನಮಗೆ ಶೌಚಾಲಯವಾಗಿದೆ. ಏನನ್ನೇ ಕೊಳ್ಳಬೇಕು ಎಂದರೂ 8 ಕಿ.ಮೀ ದೂರ ಹೋಗಬೇಕು. ಮೂಲಭೂತ ಸೌಕರ್ಯ ಇಲ್ಲದ ಜಾಗಕ್ಕೆ ನಮ್ಮನ್ನು ತಂದು ಬಿಟ್ಟು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಕೈ ತೊಳೆದು ಕೊಂಡಿದೆ. ಕೂಡಲೇ ಇಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಬೇಕು” ಎಂದು ಮತ್ತೊಬ್ಬ ನಿವಾಸಿ ರಹೀಂ ಅಬ್ದುಲ್ ಒತ್ತಾಯಿಸಿದ್ದಾರೆ.
“ಮೂಲಭೂತ ಸೌಕರ್ಯ ಇಲ್ಲದ ಜಾಗಕ್ಕೆ ಜನರನ್ನು ಸ್ಥಳಾಂತರಿಸಿದ್ದಾರೆ. ಒಂದು ತಿಂಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ, 6 ತಿಂಗಳಾದರೂ ಯಾವುದೇ ಸೌಕರ್ಯ ಒದಗಿಸಿಲ್ಲ. ಈಗ ಮತ್ತೆ ಜಾಗ ಖಾಲಿ ಮಾಡಿ, ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಿದ ನಂತರ ಬನ್ನಿ ಎನ್ನುತ್ತಿದ್ದಾರೆ. ಈ ಜನರು ಎಲ್ಲಿಗೆ ಹೋಗಬೇಕು.ಅವರನ್ನು ಮತ್ತೆ ಸ್ಥಳಾಂತರಗೊಳಿಸುವುದಾದರೆ, ಈ ನಿರಾಶ್ರಿತರಿಗೆ ಪ್ರತಿ ತಿಂಗಳೂ ಬಾಡಿಗೆ ವೆಚ್ಚ ಪಾವತಿಸಬೇಕು” ಎಂದು ಜನಶಕ್ತಿ ಸಂಘಟನೆಯ ಮುಖಂಡ ಸತೀಶ್ ಅರವಿಂದ್ ಆಗ್ರಹಿಸಿದರು.
“ಜನರ ಸಮಸ್ಯೆಯನ್ನು ಪರಿಹರಿಸಬೇಕು. ನಿವಾಸಿಗಳಿಗೆ ಮೂಲಸೌಕರ್ಯ ಒದಗಿಸಿ ಬದುಕು ಕಟ್ಟಿಕೊಳ್ಳಲು ಸಹಾಯಮಾಡಬೇಕು. ಶೀಘ್ರ ಮೂಲಸೌಕರ್ಯ ಕಲ್ಪಿಸದೆ ಹೋದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆ, ಕಾನೂನು ಹೋರಾಟ ನಡೆಸುತ್ತೇವೆ” ಎಂದು ಎಎಪಿ ಮುಖಂಡ ಆದಿಲ್ ಖಾನ್ ಒತ್ತಾಯಿಸಿದರು.
ಇಲ್ಲಿನ ಜನರ ಸಮಸ್ಯೆಗಳ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ, “ರಿಂಗ್ ರೋಡ್‌ಗಾಗಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ 250ಕ್ಕೂ ಹೆಚ್ಚು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಅವರಿಗೆ ಹಕ್ಕು ಪತ್ರ ನೀಡಲಾಗಿದೆ. 2ನೇ ಹಂತದಲ್ಲಿ 150 ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಲಾಗಿದೆ. ದಿಡೀರ್ ಸುರಿದ ಮಳೆಗೆ ಅಸ್ತವ್ಯಸ್ತ ಉಂಟಾಗಿದ್ದು, ಮನೆಗಳ ನಿರ್ಮಾಣಕ್ಕೆ ವಸತಿ ಇಲಾಖೆಗೆ 23 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಲಾಗಿದೆ. ನೀತಿ ಸಂಹಿತೆ ಇರುವ ಕಾರಣ, ಅನುಮೋದನೆ ವಿಳಂಬವಾಗಿದೆ. ಶ್ರೀಘ್ರವೇ ಸಮಸ್ಯೆಗಳನ್ನು ಪರಿಹರಿಸಿ, ಮನೆ ನಿರ್ಮಾಣ ಕಾಮಗಾರಿ ಪ್ರಾರಂಭಿಸುತ್ತೇವೆ” ಎಂದು ಹೇಳಿದ್ದಾರೆ.